ಮೈತ್ರಿ ಅಭ್ಯರ್ಥಿ ಇನ್ನೊಂದು ವಾರದಲ್ಲಿ ಫೈನಲ್: ನಿಖಿಲ್ ಅಭ್ಯರ್ಥಿ ಮಾಡಲು ಒತ್ತಡ - ಎಚ್ಡಿಕೆ

KannadaprabhaNewsNetwork |  
Published : Oct 13, 2024, 01:10 AM ISTUpdated : Oct 13, 2024, 07:38 AM IST
12ಕೆಆರ್ ಎಂಎನ್ 4.ಜೆಪಿಜಿಬಿಡದಿ ಸಮೀಪದ ಕೇತಗಾನಹಳ್ಳಿಯ ತಮ್ಮ ತೋಟದಲ್ಲಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆಯನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಉದ್ಘಾಟಿಸಿದರು. | Kannada Prabha

ಸಾರಾಂಶ

  ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಗೆ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ದೆಹಲಿ ಮಟ್ಟದಲ್ಲಿ ಬಿಜೆಪಿ ವರಿಷ್ಠರು ಹಾಗೂ ನಾವು ಚರ್ಚಿಸಿ ಇನ್ನೊಂದು ವಾರದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ರಾಮನಗರ: ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಗೆ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ದೆಹಲಿ ಮಟ್ಟದಲ್ಲಿ ಬಿಜೆಪಿ ವರಿಷ್ಠರು ಹಾಗೂ ನಾವು ಚರ್ಚಿಸಿ ಇನ್ನೊಂದು ವಾರದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ದಿನಾಂಕ 4-5 ದಿನಗಳಲ್ಲಿ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಕೂಡಲೇ ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರ ಜತೆ ಚರ್ಚೆ ಮಾಡಿ ಅಭ್ಯರ್ಥಿ ಫೈನಲ್ ಮಾಡುತ್ತೇವೆ ಎಂದರು.

ಪಕ್ಷದ ಸಂಘಟನೆಯೂ ನಮಗೆ ಮುಖ್ಯವಾಗಿದೆ. ಆದ್ದರಿಂದ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಒಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡು ಚುನಾವಣೆ ನಡೆಸುತ್ತೇವೆ. ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ. ಕಳೆದ ಎರಡು ಚುನಾವಣೆಗಳಲ್ಲಿ ಜೆಡಿಎಸ್ ನಿಂದ ಗೆದ್ದಿದ್ದೇವೆ. ಈ ಹಿಂದಿನಿಂದಲೂ ಇದು ಜೆಡಿಎಸ್ ಭದ್ರಕೋಟೆ. 

ನಮ್ಮ ಸಂಘಟನೆಯಲ್ಲಿ ಕೆಲವೊಂದು ಲೋಪದೋಷಗಳಿಂದ ಹಿಂದೆ ಬಿದ್ದಿದ್ದೆವು. 2013ರಲ್ಲೂ ನಮಗೆ ಹೆಚ್ಚಿನ ಮತಗಳು ಬಂದಿದ್ದವು. ಚನ್ನಪಟ್ಟಣದಲ್ಲಿ ಕಾರ್ಯಕರ್ತರೇ ನನ್ನ ಚುನಾವಣೆ ನಡೆಸಿದ್ದಾರೆ. ಸಂಘಟನೆ ದೃಷ್ಟಿಯಿಂದ ಕಾರ್ಯಕರ್ತರೊಂದಿಗೂ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.ಈಗಾಗಲೇ 5 ಜಿಪಂ ಕ್ಷೇತ್ರ ಹಾಗೂ ಟೌನ್ ಭಾಗದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಈ ದಿನ ಪ್ರತಿ ಹಳ್ಳಿಯಿಂದ ಪ್ರಮುಖ ಕಾರ್ಯಕರ್ತರು, ಮುಖಂಡರು ಬಂದಿದ್ದಾರೆ. 

ಚುನಾವಣೆಯಲ್ಲಿ ಯಾವ ರೀತಿ ತಯಾರಿಗಳಾಗಬೇಕು‌. ಅಭ್ಯರ್ಥಿ ಯಾರು ಆಗಬೇಕು ಅನ್ನೋದರ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದೇನೆ.ಜೆಡಿಎಸ್- ಬಿಜೆಪಿ ಎರಡು ಪಕ್ಷಗಳು ಹೊಂದಾಣಿಕೆಯಲ್ಲಿ ಕೆಲಸ ಮಾಡಬೇಕು. ನವೆಂಬರ್ ಒಳಗೆ ಮಹಾರಾಷ್ಟ್ರ ಹಾಗೂ ಜಾರ್ಖಾಂಡ್ ಚುನಾವಣೆ ನಡೆಯಬೇಕಿದೆ. ಅದೇ ಸಮಯದಲ್ಲಿ ಚನ್ನಪಟ್ಟಣ ಉಪ ಚುನಾವಣೆ ಕೂಡ ನಡೆಯಲಿದೆ. ಇನ್ನೂ ಒಂದು ವಾರದಲ್ಲಿ ಚುನಾವಣೆ ಘೋಷಣೆಯಾಗಲಿದೆ ಎಂದು ತಿಳಿಸಿದರು.

ನಿಖಿಲ್ ಅಭ್ಯರ್ಥಿ ಮಾಡಲು ಒತ್ತಡ:

ನಿಖಿಲ್ ಕುಮಾರಸ್ವಾಮಿ ಅವರು ಉಪ ಚುನಾವಣೆಯ ಅಭ್ಯರ್ಥಿ ಆಗಬೇಕು ಎಂಬ ಬಗ್ಗೆ ಕಾರ್ಯಕರ್ತರಿಂದ ಒತ್ತಡ ಇದೆಯಲ್ಲ ಎಂಬ ಪ್ರಶ್ನೆಗೆ ಒತ್ತಡ, ಒತ್ತಾಯ ಇರುವುದು ನಿಜ. ನಿಖಿಲ್ ಕುಮಾರಸ್ವಾಮಿ ನಿಲ್ಲಬೇಕು ಅಂತ ಶೇ.95ರಷ್ಟು ನಾಯಕರು, ಮುಖಂಡರ ಅಭಿಪ್ರಾಯವಿದೆ. ಆದರೆ‌, ನಾವು ಈಗಿರುವ ಸನ್ನಿವೇಶ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕು. ಏನೇನು ಬೆಳವಣಿಗೆಗಳು ಇವೆ ಅಂತ ನೋಡಬೇಕಿದೆ ಎಂದು ಉತ್ತರಿಸಿದರು.ನಿಖಿಲ್ ಅವರನ್ನು ಮಂಡ್ಯದಲ್ಲಿ ‌ನಿಲ್ಲಿಸಿದಾಗ ಎಲ್ಲಾ ‌ಪಕ್ಷಗಳು ಒಂದಾಗಿ ಸೋಲಿಸಿದರು. ಸಂಘಟಿತ ಷಡ್ಯಂತ್ರ ಮಾಡಿ ಸೋಲಿಸಲಾಯಿತು. ನಾನು ಈಗ ಎನ್‌ಡಿಎ ಭಾಗ. ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಯಾರೇ ನಿಂತು ಗೆದ್ದರೂ ಅದು ಎನ್‌ಡಿಎ ಗೆಲುವು, ಆ ಮೂಲಕ ಕಾಂಗ್ರೆಸ್ ವಿರೋಧಿ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೋರಾಟಕ್ಕೆ ನಾವೂ ಕೈಜೋಡಿಸಿದ ಹಾಗಾಗುತ್ತದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರು, ಕಾರ್ಯಕರ್ತರು ಎಲ್ಲರು ಸೇರಿ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿ ಅಂತಿಮ ಮಾಡುತ್ತೇವೆ ಎಂದು ತಿಳಿಸಿದರು.ಪದೇಪದೆ ಭೇಟಿಯಿಂದ ಫಲ ಸಿಗಲ್ಲ:ಚನ್ನಪಟ್ಟಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪದೇಪದೆ ಭೇಟಿ ನೀಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಎಷ್ಟು ಸಲ ಭೇಟಿ ಕೊಟ್ಟರೂ ಉಪಯೋಗ ಇಲ್ಲ. ಅವರು ಈ ಕ್ಷೇತ್ರಕ್ಕೆ ಕೊಟ್ಟ ಕಾಣಿಕೆ ಏನೆಂದು ಜನರಿಗೆ ಗೊತ್ತಿದೆ. ಚುನಾವಣೆ ಬಂದಿದೆ, ಅದಕ್ಕೆ ಪದೇಪದೆ ಬರುತ್ತಿದ್ದಾರೆ ಅಷ್ಟೇ. ಚುನಾವಣೆ ಮುಗಿದ ಮೇಲೆ ಈ ಕಡೆ ತಲೆ ಹಾಕುವುದಿಲ್ಲ ಅವರು ಎಂದು ಕುಮಾರಸ್ವಾಮಿ ಹೇಳಿದರು.

ಮುಖಂಡರು, ಕಾರ್ಯಕರ್ತರ ಜತೆ ಎಚ್ಡಿಕೆ ಸಭೆ

ರಾಮನಗರ:  ಮುಂಬರುವ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಿಡದಿ ಸಮೀಪದ ಕೇತಗಾನಹಳ್ಳಿಯ ತಮ್ಮ ತೋಟದಲ್ಲಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆ ಕರೆದು ಸಮಾಲೋಚನೆ ನಡೆಸಿದರು.

ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸುವುದರ ಜತೆಗೆ ಉಪ ಚುನಾವಣೆಯನ್ನು ಜೆಡಿಎಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಎದುರಿಸಲು ಅನುಸರಿಸಬೇಕಾದ ಕ್ರಮಗಳ ಕುರಿತು ಕುಮಾರಸ್ವಾಮಿ ಸೂಚನೆ ನೀಡಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು ಸೇರಿದಂತೆ ಚನ್ನಪಟ್ಟಣ ಕ್ಷೇತ್ರದ ಎಲ್ಲಾ ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಭರ್ಜರಿ ಬಾಡೂಟ:

ವಿಜಯದಶಮಿ ಹಬ್ಬದಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಎಲ್ಲರಿಗೂ ಬಾಡೂಟದ ಜೊತೆಗೆ ಸಿಹಿ ಊಟದ ವ್ಯವಸ್ಥೆಯನ್ನೂ ಮಾಡಿದ್ದರು. ಸಾವಿರಕ್ಕೂ ಹೆಚ್ಚು ಚನ್ನಪಟ್ಟಣ ಮುಖಂಡರು ಮತ್ತು ಕಾರ್ಯಕರ್ತರು ಬಾಡೂಟ ಸವಿದರು.

ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲ್ತಾರೆ

- ಯಾರೇ ಅಭ್ಯರ್ಥಿಯಾದರು 80 ಸಾವಿರ ಮತಗಳು ಜೆಡಿಎಸ್ ಚಿಹ್ನೆಗಿವೆ: ನಿಖಿಲ್

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವುದೇ ರೀತಿಯಲ್ಲಿ ಲೆಕ್ಕ ಹಾಕಿದರು ಜೆಡಿಎಸ್ ಗೆ 80 ಸಾವಿರ ಮತಗಳು ಬರುತ್ತವೆ. ಹಾಗಾಗಿ ನಿಖಿಲ್ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಬೇಕು ಅಂತೇನಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತ ಸ್ಪರ್ಧೆ ಮಾಡಿದರೂ ಗೆಲ್ಲುತ್ತಾರೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪರ್ಧೆ ಮಾಡುವುದಿಲ್ಲವೆಂದು ಅನೇಕ ಬಾರಿ ಹೇಳಿದ್ದೇನೆ. ನಿನ್ನೆ ಕೂಡ ಬೂತ್ ವಾರು ಸರ್ವೆ ಮಾಡಿಸಿದ್ದೇವೆ. ಹೇಗೆ ಲೆಕ್ಕಾ ಹಾಕಿದರು 80 ಸಾವಿರ ಮತ ನಿರಂತರವಾಗಿ ಜೆಡಿಎಸ್ ಪಕ್ಷಕ್ಕೆ ಬರುತ್ತಿವೆ. ಯಾರೇ ಅಭ್ಯರ್ಥಿ ಆದರೂ ಈ ಮತಗಳು ಪಕ್ಷಕ್ಕೆ ಬರುತ್ತವೆ. ಒಳ್ಳೆಯ ಲೀಡ್ ಬೇಕು ಅಂದರೆ 20 ಸಾವಿರ ಮತಗಳನ್ನು ಮಾತ್ರ ತೆಗೆದುಕೊಳ್ಳಬೇಕು ಅಷ್ಟೇ ಎಂದರು.

ಈ ಬಾರಿ ಉಪಚುನಾವಣೆ ರಾಜ್ಯ ಹಾಗೂ ರಾಷ್ಟದ ಗಮನ ಸೆಳೆದಿದೆ. ಚನ್ನಪಟ್ಟಣ ಕುಮಾರಸ್ವಾಮಿ ಅವರ ಸ್ವಕ್ಷೇತ್ರ. ಚುನಾವಣೆಯಲ್ಲಿ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಿದೆ. ಅಭ್ಯರ್ಥಿ ಆಯ್ಕೆ, ಚುನಾವಣೆ ಜವಾಬ್ದಾರಿ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಅಂತಿಮವಾಗಿ ಎನ್ ಡಿಎ ಪಕ್ಷದ ನಾಯಕರು ಕೂತು ಚರ್ಚೆ ಮಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ