ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರತ ಚುನಾವಣಾ ಆಯೋಗ ಜ.1 ಅನ್ನು ಅರ್ಹತಾ ದಿನಾಂಕವಾಗಿ ನಿಗದಿಪಡಿಸಿಕೊಂಡು ‘ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯ’ ಕೈಗೊಳ್ಳಲು ವೇಳಾಪಟ್ಟಿ ಪ್ರಕಟಿಸಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದ್ದಾರೆ.ನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರ ಜೊತೆ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಅ. 29 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ನ.28 ರ ವರೆಗೆ ಸರಿಪಡಿಸಿಕೊಳ್ಳಲು/ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ನ.9, 10, 23 ಮತ್ತು 24 ರಂದು ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ವಿಶೇಷ ಅಭಿಯಾನ ನಡೆಯಲಿದೆ ಎಂದು ವಿವರಿಸಿದರು.ಡಿ.24 ರಂದು ಮನವಿ/ ಆಕ್ಷೇಪಣೆಗಳ ಸರಿಪಡಿಸುವ ಕಾರ್ಯ ನಡೆಯಲಿದೆ. 2025 ರ ಜ.1 ರಂದು ಅಂತಿಮ ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ನಡೆಯಲಿದೆ. 2025 ಜ.6 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಈ ಸಂಬಂಧ ತಮ್ಮ ತಮ್ಮ ಹಂತದಲ್ಲಿ ಮಾಹಿತಿ ನೀಡುವಂತೆ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಕೋರಿದರು.
ಮತಗಟ್ಟೆ ಹೆಚ್ಚಳ:ಈ ಬಾರಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 2 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ 4 ಮತಗಟ್ಟೆಗಳು ಒಟ್ಟು 6 ಮತಗಟ್ಟೆಗಳು ಹೆಚ್ಚಳವಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಗದ್ದೆಹಳ್ಳ, ಗುಮ್ಮನಕೊಲ್ಲಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಾಡಗ ಬಾನಂಗಾಲ (ಹುಂಡಿ), ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಶಾಲಪ್ಪ ಮೆಮೋರಿಯಲ್ ಬಳಿಯ ಶಿಶು ವಿಹಾರ ಕೇಂದ್ರ, ಗೋಣಿಕೊಪ್ಪ ರಸ್ತೆ ಹಾಗೂ ಪಂಜರಪೇಟೆಯ ಉರ್ದುಶಾಲೆ ಇಲ್ಲಿ ಹೊಸ ಮತಗಟ್ಟೆಗಳು ಸ್ಥಾಪನೆ ಆಗಿದೆ ಎಂದು ವಿವರಿಸಿದರು.
ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಕೊಡಗು ಜಿಲ್ಲೆಯ 208-ಮಡಿಕೇರಿ ಮತ್ತು 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆಗಳಲ್ಲಿ, ತಾಲೂಕು ಕಚೇರಿಗಳಲ್ಲಿ, ಉಪ ವಿಭಾಗಾಧಿಕಾರಿಗಳ ಕಚೇರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ಅ.29 ರಂದು ಪ್ರಕಟ ಮಾಡಲಾಗಿದ್ದು, ಸಾರ್ವಜನಿಕರು ಮತದಾರರ ಪಟ್ಟಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದರು.ಕರಡು ಮತದಾರರ ಪಟ್ಟಿಯನ್ನು https://ceo.karnataka.gov.in ಮತ್ತು https://kodagu.nic.in website ನಲ್ಲಿಯೂ ಸಹ ಪರಿಶೀಲಿಸುವ ಮೂಲಕ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಮಹಿಳಾ ಮತದಾರರೇ ಅಧಿಕ:
ಅ.29 ರಂದು ಪ್ರಕಟಣೆ ಮಾಡಿದ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 552 ಮತಗಟ್ಟೆಗಳಲ್ಲಿ 4,74,097 ಮತದಾರರು ಇದ್ದಾರೆ. ಇದರಲ್ಲಿ 2,32,041 ಪುರುಷರು, 2,42,041 ಮಹಿಳಾ ಮತದಾರರು ಹಾಗೂ 15 ಇತರ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.ವಿಧಾನಸಭಾ ಕ್ಷೇತ್ರವಾರು ಗಮನಿಸಿದಾಗ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 275 ಮತಗಟ್ಟೆಯಲ್ಲಿ 2,40,247 ಮತದಾರರು ಇದ್ದು, ಇದರಲ್ಲಿ 1,16,787 ಪುರುಷ ಮತದಾರರು, 1,23,452 ಮಹಿಳಾ ಮತದಾರರು ಮತ್ತು 8 ಇತರ ಮತದಾರರು ಇದ್ದಾರೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 277 ಮತಗಟ್ಟೆಗಳಿದ್ದು, 2,33,850 ಮತದಾರರು ಇದ್ದಾರೆ. ಇದರಲ್ಲಿ 1,15,254 ಪುರುಷ ಮತದಾರರು, 1,18,589 ಮಹಿಳಾ ಮತದಾರರು, 7 ಮಂದಿ ಇತರೆ ಮತದಾರರು ಇದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.ಅ.29 ರಿಂದ ನ.28 ರವರೆಗೆ 2025 ರ ಜ.1, 2025 ರ ಏ.1, 2025 ರ ಜು.1 ಮತ್ತು 2025 ರ ಅ.1 ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ, ಯುವತಿಯರು ಮತ್ತು 18 ವರ್ಷ ಮೇಲ್ಪಟ್ಟ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ ಮತದಾರರು ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ-7 ರಲ್ಲಿ ಆಕ್ಷೇಪಣೆ ಅರ್ಜಿಯನ್ನು ವೇಳಾಪಟ್ಟಿ ದಿನಾಂಕದಲ್ಲಿ ಪಡೆದುಕೊಳ್ಳಲಾಗುತ್ತದೆ ಎಂದರು.ತಿದ್ದುಪಡಿ, ವರ್ಗಾವಣೆ ಅವಕಾಶ:
ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-8 ರಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ವಿವರಿಸಿದರು.ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರತಿನಿಧಿ ತೆನ್ನಿರಾ ಮೈನಾ ಮಾತನಾಡಿ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯ ಪ್ರತೀ ಬೂತ್‌ಗಳಿಗೆ ಬಿಎಲ್‌ಎ(ಬೂತ್ ಮಟ್ಟದ ಏಜೆಂಟ್) ಗಳನ್ನು ನಿಯೋಜಿಸಲಾಗಿದ್ದು, ಅವರನ್ನು ಬೂತ್ ಮಟ್ಟದ ಅಧಿಕಾರಿಗಳ ಜೊತೆ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಪ್ರಮುಖ ಸಜಿಲ್ ಕೃಷ್ಣ, ಬಹುಜನ ಸಮಾಜ ಪಕ್ಷದ ಕವಿತಾ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಹಲವು ಮಾಹಿತಿ ನೀಡಿದರು. ಚುನಾವಣಾ ಶಿರಸ್ತೇದಾರ್ ಕೆ.ಜಿ.ಮಧುಕರ, ಅನಿಲ್ ಕುಮಾರ್ ಇದ್ದರು.