ಹೂವು, ಹಣ್ಣು- ಹಂಪಲು, ತರಕಾರಿ ಮಾರಾಟಕ್ಕೆ ಮುಕ್ತ ಅವಕಾಶ ನೀಡುವಂತೆ ಬಜರಂಗ ದಳದಿಂದ ಬುಧವಾರ ನಗರಸಭೆಗೆ ಮನವಿ ನೀಡಲಾಯಿತು.
ದಾಂಡೇಲಿ: ನಗರದಲ್ಲಿ ಹೂವು, ಹಣ್ಣು- ಹಂಪಲು, ತರಕಾರಿ ಮಾರಾಟಕ್ಕೆ ಮುಕ್ತ ಅವಕಾಶ ನೀಡುವಂತೆ ಬಜರಂಗ ದಳದಿಂದ ಬುಧವಾರ ನಗರಸಭೆಗೆ ಮನವಿ ನೀಡಲಾಯಿತು.
ಮನವಿ ನೀಡುವುದಕ್ಕೂ ಮುನ್ನ ಬಜರಂಗ ದಳದ ಜಿಲ್ಲಾ ಸುರಕ್ಷಾ ಪ್ರಮುಖರಾದ ಚಂದ್ರು ಮಾಳಿ, ಬಿಜೆಪಿ ಘಟಕದ ಅಧ್ಯಕ್ಷ ಬುದವಂತಗೌಡ ಪಾಟೀಲ್ ಮಾತನಾಡಿ, ಸರ್ವಧರ್ಮ ಸಮನ್ವಯತೆಯ ನಗರವಾದ ದಾಂಡೇಲಿಯಲ್ಲಿ ಕೆಲದಿನಗಳಿಂದ ಬಡ ರೈತರು, ವ್ಯಾಪಾರಸ್ಥರು, ತರಕಾರಿ ವ್ಯಾಪಾರಸ್ಥರು ಹಾಗೂ ಹಣ್ಣು ಹಂಪಲು ಮಾರಾಟಗಾರರು ವ್ಯಾಪಾರಕ್ಕಾಗಿ ನಗರಕ್ಕೆ ಹಾಗೂ ಸಂಡೇ ಮಾರ್ಕೆಟಿಗೆ ಬಂದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಒಂದೇ ಕೋಮಿಗೆ ಸಂಬಂಧಿಸಿದ ಯುವಕರ ಪಡೆ ಅವರಿಗೆ ಸಂಡೇ ಮಾರ್ಕೆಟಿನಲ್ಲಿ ಮತ್ತು ಜೆ.ಎನ್. ರಸ್ತೆ ಪಕ್ಕದಲ್ಲಿರುವ ಪುಟ್ಪಾತ್ ಮೇಲೆ ಮಾರಾಟಕ್ಕೆ ಅವಕಾಶವನ್ನು ಕೊಡದೇ ಅವರೊಂದಿಗೆ ಜಗಳ ಮಾಡುತ್ತಿರುವುದು ತೀವ್ರ ಖಂಡನಿಯ. ಇಂತಹ ಘಟನೆಗಳು ನಡೆಯಲು ಅವಕಾಶ ನೀಡಬಾರದು. ಎಲ್ಲರಿಗೂ ಮುಕ್ತವಾಗಿ ಮಾರಾಟಕ್ಕೆ ಅವಕಾಶ ನೀಡಬೇಕು. ಒಂದು ವೇಳೆ ಪುಟ್ಪಾತ್ ನಲ್ಲಿ ಯಾರಿಗೂ ಮಾರಾಟಕ್ಕೆ ಅವಕಾಶ ನೀಡದಿದ್ದ ಪಕ್ಷದಲ್ಲಿ ಅವರೆಲ್ಲರಿಗೂ ನಗರಸಭೆಯ ಸಂಡೆ ಮಾರ್ಕೆಟ್ ನಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು. ಇನ್ನೂ ಮುಂದೆ ಒಂದೇ ಕೋಮಿಗೆ ಸಂಬಂಧಿಸಿದ ಯುವಕರ ಪಡೆ ಬಡ ಬೀದಿಬದಿ ವ್ಯಾಪಾರಸ್ಥರ ಮೇಲೆ ಜಗಳ ಹಾಗೂ ದಬ್ಬಾಳಿಕೆ ನಡೆಸಿದರೆ ಸಹಿಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ನಗರಸಭೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಗರಸಭೆಯ ವ್ಯವಸ್ಥಾಪಕ ಪರಶುರಾಮ ಶಿಂದೆ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ನಾಗೇಂದ್ರ ದೊಡ್ಮನಿಗೆ ಮನವಿ ನೀಡಲಾಯಿತು.
ಪ್ರಮುಖರಾದ ಲಿಂಗಯ್ಯಾ ಪೂಜಾರ, ಸುಧಾಕರ ರೆಡ್ಡಿ, ಚಂದ್ರಕಾಂತ ಕ್ಷೀರಸಾಗರ, ನಗರಸಭಾ ಸದಸ್ಯ ದಶರಥ ಬಂಡಿವಡ್ಡರ, ಬಜರಂಗದಳದ ನಗರ ಸಂಚಾಲಕ ನಾಗರಾಜ ಅನಂತಪುರ, ಪ್ರಶಾಂತ ಬಸೂರ್ತೆಕರ, ಮಿಥುನ ನಾಯಕ, ಸಂತೋಷ ಬುಲಬುಲೆ, ನಿಂಗರಾಜ ಮೊದಗಿ, ಪುನೀತ ನಾಯಕ, ಸಂದೀಫ ನಾಯ್ಕ, ವಿಜಯ ಮಿರಾಶಿ, ಮಂಜು ವಿಜಯನಗರ, ಮಂಜುನಾಥ ಶಟ್ಟಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.