ಭಾರತ ಜಾತ್ಯತೀತ ರಾಷ್ಟ್ರವಾಗಿದ್ದರೂ ಸಾಮಾಜಿಕ ಅಸಮತೋಲನ ಎಲ್ಲೆಡೆ ಸದೃಶ್ಯ

KannadaprabhaNewsNetwork | Published : Jun 24, 2024 1:32 AM

ಸಾರಾಂಶ

ಭಾರತ ಜಾತ್ಯತೀತ ರಾಷ್ಟ್ರವಾಗಿದ್ದರೂ ಸಹ ಸಾಮಾಜಿಕ ಅಸಮತೋಲನ ಎಲ್ಲೆಡೆ ಸದೃಶ್ಯ, ಆದಾಗ್ಯೂ ಜನ್ಮ ನೀಡಿದ ಸಮುದಾಯವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಂಘಟಿತ ಕಾರ್ಯಕ್ರಮಗಳು ಅನಿವಾರ್ಯವಾಗಿವೆ ಎಂದು ಸಾಧು ಲಿಂಗಾಯತ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಯಾಡಗಿ: ಭಾರತ ಜಾತ್ಯತೀತ ರಾಷ್ಟ್ರವಾಗಿದ್ದರೂ ಸಹ ಸಾಮಾಜಿಕ ಅಸಮತೋಲನ ಎಲ್ಲೆಡೆ ಸದೃಶ್ಯ, ಆದಾಗ್ಯೂ ಜನ್ಮ ನೀಡಿದ ಸಮುದಾಯವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಂಘಟಿತ ಕಾರ್ಯಕ್ರಮಗಳು ಅನಿವಾರ್ಯವಾಗಿವೆ ಎಂದು ಸಾಧು ಲಿಂಗಾಯತ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಸಾಧು ಲಿಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ನೌಕರರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧ ಲಿಂಗಾಯತ ಸಮುದಾಯಗಳಲ್ಲಿ ಸಾಧು ಲಿಂಗಾಯತ ಸಮಾಜವು ಕೂಡ ಒಂದಾಗಿದ್ದು, ಸಮಾಜದ ಜನರ ಮೂಲ ವೃತ್ತಿ ಕೃಷಿ ಕಾಯಕವಾಗಿದ್ದರೂ ಇತ್ತೀಚೆಗೆ ಸಮಾಜದ ಜನರು ಕಷ್ಟಪಟ್ಟು ಎಲ್ಲ ಕ್ಷೇತ್ರಗಳನ್ನೂ ತಲುಪುತ್ತಿದ್ದಾರೆ. ಇಲ್ಲಿಯೂ ಬಡವ-ಶ್ರೀಮಂತ ಎಂಬ ವರ್ಗಗಳಿವೆ. ಹೀಗಾಗಿ ಇಲ್ಲಿರುವ ಶ್ರೀಮಂತ ವರ್ಗವು ಸಮುದಾಯದ ಬಡವರಿಗೆ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದರು.

ಸಿರಿಗೆರೆ ಶ್ರೀಗಳ ಮಾರ್ಗದರ್ಶನ ಸಮಾಜಕ್ಕಿದೆ: ಉಚಿತ ಕೊಡುಗೆಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಸಾಧು ಲಿಂಗಾಯತ ಸಮುದಾಯಕ್ಕೆ ಸಿರಿಗೆರೆಯ ತರಳಬಾಳು ಶ್ರೀಗಳ ಕೊಡುಗೆ ಅನನ್ಯ, ರಾಜ್ಯದೆಲ್ಲೆಡೆ ಬಹಳ ಅದ್ಧೂರಿಯಾಗಿ ತರಳಬಾಳು ಹುಣ್ಣಿಮೆ ಮಹೋತ್ಸವಗಳನ್ನು ಆಯೋಜಿಸುತ್ತಾ ಬಂದಿರುವ ಶ್ರೀಗಳು, ಅದರಲ್ಲಿ ಬಂದಂತಹ ಕೆಲವಷ್ಟು ಹಣವನ್ನು ಶಾಲಾ, ಕಾಲೇಜು ಇನ್ನಿತರ ಸಾರ್ವಜನಿಕ ಉಪಯೋಗಿ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಶ್ರೀಗಳ ಮಾರ್ಗದರ್ಶನದಂತೆ ಸಾಧು ಲಿಂಗಾಯತ ಸಮಾಜದ ಜನರು ಶೈಕ್ಷಣಿಕ ಅರ್ಹತೆಯೊಂದಿಗೆ ಕಾಯಕಯೋಗಿಗಳಾಗಬೇಕು ಬಳಿಕ ರಾಜಕೀಯ ಹೊರತಾಗಿ ಸಮಾಜ ಬೆಳವಣಿಗೆ ನಡೆಸುವಂತೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಸಮಾಜದ ಜನರು ಇನ್ನೊಬ್ಬರು ನಮ್ಮನ್ನು ಅನುಕರಿಸುವಂತೆ ಬದುಕಿ ತೋರಿಸಬೇಕಾಗಿದೆ ಎಂದರು.

ಸಮಾಜದ ಜನರು ಸ್ವಾಭಿಮಾನಿಗಳಾಗಿ ಬದುಕುವುದರಲ್ಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ನಾನೇ ಜ್ಞಾನವಂತ ಎಂಬ ನಿರ್ಣಯಕ್ಕೆ ಬರಬಾರದು. ಹೀಗಾಗಿಯೇ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಹಿಂದೆ ಬಿದ್ದಿದ್ದೇವೆ ಎಂದರೆ ತಪ್ಪಾಗಲಾರದು. ಇನ್ನಾದರೂ ನಾವೆಲ್ಲರೂ ಸಂಘಟಿತರಾಗುವ ಮೂಲಕ ನಮ್ಮ ಎಲ್ಲ ರೀತಿಯ ಶಕ್ತಿಯನ್ನು ವೈಯಕ್ತಿಕ ಬೆಳವಣಿಗೆಗಳೊಂದಿಗೆ ಸಮಾಜದ ಬೆಳವಣಿಗೆಗೂ ಪ್ರಯೋಗಿಸೋಣ ಅಂದಾಗ ಮಾತ್ರ ಇನ್ನೊಬ್ಬರು ನಮ್ಮ ಬಗ್ಗೆ ಹಗುರವಾಗಿ ಮಾತನಾಡುವುದು ನಿಲ್ಲಿಸಲಿದ್ದಾರೆ ಎಂದರು.

ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಸಾಧು ಲಿಂಗಾಯತ ಸಮಾಜ ಅತ್ಯಂತ ಶ್ರೇಷ್ಠವಾಗಿದೆ. ಹೀಗಾಗಿ ಸಮಾಜದ ಬಗ್ಗೆ ಎಲ್ಲರೂ ಗೌರವದಿಂದ ನಡೆದುಕೊಳ್ಳಬೇಕು. ಅದರಲ್ಲೂ ಸಮಾಜದ ಯುವ ಕೃಷಿಕರಿಗೆ ವಧುಗಳು ಸಿಗುತ್ತಿಲ್ಲ. ಹೀಗಾಗಿ ಇನ್ನಿತರ ಒಳಪಂಗಡಗಳ ಜೊತೆಗೆ ಸಂಬಂಧಗಳನ್ನು ಬೆಳೆಸುವ ಹಂತಕ್ಕೆ ಪರಿಸ್ಥಿತಿ ತಲುಪಿದೆ. ಸದರಿ ವಿಷಯದ ಕುರಿತು ಸಮಾಜದ ಕೃಷಿಕ ಕುಟುಂಬಗಳು ಗಂಭೀರ ಚಿಂತನೆ ಮಾಡಬೇಕು. ಕಲಿತವರು ಸುಶಿಕ್ಷಿತರು ಕೃಷಿಕರ ಮನೆಯಲ್ಲಿ ಮದುವೆ ಸಂಬಂಧಗಳನ್ನು ಬೆಳೆಸುವ ನಿಟ್ಟಿನಲ್ಲಿ ಮುಂದಾಗುವಂತೆ ಮನವಿ ಮಾಡಿದರು.

ಲಿಂಗಾಯತ ಧರ್ಮದ ಸಂಸ್ಕಾರ ಕೊಡಿ: ತಾಲೂಕು ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ ಮಾತನಾಡಿ, ಸಾಧು ಲಿಂಗಾಯತ ಸಮಾಜದ ಪಾಲಕರು ತಮ್ಮ ಮಕ್ಕಳಿಗೆ ಲಿಂಗಾಯತ ಧರ್ಮದ ಉತ್ತಮ ಸಂಸ್ಕಾರಗಳನ್ನು ಕೊಡಬೇಕು, ಇಲ್ಲದೇ ಹೋದರೆ ಬರುವ ದಿನಗಳಲ್ಲಿ ಹೊಸ ದಾಂಪತ್ಯ ಜೀವನ ಸುಭದ್ರವಾಗಿರಲು ಸಾಧ್ಯವಿಲ್ಲ, ಇತ್ತೀಚೆಗೆ ನವ ದಂಪತಿಗಳು ತೆಗೆದುಕೊಳ್ಳುತ್ತಿರುವ ದುಡುಕಿನ ನಿರ್ಧಾರಗಳು ಬಹಳಷ್ಟು ಕುಟುಂಬಗಳನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿವೆ ಎಂದರು.

ಇದಕ್ಕೂ ಮುನ್ನ ನ್ಯಾಯವಾದಿ ಪ್ರಕಾಶ ಬನ್ನಿಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಅಂಕಗಳನ್ನು ಪಡೆದಂತಹ ಮಕ್ಕಳಿಗೆ ಗೌರವಧನ ನೀಡುವುದರೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಘಟಕದ ಅಧ್ಯಕ್ಷ ಡಾ. ಎಸ್.ಎಸ್. ಬಿದರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಉಳಿವೆಪ್ಪ ಕಬ್ಬೂರ, ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಮುಖಂಡ ಕರಿಯಪ್ಪ ಬಿಳಿಯಣ್ಣನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆ.ಜಿ. ಖಂಡೇಬಾಗೂರ ಸ್ವಾಗತಿಸಿದರು. ಸಿ. ಶಿವಾನಂಪ್ಪ ನಿರೂಪಿಸಿದರು. ಮಹಾಂತೇಶ ಎಲಿ ವಂದಿಸಿದರು.

Share this article