ಭಂಡಾರದ ಓಕಳಿಯಲ್ಲಿ ಮಿಂದೆದ್ದ ಅಳ್ನಾವರ

KannadaprabhaNewsNetwork |  
Published : Apr 21, 2024, 02:15 AM IST
ಅಳ್ನಾವರ ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರೆಯ ಮೂರನೆ ದಿನದಂದು ದೇವಿಯರ ಹೊನ್ನಾಟ ನಡೆಯಿತು. | Kannada Prabha

ಸಾರಾಂಶ

ಅಳ್ನಾವರದಲ್ಲಿ ನಡೆಯುತ್ತಿರುವ ಗ್ರಾಮದೇವಿಯರ ಜಾತ್ರೆಯ ಮೂರನೇ ದಿನದಂದು ಹೊನ್ನಾಟ ಇದಕ್ಕೆಲ್ಲ ಸಾಕ್ಷಿಯಾಗಿತ್ತು, ಇಡೀ ಪಟ್ಟಣವೇ ಭಂಡಾರದ ಓಕಳಿಯಲ್ಲಿ ಮಿಂದೆದ್ದಿತ್ತು.

ಅಳ್ನಾವರ

ಎತ್ತ ನೋಡಿದರತ್ತ ಭಂಡಾರ, ಉಘೇ ಉಘೇ ದೇವಿ ಎನ್ನುವ ಘೋಷ್ಯವಾಕ್ಯ, ವಾದ್ಯ ಮೇಳಗಳು, ಜೋಗತಿಯರು ಹಿಂಡುಗಟ್ಟಿ ಹೊರಡುವುದು ನೋಡುಗರ ಕಣ್ಮನ ಸೆಳೆಯುವಂತಿತ್ತು ಅಳ್ನಾವರದ ಗ್ರಾಮದೇವಿಯರ ಜಾತ್ರೆ.

ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿಯರ ಜಾತ್ರೆಯ ಮೂರನೇ ದಿನದಂದು ಹೊನ್ನಾಟ ಇದಕ್ಕೆಲ್ಲ ಸಾಕ್ಷಿಯಾಗಿತ್ತು, ಇಡೀ ಪಟ್ಟಣವೇ ಭಂಡಾರದ ಓಕಳಿಯಲ್ಲಿ ಮಿಂದೆದ್ದಿತ್ತು, ಹೊನ್ನಾಟದ ಮೊದಲ ದಿನವಾದ ಶನಿವಾರ ದೇವಿಯನ್ನು ಹೆಗಲ ಮೇಲೆ ಹೊತ್ತು ಪಟ್ಟಣದ ಆಯ್ದ ಬೀದಿಗಳಲ್ಲಿ ಸಂಚರಿಸಲಾಯಿತು. ಪ್ರತಿಯೊಂದು ಗಲ್ಲಿಯ ಮನೆಯ ಮುಂದೆ ಬಣ್ಣದ ರಂಗೋಲಿ, ಹೂ ಹಾಸಿಗೆ ಹಾಕುವ ಮೂಲಕ ದೇವಿಯನ್ನು ಬರಮಾಡಿಕೊಂಡರು. ಜತೆಗೆ ದೇವಿಯ ಮೂರ್ತಿಗಳು ಪುಷ್ಪ ಭಂಡಾರವೃಷ್ಟಿ ಮಾಡಿ ಭಕ್ತಿ ಸಮರ್ಪಿಸಿದರು.ದೇವಿ ವಿಗ್ರಹಗಳ ಜತೆಗೆ ಸಾವಿರಾರು ಭಕ್ತರು ಸಂಚರಿಸಿ ಹೊನ್ನಾಟಕ್ಕೆ ಮೆರಗು ತಂದರು. ಅಳ್ನಾವರ ಪಟ್ಟಣವು ಶನಿವಾರ ಭಕ್ತಿ ಲೋಕದಲ್ಲಿ ಲೀನವಾಗಿತ್ತು. ಈ ಹೊನ್ನಾಟ ಕಾರ್ಯಕ್ರಮವು ಇನ್ನೂ ಎರಡು ದಿನ ಪಟ್ಟಣದಲ್ಲಿ ಜರುಗಲಿದ್ದು ದೇವಿಯರ ಆಗಮನಕ್ಕಾಗಿ ಅಳ್ನಾವರದ ಅರ್ಧಕ್ಕಿಂತಲು ಹೆಚ್ಚು ಭಾಗ ಕಾಯುತ್ತ ಕುಳಿತಿದೆ. ಹೊನ್ನಾಟದ ಮೊದಲ ದಿನವಾದ ಶನಿವಾರ ಬೆಳಗ್ಗೆ ಮಳೆಯ ಸಿಂಚನವಾಯಿತು. ಆದರೆ, ಭಕ್ತರು ಮಳೆ ಲೆಕ್ಕಿಸದೆ ಮಧ್ಯಾಹ್ನದ ವರೆಗೂ ಭಂಡಾರದಲ್ಲಿ ಮಿಂದೆದ್ದರು.

ಹೊನ್ನಾಟ:

ಗ್ರಾಮದೇವಿ ಜಾತ್ರೆ ಎಂದರೆ ಇತರೆ ದೇವತೆಯರ ಜಾತ್ರೆಗಿಂತಲು ತುಸು ವಿಭಿನ್ನ. ಈ ದೇವಿಯರ ಮೂರ್ತಿಗಳನ್ನು ಕಟ್ಟಿಗೆಯಿಂದ ಮಾಡಲಾಗುತ್ತಿದ್ದು ಆಕರ್ಷಣಿಯವಾಗಿ ಬಣ್ಣ ಲೇಪಿಸಿರುತ್ತಾರೆ. ಜಾತ್ರೆಯಲ್ಲಿ ಹೊನ್ನಾಟವೆ ಮುಖ್ಯವಾಗಿದ್ದು ದೇವತೆಯರನ್ನು ಹೊತ್ತುಕೊಂಡು ಭಂಡಾರ ಎಸೆಯುತ್ತ ಓಡಾಡಿಸುತ್ತಾರೆ. ಈ ಬಗೆ ಕಣ್ತುಂಬಿಕೊಳ್ಳಲು ವಿವಿಧ ಊರುಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ.ಪ್ರತಿ ಮನೆ ಮುಂದೆಯೂ ದೇವಿಯ ಉತ್ಸವ ಹೋಗಲಿದೆ. ಅದಕ್ಕಾಗಿ ಜಾತ್ರಾ ಉತ್ಸವ ಕಮಿಟಿಯು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದೆ. ದೇವಿ ಜಾತ್ರೆಯಿಂದ ಪಟ್ಟಣದಲ್ಲಿಯ ಜನರು ಉತ್ಸುಹಕರಾಗಿದ್ದಾರೆ ಎಂದು ಉತ್ಸವ ಸಮಿತಿ ಸದಸ್ಯ ರೂಪೇಶ ಗುಂಡಕಲ್ಲ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ