ಬೂದಿದಿಣ್ಣೆ ಜಾಗವನ್ನು ರುದ್ರಭೂಮಿಗೆ ಮೀಸಲಿಡಿ

KannadaprabhaNewsNetwork | Published : Apr 23, 2025 12:33 AM

ಸಾರಾಂಶ

ನಗರದ ಕೋಟೆ ಬಡಾವಣೆಯ ಬೂದಿದಿಣ್ಣೆ ಸ್ಮಶಾನದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಲೇಔಟ್ ನಿರ್ಮಾಣ ಮಾಡಲು ನೂರಾರು ವರ್ಷಗಳಿಂದ ಹೂಳುತ್ತಿದ್ದ ಹಲವಾರು ಸಮಾಧಿಗಳನ್ನು ಜೆಸಿಬಿಯಿಂದ ನಾಶಮಾಡಿರುವ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಶಿರಾ ನಗರದ ಕೋಟೆ ಬಡಾವಣೆಯ ಬೂದಿದಿಣ್ಣೆ ಸ್ಮಶಾನದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಲೇಔಟ್ ನಿರ್ಮಾಣ ಮಾಡಲು ನೂರಾರು ವರ್ಷಗಳಿಂದ ಹೂಳುತ್ತಿದ್ದ ಹಲವಾರು ಸಮಾಧಿಗಳನ್ನು ಜೆಸಿಬಿಯಿಂದ ನಾಶಮಾಡಿರುವ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಭೇಟಿ ನೀಡಿದರು. ನಂತರ ಮಾತನಾಡಿದ ಅವರು ಶಿರಾ ನಗರಕ್ಕೆ ಹೊಂದಿಕೊಂಡಂತೆ ಇರುವ ಕೋಟೆಯ ಬೂದಿದಿಣ್ಣೆ ಜಾಗದಲ್ಲಿ ನೂರಾರು ವರ್ಷಗಳಿಂದ ಜಾತ್ಯತೀತವಾಗಿ ನಮ್ಮ ಹಿಂದುಗಳು ಮೃತಪಟ್ಟ ಸಂದರ್ಭಗಳಲ್ಲಿ ಇದೇ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡುವಂಥ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಇದ್ದಕ್ಕಿದ್ದಂತೆ ಯಾರೋ ಖಾಸಗಿ ವ್ಯಕ್ತಿಗಳು ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅಥವಾ ಬೇರೆ ಮಾರ್ಗದಿಂದ ಬಂದು ಇಲ್ಲಿ ಇರುವ ನೂರಾರು ಸಮಾಧಿಗಳನ್ನು ನೆಲಸಮ ಮಾಡಿ ಕ್ರೌರ್ಯ ಎಸಗಿದ್ದಾರೆ. ಹೂತಿರುವ ಹೆಣಗಳನ್ನು ಎಳೆದಾಡಿ, ಅದರ ಅಂಗಾಂಗಗಳನ್ನು ಬೇರ್ಪಡಿಸುವ ಸ್ಥಿತಿಗೆ ತಂದು, ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಅವಮಾನ್ಯ ಕೃತ್ಯ ಮಾಡಿದ್ದಾರೆ. ಇದಕ್ಕೆ ತಾಲೂಕು ಆಡಳಿತ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ಈ ಊರಿನ ಶಿರಾ ನಗರದ ಸಾರ್ವಜನಿಕರ ಭಾವನಾತ್ಮಕ ಸಂಬಂಧವಿರುವ ಸಮಾಧಿ, ನಮ್ಮ ಹಿಂದೂ ಧರ್ಮದವರಿಗೆ ಹಿರಿಯರ ಸಮಾಧಿ ಎಂದರೆ ಒಂದು ದೇವಸ್ಥಾನವಿದ್ದಂತೆ. ನಾವೆಲ್ಲರೂ ಪೂಜಿಸುವ ಜಾಗ ಇಂತಹ ಜಾಗದಲ್ಲಿ ಇಷ್ಟು ದೊಡ್ಡ ದೌರ್ಜನ್ಯ ನಡೆದಿದೆ. ಇದಕ್ಕೆ ತಾಲೂಕು ಆಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕು. ಹಿಂದೆ ಇದ್ದಂತೆ ಸಮಾಧಿಗಳು ಇತ್ತು ಅದನ್ನ ನೆಲಸಮಾದಿ ಮಾಡಿದ್ದಕ್ಕಾಗಿ ತಾಲೂಕು ಆಡಳಿತ ಸಮಾಧಿ ನಿರ್ಮಿಸಿ ಕೊಡಬೇಕು. ರುದ್ರಭೂಮಿ ಖರೀದಿಸಲು ಸರ್ಕಾರದಲ್ಲಿ ಅವಕಾಶವಿದೆ, ಈ ಜಾಗವನ್ನು ರುದ್ರ ಭೂಮಿಗೆ ಮೀಸಲಿಟ್ಟು, ಇರುವ ಐದು ಎಕರೆ ಭೂಮಿಯ ಜೊತೆ ಇನ್ನೂ ಐದು ಎಕರೆ ಜಾಗವನ್ನು ಸರ್ಕಾರ ತಮ್ಮ ಸ್ವಂತ ಖರ್ಚಿನಲ್ಲಿ ಕೊಂಡು ರುದ್ರ ಭೂಮಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು. ಈ ದೌರ್ಜನ್ಯ ನಡೆದು ಸಾರ್ವಜನಿಕರ ಮನಸ್ಸಿಗೆ ಭಾವನಾತ್ಮಕವಾಗಿ ಧಕ್ಕೆಯಾಗಿದೆ. ಕೂಡಲೆ ಕ್ಷಮೆ ಕೇಳಿ, ಈ ಜಾಗಕ್ಕೆ ರುದ್ರ ಭೂಮಿ ಎಂದು ನಾಮಫಲಕ ಹಾಕಿಸಿ ಯಾವುದೇ ಖಾಸಗಿ ವ್ಯಕ್ತಿಗಳಿಂದ ಜಾಗ ಒಡೆಯದಂತೆ ರಕ್ಷಣೆ ಕೊಡಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ತಹಸೀಲ್ದಾರ್ ಸಚ್ಚಿದಾನಂದ ರವರಿಗೆ, ಡಿವೈಎಸ್ಪಿ ಶೇಖರ್ ರವರಿಗೆ ಹಾಗೂ ಪೊಲೀಸ್ ಇನ್ಸಪೆಕ್ಟರ್ ಮಂಜೇಗೌಡ ರವರಿಗೆ ತಾಕೀತು ಮಾಡಿದರು. ಇಂತಹ ಕೃತ್ಯ ಎಸಗಿರುವ ವ್ಯಕ್ತಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದರೆ ನಾನು ಹಾಗೂ ನಮ್ಮ ಪಕ್ಷದ ಗಣ್ಯರು ಊರಿನ ಸಾರ್ವಜನಿಕರ, ನೊಂದವರ ಪರವಾಗಿ ನಿಂತು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಗಿರಿಧರ್, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಈರಣ್ಣ ಪಟೇಲ್, ನಗರಸಭೆ ಮಾಜಿ ಸದಸ್ಯರಾದ ನಟರಾಜ್ ಸಂತೆಪೇಟೆ, ಗ್ರಾಮ ಪಂಚಾಯತಿ ಸದಸ್ಯರಾದ ಎಂ ಶಿವಲಿಂಗಯ್ಯ, ಮುಖಂಡರಾದ ನಾಗರಾಜು, ಯುವ ಮುಖಂಡರಾದ ದರ್ಶನ್, ಕೃಷ್ಣಪ್ಪ, ಸಂತೋಷ್ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Share this article