ಶಶಿಕುಮಾರ ಪತಂಗೆ
ಮೀಸಲಾತಿ ಪ್ರಕಟದ ಆದೇಶ ಪ್ರತಿ ವಾಟ್ಸ್‌ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ಈ ಭಾಗದ ಆಕಾಂಕ್ಷಿಗಳು ಗ್ರಾಮದ ಹಿರಿಯರಿಗೆ, ಸ್ನೇಹಿತರಿಗೆ ಕರೆ ಮಾಡಿ ತಮ್ಮ ಮನದಾಸೆ ಹೇಳಿಕೊಳ್ಳುತ್ತ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಜತೆಗೆ ವಾಟ್ಸ್‌ಆ್ಯಪ್ ಸ್ಟೇಟಸ್ ಮೂಲಕವು ಈಗಿನಿಂದಲೇ ತಮ್ಮ ಪ್ರಚಾರ ಶುರು ಮಾಡಿದ್ದಾರೆ.
ಹೊಸ ತಾಲೂಕಿನ ಹುರುಪು: ಈ ಹಿಂದೆ ಧಾರವಾಡ ತಾಲೂಕಿನಲ್ಲಿದ್ದ ಅಳ್ನಾವರವನ್ನು ಹೊಸ ತಾಲೂಕಾಗಿ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ತಾಪಂಗೆ ಚುನಾವಣೆ ಘೋಷಣೆಯಾಗಿದ್ದು, ತಾಲೂಕಿನ ಆಕಾಂಕ್ಷಿಗಳನ್ನು ಉತ್ಸಾಹ ಮೂಡಿಸಿದೆ. ಆದರೆ, ಅದೃಷ್ಟವೆನ್ನುವಂತೆ ಕೇವಲ 14 ಗ್ರಾಮಗಳನ್ನೊಳಗೊಂಡ ಸಣ್ಣ ತಾಲೂಕಿಗೆ ಏಳು ಸ್ಥಾನಗಳನ್ನು ನೀಡಲಾಗಿದೆ. ಅದರಲ್ಲೂ ಹುಲಿಕೇರಿ ಗ್ರಾಮವೊಂದಕ್ಕೆ ಒಂದು ತಾಪಂ ಸ್ಥಾನ ನೀಡಿದ್ದು, ಈ ಕ್ಷೇತ್ರದ ಜನರಲ್ಲಿ ಸಂತಸ ಮೂಡಿಸಿದೆ.ಜಾತಿ ರಾಜಕಾರಣ: ಹಳ್ಳಿಗಳಲ್ಲಿನ ಜನರು ಒಗ್ಗಟ್ಟಿನಿಂದ ಬದುಕುವುದರಿಂದ ಹಳ್ಳಿಗಳು ಭಾರತದ ಸ್ವರ್ಗವೆಂದೇ ಕರೆಯುತ್ತಾರೆ. ಆದರೆ, ಈ ಚುನಾವಣೆ ಘೋಷಣೆಯಾದಾಗಿನಿಂದ ಗ್ರಾಮದ ಸಣ್ಣ-ಪುಟ್ಟ ಜಾತಿ -ಜನಾಂಗದ ಮುಖಂಡರು ತಮ್ಮ ಜಾತಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಅಲ್ಲಿನ ಮುಖಂಡರ ಮನೆಗಳಲ್ಲಿ ಸಣ್ಣದಾಗಿ ಸಭೆಗಳು ನಡೆಯುತ್ತಿವೆ. ಆಕಾಂಕ್ಷಿಗಳ ಸಂಖ್ಯೆಯೂ ಅಧಿಕವಾಗುತ್ತಿರುವುದರಿಂದ ಯಾರಿಗೆ ಬೆಂಬಲ ನೀಡಬೇಕು ಮತ್ತು ಯಾವ ಪಕ್ಷದಿಂದ ಟಿಕೆಟ್ ಪಡೆದುಕೊಳ್ಳಬೇಕೆನ್ನುವುದು ಸಮಾಜದ ಮುಖಂಡರಿಗೆ ತಲೆನೋವಾಗಿದೆ.
ಸಣ್ಣ ತಾಲೂಕು: ಅಳ್ನಾವರ ತಾಲೂಕಿನಲ್ಲಿ 14 ಕಂದಾಯ ಗ್ರಾಮ ಹಾಗೂ ಉಪಗ್ರಾಮಗಳಿದ್ದು, ತಾಲೂಕಿನಲ್ಲಿ ಏಳು ತಾಪಂ ಮತ್ತು ಒಂದು ಜಿಪಂ ಸ್ಥಾನಗಳಿವೆ. ಅಳ್ನಾವರ ಸಣ್ಣ ತಾಲೂಕಾಗಿದ್ದು, ಎಲ್ಲ ತಾಲೂಕಿನಂತೆ ಇಲ್ಲಿಯೂ ಸಮ ಪ್ರಮಾಣದಲ್ಲಿ ಅನುದಾನ ಬಂದು ಸದಸ್ಯರ ಸಲಹೆ-ಸಹಕಾರದಿಂದ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬಹುದಾಗಿದೆ ಎಂದು ತಾಪಂ ಇಒ ಪ್ರಶಾಂತ ತುರಕಾಣಿ ತಿಳಿಸಿದರು.