ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಕಾನೂನಿಗೆ ದೊರೆತ ಜಯ: ಬೆಲ್ಲದ

KannadaprabhaNewsNetwork | Published : Aug 18, 2024 1:45 AM

ಸಾರಾಂಶ

ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ್ ಅವರು ಒಂದೇ ಒಂದು ನೋಟಿಸ್ ನೀಡದೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದರು. ಆದರೆ, ಇದೀಗ ಸಮರ್ಪಕವಾಗಿ ಸಿದ್ದರಾಮಯ್ಯ ಅವರಿಂದ ಉತ್ತರ ಕೇಳಿದ್ದಾರೆ.

ಹುಬ್ಬಳ್ಳಿ:

ಮುಡಾ ರಾಜ್ಯ ಕಂಡ ಅತ್ಯಂತ ದೊಡ್ಡ ಹಗರಣವಾಗಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಕುಟುಂಬವೇ ಭಾಗಿಯಾಗಿದೆ. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದು ರಾಜ್ಯದ ಕಾನೂನಿಗೆ ದೊರೆತ ಜಯವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ₹4-5 ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ. ಇದರಿಂದ ರಾಜ್ಯದ ಜನರೇ ಆತಂಕ ವ್ಯಕ್ತಪಡಿಸಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು‌ ಎಂದರು‌.

ಸ್ವಾಗತಿಸುವೆ:

ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ್ ಅವರು ಒಂದೇ ಒಂದು ನೋಟಿಸ್ ನೀಡದೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದರು. ಆದರೆ, ಇದೀಗ ಸಮರ್ಪಕವಾಗಿ ಸಿದ್ದರಾಮಯ್ಯ ಅವರಿಂದ ಉತ್ತರ ಕೇಳಿದ್ದಾರೆ. ಅದಕ್ಕಾಗಿ ನೋಟಿಸ್ ಕೊಟ್ಟಿದ್ದಾರೆ. ಆನಂತರ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದನ್ನು ಸ್ವಾಗತಿಸುವೆ ಎಂದರು.

ಸಿದ್ದರಾಮಯ್ಯ ಅವರಿಗೆ ಯಾವುದೇ ನೈತಿಕತೆ ಉಳಿದಿಲ್ಲ. ಅವರು ತಮ್ಮ ಜೀವನವನ್ನು ತೆರೆದ ಪುಸ್ತಕ ಎಂದು ಹೇಳುತ್ತಾರೆ. ಆದರೆ, ಇದೀಗ ಭ್ರಷ್ಟಾಚಾರದ ಆರೋಪವನ್ನು ಸಿದ್ದರಾಮಯ್ಯ ಹೊತ್ತಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ರಾಜ್ಯದ ಜನರು ನೋಡಲು ಇಚ್ಚೆ ಪಡುವುದಿಲ್ಲ. ಹೀಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಸರ್ಕಾರವನ್ನು ಅಸ್ಥಿರಗೊಳಿಸುವುದು, ಬೀಳಿಸುವ ಆಸಕ್ತಿ ಬಿಜೆಪಿಗಿಲ್ಲ. ಕಾಂಗ್ರೆಸ್ ಐದು ವರ್ಷ ಸ್ವಚ್ಛ ಆಡಳಿತವನ್ನು ರಾಜ್ಯದ ಜನರಿಗೆ ನೀಡಲಿ. ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಬಿಜೆಪಿಯಿಂದ ನಿರಂತರ ಹೋರಾಟ ಮುಂದುವರಿಯಲಿದೆ. ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದರು.

ಅಪಸ್ವರವಿಲ್ಲ:

ಬಿಜೆಪಿಯಲ್ಲಿ ಯಾವುದೇ ಅಪಸ್ವರಯಿಲ್ಲ. ಕೆಲವು ವಿಚಾರದಲ್ಲಿ ಅಸಮಾಧಾನ ಇರಬಹುದು. ಆದರೆ, ಹೋರಾಟ ಬಂದಾಗ ನಾವೆಲ್ಲರೂ ಒಂದಾಗಿದ್ದೇವೆ. ನಮ್ಮಲ್ಲಿರುವ ಭಿನ್ನಾಭಿಪ್ರಾಯ ನಾವು ಸರಿಮಾಡಿಕೊಳ್ಳುತ್ತೇವೆ ಎಂದರು.

Share this article