ದಾಬಸ್‌ಪೇಟೆ: ನಾನು ಶಾಸಕನಾದ ನಂತರ ಕ್ಷೇತ್ರಕ್ಕೆ ತಂದಿರುವ ಅನುದಾನ ಸೇರಿದಂತೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿರೋಧ ಪಕ್ಷಗಳು ಮಾಹಿತಿ ನೀಡಬೇಕೆಂದು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆದೇಶದ ಪ್ರತಿಗಳಿಂದಲೇ ಈಗಾಗಲೇ ಉತ್ತರಿಸಿದ್ದೇನೆ. ಸಂದೇಹವಿದ್ದರೆ ಸಂಬಂಧಪಟ್ಟ ಇಲಾಖೆಗಳಿಗೆ ಆರ್‌ಟಿಐ ಅರ್ಜಿ ಹಾಕಿ ಉತ್ತರ ಪಡೆಯಬಹುದು ಎಂದು ಶಾಸಕ ಶ್ರೀನಿವಾಸ್ ಹೇಳಿದರು.
ತ್ಯಾಮಗೊಂಡ್ಲು ಹೋಬಳಿಯ ತಡಸೀಘಟ್ಟದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಅಭಿನಂದಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಇತ್ತೀಚೆಗೆ ಸಿಎಂ ಹಾಗೂ ಡಿಸಿಎಂ ಅವರು 869 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿರುವುದನ್ನು ಜೀರ್ಣಿಸಿಕೊಳ್ಳಲಾಗದ ವಿರೋಧ ಪಕ್ಷದ ಮುಖಂಡರು. ಈ ಕಾಮಗಾರಿಗಳು ಹಿಂದಿನ ಕಾಲಾವಧಿಯದ್ದು ಎನ್ನುತ್ತಿದ್ದಾರೆ. ಆದೇಶ ಪತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುತ್ತೇನೆ, ಸುಖಾಸುಮ್ಮನೆ ಆರೋಪ ಮಾಡುವವರಿಗೆ ಉತ್ತರ ನೀಡಲಾರೆ ಎಂದರು.ಕ್ಷೇತ್ರವನ್ನು ಐದು ವರ್ಷ ಬಿಜೆಪಿ ಶಾಸಕರು, ಹತ್ತು ವರ್ಷ ಜೆಡಿಎಸ್ ಶಾಸಕರು ಆಳಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಹಾಗೂ ನಾನು ಶಾಸಕನಾದ ನಂತರ 9 ತಿಂಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಗೆ ನಾನು ಸಿದ್ದನಿದ್ದೇನೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸೇರ್ಪಡೆ: ತಡಸೀಘಟ್ಟ ಗ್ರಾಪಂ ಮಾಜಿ ಅಧ್ಯಕ್ಷೆ ನಂಜಮಣಿ ಚಂದ್ರಪ್ಪ, ಮಾಜಿ ಸದಸ್ಯರಾದ ಸಿದ್ದಲಿಂಗಮೂರ್ತಿ, ನರಸಿಂಹಮೂರ್ತಿ, ಲಕ್ಷ್ಮೀನಾರಾಯಣ, ಮಹಿಮಣ್ಣ ಮತ್ತಿತರರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.ಈ ವೇಳೆ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್, ವಕೀಲ ಹನುಮಂತೇಗೌಡ, ಪ್ರಕಾಶ್ ಬಾಬು, ವಾಸುದೇವ್, ಬಮೂಲ್ ನಿರ್ದೇಶಕ ಭಾಸ್ಕರ್, ಗ್ರಾಪಂ ಅಧ್ಯಕ್ಷ ಅಂಜನಮೂರ್ತಿ, ಯುವ ಕಾಂಗ್ರೆಸ್ ಅಧ್ಯಕ್ಷ ಯಶವಂತ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.
ಪೋಟೋ 9:ತ್ಯಾಮಗೊಂಡ್ಲು ಹೋಬಳಿಯ ತಡಸೀಘಟ್ಟದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಮುಖಂಡರನ್ನು ಶಾಸಕ ಶ್ರೀನಿವಾಸ್ ಅಭಿನಂದಿಸಿದರು.