ಮಂಜುನಾಥ ಸಾಯೀಮನೆ
ಶಿರಸಿ:ಹಣ ಸುರಿದು ಕಾಮಗಾರಿ ನಡೆಸಿದ್ದರೂ ಪೂರಕ ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ ಆಗುವ ಅಧ್ವಾನಗಳಿಗೆ ತಾಲೂಕಿನ ಹಡ್ನಗದ್ದೆ ಸೇತುವೆ ಸಾಕ್ಷ್ಯವಾಗಿ ನಿಂತಿದೆ. ಮಳೆಗಾಲದಲ್ಲಿ ಹೊಳೆ ದಾಟಲು ಸಾಧ್ಯವಾಗದೇ ಪ್ರವಾಹದ ನೀರಿನಲ್ಲಿ ವಾಹನ ಸಿಲುಕಿಕೊಳ್ಳುತ್ತದೆ ಎಂದು ಸೇತುವೆ ನಿರ್ಮಿಸಿದ್ದರೆ ಈಗ ಪಿಚಿಂಗ್ ಕಾರ್ಯ ಸಮರ್ಪಕವಾಗಿ ನಡೆಯದೇ ಸೇತುವೆ ಹತ್ತುವಾಗ ವಾಹನಗಳು ಸಿಲುಕಿಕೊಳ್ಳುತ್ತಿವೆ.
ಗ್ರಾಮೀಣ ಜನತೆಯ ಬದುಕೇ ಕಷ್ಟ, ಮಹಾನಗರಗಳ ಒಂದೊಂದು ವಾರ್ಡ್‌ಗಳು ಒಂದು ವರ್ಷದಲ್ಲಿ ಕಾಣುವ ಅಭಿವೃದ್ಧಿ, ರಸ್ತೆ ಸಂಪರ್ಕವನ್ನು ಗ್ರಾಮ ಪಂಚಾಯಿತಿಯಲ್ಲಿ ದಶಕಗಳೇ ಕಳೆದರೂ ಕಾಣಲು ಸಾಧ್ಯವಿಲ್ಲ. ಅದರಲ್ಲಿಯೂ ಶಿರಸಿ ತಾಲೂಕಿನ ಕುಗ್ರಾಮಗಳೇ ಜಾಸ್ತಿ ಇರುವ ಬಂಡಲ ಗ್ರಾಮ ಪಂಚಾಯಿತಿಗೆ ಹಳ್ಳಿ ಸಂಪರ್ಕ ಸಮಸ್ಯೆ ಸರಿಪಡಿಸುವುದೇ ಸವಾಲಾಗಿದೆ. ಇಲ್ಲಿಯ ಭೌಗೋಳಿಕ ಸ್ಥಿತಿಗೆ ಬರುವ ಅನುದಾನ ಅರೆಕಾಸಿನ ಮಜ್ಜಿಗೆ ಆಗುತ್ತಿದೆ ಎನ್ನುವುದು ಒಂದೆಡೆಯಾದರೆ, ಬರುವ ಅನುದಾನವೇ ಅರೆಕಾಸಿನದ್ದಾರೆ ಅಭಿವೃದ್ಧಿ ಎಲ್ಲಿಂದ ಆಗಬೇಕು?.ಶಿರಸಿ-ಕುಮಟಾ ರಸ್ತೆಯಲ್ಲಿ ರಾಗಿಹೊಸಳ್ಳಿ ಸಮೀಪ ಬೆಣ್ಣೆಹೊಳೆ ಬ್ರಿಜ್ ದಾಟಿದ ಮೇಲೆ ಸಂಪೆಗದ್ದೆ, ಜಲಗದ್ದೆ ಮೂಲಕ ಬೆಣಗಾಂವ್ ಗೆ ಸಾಗುವ 20 ಕಿಮೀ ಸಂಪರ್ಕ ರಸ್ತೆ ಇದೆ. ಈ ಮಾರ್ಗದಲ್ಲಿ ಸಾಗಿದರೆ ಮುಂದೆ ಯಾಣದ ಮೂಲಕ ಅಂಕೋಲಾ ತಾಲೂಕು ಅಚವೆಗೂ ತೆರಳಬಹುದಾಗಿದೆ. ಆದರೆ, ಈ ಮಾರ್ಗದ ಉದ್ದಕ್ಕೂ ಸಾಗುವಾಗ ಸವಾಲೂ ಅಧಿಕವಾಗಿವೆ. ಹಾವು ಹರಿದಂತೆ ಸಾಗುವ ಅಘನಾಶಿನಿ, ಅದರ ಉಪ ನದಿಗಳು ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಅಡ್ಡಬರುತ್ತವೆ. ಘಟ್ಟ ಪ್ರದೇಶದಲ್ಲಿ ಮಳೆಗಾಲದಲ್ಲಿ ಅಬ್ಬರದ ಗಾಳಿಯೊಂದಿಗೆ ಸುರಿಯುವ ಬೃಹತ್ ಮಳೆ, ಕಾಲಿಟ್ಟಲ್ಲೆಲ್ಲ ಕಚ್ಚುವ ಉಂಬಳಗಳು, ವಾಹನ ಚಕ್ರಕ್ಕೆ ಮುಂದೆ ಸಾಗಲು ಅವಕಾಶ ನೀಡಿದ ಕೆಸರು ಮಣ್ಣಿನ ನಡುವೆಯೇ ಈ ರಸ್ತೆ ಮೂಲಕ ಸಂಪರ್ಕ ಪಡೆಯುವ 500ಕ್ಕೂ ಅಧಿಕ ಕುಟುಂಬಗಳು ಅನಿವಾರ್ಯ ಹೊಂದಾಣಿಕೆಯ ಜೀವನ ನಡೆಸಿಕೊಂಡು ಬಂದಿದ್ದಾರೆ. ಮಳೆಗಾಲದಲ್ಲಿ ಬದುಕು ಕಷ್ಟ, ವಿದ್ಯುತ್ ಸಹ ಇರುವುದಿಲ್ಲ. ಅನಾರೋಗ್ಯಕ್ಕೆ ಒಳಗಾದವರನ್ನು ಕಾಪಾಡಿಕೊಳ್ಳಲಾದರೂ ನಮಗೊಂದು ಉತ್ತಮ ರಸ್ತೆ ನಿರ್ಮಿಸಿಕೊಡಿ ಎಂದು ಇಲ್ಲಿಯ ಅರಣ್ಯವಾಸಿಗಳು ದಶಮಾನಗಳಿಂದ ಅರಣ್ಯ ರೋದನ ಮಾಡುತ್ತಿದ್ದರು.ಈ ಹಿಂದಿನ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದಾಗಿ ಈ ರಸ್ತೆಯ ಅಭಿವೃದ್ಧಿ ಆರಂಭವಾಗಿದೆ. ಲೋಕೋಪಯೋಗಿ ಇಲಾಖೆ ಸಚಿವ ಈಶ್ವರಪ್ಪ ಅವರೊಂದಿಗೆ ಮಾತನಾಡಿದ ಕಾಗೇರಿ, ಮಳೆಗಾಲದಲ್ಲಿ ಸಂಪಕ್ಕೆ ಪ್ರಮುಖ ಸಮಸ್ಯೆಯಾಗಿದ್ದ ಇಲ್ಲಿಯ ಹಡ್ನಗದ್ದೆ ಬಳಿ ಸೇತುವೆ ನಿರ್ಮಾಣಕ್ಕೆ ₹ 1.60 ಕೋಟಿ ಮಂಜೂರು ಮಾಡಿಸಿದ್ದರು. ಅದರಂತೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಆದರೆ, ಸೇತುವೆಯ ಪಿಚಿಂಗ್ ಹಣ ಬಿಡುಗಡೆ ವೇಳೆ ಚುನಾವಣೆ ಘೋಷಣೆಯಾಗಿ ಸರ್ಕಾರ ಬದಲಾಗಿದೆ. ಕೆಲಸ ಯಥಾ ಸ್ಥಿತಿಯಲ್ಲೇ ನಿಂತಿದೆ. ಈಗ ಹೊಸ ಸೇತುವೆ ಏರಿ ಇಳಿಯಲು ವಾಹನಗಳು ಹೆಣಗಾಡುವಂತಾಗಿದೆ. ಅಡಕೆ ಅಥವಾ ಭಾರ ತುಂಬಿದ ವಾಹನಗಳ ಅಡಿಭಾಗ ಸೇತುವೆಗೆ ಸಿಲುಕಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಆಗ ಮಳೆಗಾಲದಲ್ಲಿ ಮಾತ್ರ ಸಮಸ್ಯೆಯಾಗುತ್ತಿದ್ದರೆ ಸೇತುವೆ ಆದಮೇಲೆ ಮಳೆಗಾಲದ ನಂತರವೂ ಸಮಸ್ಯೆಯಾಗಿದೆ. ಪಿಚಿಂಗ್ ಏರಿಸಿ ಈ ಭಾಗದ ಜನತೆ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಬೇಕು ಎಂದು ಇಲ್ಲಿಯ ನಿವಾಸಿಗಳು ಆಗ್ರಹಿಸಿದ್ದಾರೆ.
ಜಾರಕಿಹೊಳೆ ಮೇಲೆ ನಿರೀಕ್ಷೆಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೋಳಿ ನಗರಕ್ಕೆ ಶನಿವಾರ ಆಗಮಿಸುತ್ತಿದ್ದಾರೆ. ಹಡ್ನಗದ್ದೆ ಸೇತುವೆ ಸಮಸ್ಯೆ ಅವರ ಗಮನಕ್ಕೆ ಅಧಿಕಾರಿಗಳು ತರಬಹುದು, ಪಿಚಿಂಗ್ ಕಾಮಗಾರಿ ಪೂರ್ಣಗೊಳಿಸಬಹುದು ಎಂಬ ನಿರೀಕ್ಷೆಯಲ್ಲಿ ಇಲ್ಲಿಯ ಜನರಿದ್ದಾರೆ.ಸೇತುವೆ ಕಾಮಗಾರಿ ಮುಗಿದಿದ್ದರಿಂದ ಪಿಚಿಂಗ್ ಕೂಡ ಶೀಘ್ರದಲ್ಲಿ ಮಾಡಲಿದ್ದಾರೆ ಎಂಬುದು ನಮ್ಮ ನಿರೀಕ್ಷೆಯಾಗಿತ್ತು. ಆದರೆ, ವರ್ಷ ಕಳೆದರೂ ಸಮಸ್ಯೆ ಹಾಗೇ ಇದೆ. ಸೇತುವೆ ಮೇಲೆ ವಾಹನ ಹತ್ತಿಸುವಾಗ ವಾಹನದ ತಳ ತಿಕ್ಕುತ್ತಿದೆ ಎಂದು ಗ್ರಾಮಸ್ಥ ಮಹಾದೇವ ನಾಯ್ಕ ಹೇಳಿದರು.