ಕನ್ನಡಪ್ರಭ ವಾರ್ತೆ ಬೀದರ್
ರಾಜ್ಯದ ಇತರೆ ವಿಶ್ವವಿದ್ಯಾಲಯಗಳಲ್ಲಿ ಇರುವ ಹಾಗೇ ಬೀದರ್ ವಿಶ್ವವಿದ್ಯಾಲಯದಲ್ಲಿ ಅಲ್ಲಿಯ ಬಿಕಾಂ ಸೇರಿದಂತೆ ಬಿಬಿಎ, ಬಿಎಚ್‌ಎಂ, ಎಂಬಿಎ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ವಿಷಯ ವ್ಯಾಸಂಗಕ್ಕೆ ಇಡುವುದರ ಜೊತೆಗೆ ಅದನ್ನು ಬೋಧಿಸಲು, ಬಿಸಲಾಯಿ ಸಮಿತಿ ಶಿಫಾರಸ್ಸಿನಂತೆ ಅವಕಾಶ ನೀಡಬೇಕೆಂದು ಜಿಲ್ಲೆಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಜಯಕುಮಾರ ಶಿಂಧೆ ಹೇಳಿದರು.ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ವಿಷಯ ಕಡ್ಡಾಯವಾಗಿರುತ್ತದೆ. ಈ ವಿಷಯವನ್ನು ಅರ್ಥಶಾಸ್ತ್ರದ ಅಧ್ಯಾಪಕರೇ ಅಧ್ಯಯನ ಮಾಡಬೇಕು. ಅದರಲ್ಲೂ ಮುಖ್ಯವಾಗಿ ನಿರಂತರ 5 ವರ್ಷಗಳವರೆಗೆ ಅರ್ಥಶಾಸ್ತ್ರದಲ್ಲಿ ಅಧ್ಯಯನ ಮಾಡಿದ ಪರಿಣಿತರೇ ವಾಣಿಜ್ಯ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ಬೋಧಿಸಬೇಕೆಂಬ ನಿಯಮವಿದೆ. ಆದರೆ ಬೀದರ್ ವಿವಿಯಲ್ಲಿ ಬಿಕಾಂ ಪ್ರಥಮ ಸೆಮಿಸ್ಟರ್ ವಾಣಿಜ್ಯ ಕೋರ್ಸ್‌ನಲ್ಲಿ ವಾಣಿಜ್ಯ ಶಾಸ್ತ್ರ ಮಂಡಳಿ ಅಧ್ಯಕ್ಷ ಡಾ. ಶಾಮಕುಮಾರ ಬನಗುಂಡಿ ಹಾಗೂ ವಾಣಿಜ್ಯ ಶಾಸ್ತ್ರದ ಡೀನ್ ಡಾ. ಶರಣಪ್ಪ ಮಲಗೊಂಡ ಅವರು ಅರ್ಥಶಾಸ್ತ್ರದ ವಿಷಯ ಪಠ್ಯಕ್ರಮಕ್ಕೆ ಕಾರ್ಪೋರೇಟ್ ಬಿಜಿನೆಸ್ ಬಿಹೇವಿಯರ್ ಎಂದು ಹೆಸರಿಟ್ಟು ಅರ್ಥಶಾಸ್ತ್ರದ ಅಧ್ಯಾಪಕರಿಗೆ ಕಾರ್ಯಭಾರ ಕೊಡದೆ ತಮ್ಮ ಅಧಿಕಾರದ ದುರುಪಯೋಗ ಮಾಡುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ವಾಣಿಜ್ಯಶಾಸ್ತ್ರ ಕೊರ್ಸ್ ಓದುತ್ತಿರುವ ಬಿಕಾಂ, ಬಿಬಿಎ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರದ ಒಂದು ವಿಷಯ ಕಡ್ಡಾಯವಾಗಿ ಇಟ್ಟಿರುತ್ತಾರೆ. ಹೊಸ ರಾಜ್ಯ ಶಿಕ್ಷಣ ನೀತಿ ಬಂದ ನಂತರ ಬೀದರ್ ವಿಶ್ವವಿದ್ಯಾಲಯ ಮಾತ್ರ ವಾಣಿಜ್ಯ ಕೋರ್ಸ್‌ಳಲ್ಲಿ ಅರ್ಥಶಾಸ್ತ್ರದ ಒಂದು ವಿಷಯ ಕಡ್ಡಾಯವಾಗಿ ಇಡದೆ, ಅರ್ಥಶಾಸ್ತ್ರದ ಪಠ್ಯಕ್ರಮ ತೆಗೆದುಕೊಂಡು ವಾಣಿಜ್ಯಶಾಸ್ತ್ರದ ಅಧ್ಯಾಪಕರಿಂದಲೇ ಬೋಧಿಸಬೇಕೆಂಬ ದುರುದ್ದೇಶದಿಂದ ಈಗಾಗಲೇ ರಚಿಸಿದ ಪಠ್ಯಕ್ರಮವನ್ನು ಬದಲಾವಣೆ ಮಾಡಿಕೊಳ್ಳಲು ಬಿಓಎಸ್ ಅಧ್ಯಕ್ಷರು ಹಾಗೂ ವಾಣಿಜ್ಯಶಾಸ್ತ್ರದ ಡೀನ್ ಸೇರಿ ಕುಲಪತಿಗಳು ಮತ್ತು ಕುಲಸಚಿವರಿಗೆ ಒತ್ತಡ ಹೇರುತ್ತಿರುವುದು ದುರಹಂಕಾರದ ಸಂಗತಿ ಎಂದು ಆರೋಪಿಸಿದರು.ವಿಷಯ ತಿಳಿದ ತಕ್ಷಣ ನಮ್ಮ ಸಂಘವು ಕುಲಸಚಿವ ಮತ್ತು ಕುಲಪತಿಗಳಿಗೆ ಅರ್ಥಶಾಸ್ತ್ರ ವಿಷಯ ಕಡ್ಡಾಯವಾಗಿ ಇಡುವ ಕುರಿತು ಮನವಿ ಸಲ್ಲಿಸಿತ್ತು ಹಾಗೂ ಈಗಾಗಲೇ ಬಿಕಾಂ ವಾಣಿಜ್ಯಶಾಸ್ತ್ರ ಕೋರ್ಸ್‌ನಲ್ಲಿರುವ ಪ್ರಥಮ ಸೆಮಿಸ್ಟಾರ್ ಕಾರ್ಪೋರೇಟ್ ಬಿಜಿನೆಸ್ ಬಿಹೇವಿಯರ್ ಈ ಪತ್ರಿಕೆಯ ಸಂಪೂರ್ಣ ಪಠ್ಯಕ್ರಮ ಅರ್ಥಶಾಸ್ತ್ರದ ವಿಷಯವಾಗಿರುತ್ತದೆ. ನ್ಯಾಯಯುತವಾಗಿ ಈ ವಿಷಯ ಬೋಧಿಸಲು ಅರ್ಥಶಾಸ್ತ್ರ ಅಧ್ಯಾಪಕರಿಗೆ ಅನುಮತಿ ಕೊಡಬೇಕೆಂದು ಕುಲಪತಿಗಳು ಹಾಗೂ ಕುಲಸಚಿವರಿಗೆ ಮನವರಿಕೆ ಮಾಡಲಾಯಿತು.
ಇದಕ್ಕೆ ಸ್ಪಂದಿಸಿದ ಕುಲಸಚಿವ ಹಾಗೂ ಕುಲಪತಿಗಳು 26-08-2024ರಂದು ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರದ ಬಿಓಎಸ್ ಅಧ್ಯಕ್ಷರು ಹಾಗೂ ಸದಸ್ಯರ ಸಭೆ ಕರೆದು ಈ ಕುರಿತು ಪ್ರಸ್ತಾಪಿಸಿದಾಗ ಒಮ್ಮತಕ್ಕೆ ಬಾರದೆ 28-08-2024 ರಂದು ವಿವಿಧ ನಿಕಾಯದ ಡೀನರು ವಾಣಿಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರದ ಪ್ರಾಧ್ಯಾಪಕರ ಸಮಿತಿ ರಚಿಸಿ ಅಧ್ಯಯನ ಮಂಡಳಿಯವರು ಸಲ್ಲಿಸಿರುವ ಪಠ್ಯಕ್ರಮವನ್ನು ಹಾಗೂ ಅರ್ಥಶಾಸ್ತ್ರದ ಪ್ರಾಧ್ಯಾಪಕರು ಸಲ್ಲಿಸಿದ ಮನವಿಯ ಬಗ್ಗೆ ಪರಿಶೀಲಿಸಿ ಎರಡು ದಿವಸದ ಒಳಗಾಗಿ ವರದಿ ನೀಡಲು ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಈ ತಿಂಗಳ 5ರಂದು ಕುಲಪತಿಗಳು ಹಾಗೂ ಕುಲಸಚಿವರಿಗೆ ಈ ವಿಚಾರವಾಗಿ ಮತ್ತೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಬಿಸಲಾಯಿ ವರದಿ ಪ್ರಕಾರ ಅವಕಾಶ ನೀಡಬೇಕು. ಇಲ್ಲವಾದಲ್ಲಿ ವಿ.ವಿ ಮುಂದೆ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಮನೋಜಕುಮಾರ ಕುಲಕರ್ಣಿ, ಸಂಘದ ಗೌರವಾಧ್ಯಕ್ಷ ಲಕ್ಷ್ಮಣ ಕಾಂಬಳೆ, ಉಪಾಧ್ಯಕ್ಷ ಗೋವಿಂದ ಜಾಧವ, ಪ್ರಧಾನ ಕಾರ್ಯದರ್ಶಿ ಡಾ. ಸಚ್ಚಿತಾನಂದ ಮಲ್ಕಾಪುರೆ, ಜಂಟಿ ಕಾರ್ಯದರ್ಶಿ ಡಾ. ಸುನೀಲಕುಮಾರ ಮೂಲಗೆ, ಖಜಾಂಚಿ ಚಂದ್ರಕಾಂತ ನಾರಾಯಣಪುರೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಜೈಭಾರತ ಮಂಗೇಶಕರ್, ಡಾ. ವಿಕಾಸ ಪೋಸ್ತಾರ್, ಅಶ್ವಿನ್ ಚವ್ಹಾಣ್, ವಚನಶ್ರೀ ಸ್ವಾಮಿ, ಪರಮೇಶ್ವರ ಮಾಲಿಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.