ಇಳುವರಿ ಕುಸಿತ - ತರಕಾರಿಗಳ ಬೆಲೆ ಗಗನದೆತ್ತರಕ್ಕೇ : ಈರುಳ್ಳಿ ಜೊತೆಗೆ ಟೊಮೆಟೋ ದರವೂ ಹೆಚ್ಚಳ

KannadaprabhaNewsNetwork |  
Published : Sep 24, 2024, 01:46 AM ISTUpdated : Sep 24, 2024, 07:52 AM IST
ONION 3 | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ಈರುಳ್ಳಿ ಮತ್ತು ಟೊಮೆಟೋ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಹಕರು ತತ್ತರಿಸಿ ಹೋಗಿದ್ದಾರೆ. ಇಳುವರಿ ಕುಸಿತ ಮತ್ತು ಮಾರುಕಟ್ಟೆಗೆ ಪೂರೈಕೆ ಕೊರತೆ ಬೆಲೆ ಏರಿಕೆಗೆ ಕಾರಣವಾಗಿದೆ.

 ಬೆಂಗಳೂರು : ದಿನದಿಂದ ದಿನಕ್ಕೆ ಈರುಳ್ಳಿ, ಟೊಮೆಟೋ ಬೆಲೆ ಏರಿಕೆ ಗ್ರಾಹಕರಿಗೆ ಬಿಸಿ ತಟ್ಟುತ್ತಿದೆ. ನಗರದಲ್ಲಿ ಸೋಮವಾರ ಕೆಜಿ ಈರುಳ್ಳಿಗೆ ಗರಿಷ್ಠ ₹65, ಟೊಮೆಟೋ ₹50ಕ್ಕೆ ಮಾರಾಟವಾಗಿದೆ. ಸದ್ಯಕ್ಕೆ ಇಳಿಯುವ ಲಕ್ಷಣ ಕಾಣುತ್ತಿಲ್ಲ.

ಈರುಳ್ಳಿ ಇಳುವರಿ ಕುಸಿತ ಹಾಗೂ ಗುಣಮಟ್ಟದ ಬೆಳೆ ಇಲ್ಲದಿರುವುದು ಹಾಗೂ ಟೊಮೆಟೋ ಅಗತ್ಯದಷ್ಟು ಮಾರುಕಟ್ಟೆಗೆ ಬರದಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ದರ ಇನ್ನೂ ಹೆಚ್ಚಾಗಬಹುದು ಎಂದು ವರ್ತಕರ ಅಭಿಪ್ರಾಯವಾಗಿದೆ.

ಸೋಮವಾರ ಯಶವಂತಪುರಕ್ಕೆ 62868 ಚೀಲ ಹಾಗೂ ದಾಸನಪುರಕ್ಕೆ 1407 ಚೀಲ ಸೇರಿ ಬೆಂಗಳೂರಿಗೆ 64,275 ಚೀಲ ಈರುಳ್ಳಿ ಬಂದಿದೆ. ಮಹಾರಾಷ್ಟ್ರದ ಹಳೇ ಈರುಳ್ಳಿ ಕ್ವಿಂಟಲ್‌ಗೆ ₹4400 ದಿಂದ ₹5,200ಕ್ಕೆ ಮಾರಾಟವಾದರೆ ರಾಜ್ಯದ ಚಿತ್ರದುರ್ಗ, ಕೊಟ್ಟೂರು, ಚಳ್ಳಕೆರೆ, ಹಿರಿಯೂರು ಭಾಗದ ಈರುಳ್ಳಿ ₹1600-₹4500ಕ್ಕೆ ಮಾರಾಟ ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಕೇಜಿಗೆ ₹65 ಇದೆ. ₹100ಕ್ಕೆ ಉತ್ತಮ ಗುಣಮಟ್ಟದ ಮೊದಲ ದರ್ಜೆ ಈರುಳ್ಳಿ ಒಂದೂವರೆ ಕೇಜಿ ಸಿಗುತ್ತಿದೆ. ಒಂದೇ ದಿನದಲ್ಲಿ ಬಳಸಬೇಕಾದ ಗುಣಮಟ್ಟದ ಈರುಳ್ಳಿಯೂ ಕೇಜಿಗೆ ₹35- ₹40 ಆಗಿದೆ. ಮುಂದಿನ ದಿನಗಳಲ್ಲಿ ಈ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಎಪಿಎಂಸಿಯಲ್ಲಿ ಮಹಾರಾಷ್ಟ್ರದ ಹಳೇ ಈರುಳ್ಳಿ ದರ ತೀರಾ ಹೆಚ್ಚಾಗಿರುವ ಕಾರಣ ಪಡೆದುಕೊಳ್ಳುತ್ತಿಲ್ಲ. ಕರ್ನಾಟಕದ ಈರುಳ್ಳಿಗೆ ಸದ್ಯಕ್ಕೆ ಬೇಡಿಕೆ ಇದೆ ಎಂದು ವರ್ತಕ ದಿವಾಕರ್‌ ತಿಳಿಸಿದರು.

ಎನ್‌ಸಿಸಿಎಫ್‌ನಿಂದ ₹35ಕ್ಕೆ ಮಾರಾಟ

ದರ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವು (ಎನ್‌ಸಿಸಿಎಫ್‌) ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಖರೀದಿಸಿದ ಈರುಳ್ಳಿಯನ್ನು ಸೋಮವಾರದಿಂದ ನಗರದಲ್ಲಿ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಪ್ರಾರಂಭಿಸಿದೆ. ಮೊಬೈಲ್‌ ವ್ಯಾನ್‌ಗಳ ಮೂಲಕ ಬಸವೇಶ್ವರನಗರ, ನಂದಿನಿ ಲೇಔಟ್‌, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಮಲ್ಲೇಶ್ವರ ಸೇರಿ ಸುಮಾರು 15 ಸ್ಥಳಗಳಲ್ಲಿ ಎನ್‌ಸಿಸಿಎಫ್‌ ಈರುಳ್ಳಿಯನ್ನು ಮಾರಿದೆ.

ಗುರುವಾರದ ವೇಳೆಗೆ ಸುಮಾರು 50 ವ್ಯಾನ್‌ಗಳಲ್ಲಿ ಮಾರಾಟ ಮಾಡಲಾಗುವುದು ಮುಂದಿನ ವಾರ 112 ವಾಹನದಲ್ಲಿ ರಿಯಾಯಿತಿ ಈರುಳ್ಳಿಯನ್ನು ಮಾರುತ್ತೇವೆ ಎಂದು ಎನ್‌ಸಿಸಿಎಫ್‌ ತಿಳಿಸಿದೆ. ಈ ನಡುವೆ ಮೆಜೆಸ್ಟಿಕ್‌ನಲ್ಲಿ ಎನ್‌ಸಿಸಿಎಫ್‌ನಿಂದ ಮಾರಾಟ ಮಾಡಲಾಗುತ್ತಿದ್ದ ಈರುಳ್ಳಿಯನ್ನು ಗ್ರಾಹಕರ ಬದಲು ಹೋಟೆಲ್‌ಗಳಿಗೆ ಹೆಚ್ಚು ಮಾರಾಟ ಮಾಡಲಾಗಿದೆ ಎಂಬ ದೂರುಗಳು ಕೇಳಿಬಂತು. 

ಟೊಮೆಟೋ ಶತಕದತ್ತ?

ಸೋಮವಾರ ಬೆಂಗಳೂರಿನಲ್ಲಿ 23 ಕೇಜಿ ಕ್ರೇಟ್‌ ನಾಟಿ ಟೊಮೆಟೋ ದರ ₹900 ಹಾಗೂ ಹೈಬ್ರಿಡ್‌ ₹800 ದರವಿತ್ತು. ಹದಿನೈದು ದಿನಗಳ ಹಿಂದೆ ನಾಟಿ ಗರಿಷ್ಠ ₹600, ಹೈಬ್ರಿಡ್‌ ₹400- ₹500 ಬೆಲೆಯಿತ್ತು. ಇದು ಸೋಮವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ ₹50- ₹60ವರೆಗೂ ಮಾರಾಟವಾಗಿದೆ.

ಟೊಮೆಟೋ ಬೆಳೆ ತೀರಾ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆಯತ್ತಲೇ ಸಾಗಬಹುದು. ದೀಪಾವಳಿವರೆಗೂ ಬೆಲೆ ಇಳಿಯಾಗುವ ಲಕ್ಷಣವಿಲ್ಲ. ಟೊಮೆಟೋ ಕೇಜಿಗೆ ನೂರು ರುಪಾಯಿ ಆಗುವ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ ಎಂದು ವರ್ತಕ ಇಬ್ರಾಝ್‌ ಅಭಿಪ್ರಾಯಪಟ್ಟರು.

ಮಹಾರಾಷ್ಟ್ರ, ಗುಜರಾತ್‌ಗಳಲ್ಲೂ ಟೊಮೆಟೋ ಇಲ್ಲ. ಅವರೂ ಕೂಡ ಕರ್ನಾಟಕವನ್ನೇ ಅವಲಂಬಿಸಿದ್ದಾರೆ. ಹಿಂದಿನ ವರ್ಷ ಅಲ್ಲಿನ ರೈತರು ಒಂದಿಷ್ಟು ಹಣ ಮಾಡಿಕೊಂಡಿದ್ದರೆ ರಾಜ್ಯದ ರೈತರಿಗೆ ಅಷ್ಟೊಂದು ಲಾಭ ಆಗಿರಲಿಲ್ಲ. ಆದರೆ, ಈ ಬಾರಿ ಕರ್ನಾಟಕದ ಮಂಡ್ಯ, ಮೈಸೂರು ಭಾಗದ ರೈತರಿಗೆ ಆದಾಯ ಸಿಗುತ್ತಿದೆ ಎಂದು ವರ್ತಕರು ಹೇಳಿದರು.

ಹಿಂದೆ ಒಂದು ಎಕರೆ ಟೊಮೆಟೋ ಬೆಳೆ ನಿರ್ವಹಣೆ ಮಾಡಲು ₹1 ಲಕ್ಷ ₹1.50 ಲಕ್ಷ ಸಾಕಾಗುತ್ತಿತ್ತು. ಆದರೆ, ಈಗ ₹2.75 ರಿಂದ ₹3.50 ಲಕ್ಷ ಬೇಕಾಗುತ್ತಿದೆ. ಹೊಸ ತೋಟ ಇದ್ದರೂ ಎಕರೆಗೆ 1600-1800 ಕ್ರೇಟ್‌ ಟೊಮೆಟೋ ಬೆಳೆ ಸಿಗುತ್ತಿತ್ತು. ಆದರೆ ಈಗ 1100-1200 ಕ್ರೇಟ್‌ ಉತ್ಪನ್ನ ಸಿಗುತ್ತಿದೆ. ಹಳೇ ತೋಟದಿಂದ 600-700 ಕ್ರೇಟ್‌ ಟೊಮೆಟೋ ಸಿಗುತ್ತಿದೆ. ಗಣನೀಯವಾಗಿ ಟೊಮೆಟೋ ಇಳುವರಿ ಕಡಿಮೆ ಆಗಿರುವುದೇ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ರೈತರು.

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ