ಮುಚ್ಚುವ ಹಂತದಿಂದ ಸರ್ಕಾರಿ ಶಾಲೆಯನ್ನು ಮೇಲೆತ್ತಿದ ಹಳೆ ವಿದ್ಯಾರ್ಥಿ ಸಂಘ

KannadaprabhaNewsNetwork |  
Published : Jun 10, 2025, 01:18 AM IST
32 | Kannada Prabha

ಸಾರಾಂಶ

1929ರಲ್ಲಿ ಕುಂದಾಪುರ ತಾಲೂಕಿನ, ಬೈಂದೂರು ಶಿಕ್ಷಣ ವಲಯದ ಕುಂದಬಾರಂದಾಡಿಯಲ್ಲಿ ಸ್ಥಾಪಿತವಾಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2029ರಲ್ಲಿ ಶತಮಾನದ ಸಂಭ್ರಮಾಚರಣೆ ನಡೆಯಬೇಕಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಕಾರಣಕ್ಕಾಗಿ ಗಮನ ಸೆಳೆದಿತ್ತು. ಶತಮಾನೋತ್ಸವದ ಹೊಸ್ತಿಲಲ್ಲಿ ನಿಂತಿರುವ ನಮ್ಮೂರ ಶಾಲೆ ಯಾವುದೇ ಕಾರಣಕ್ಕೂ ಕಳೆ ಕುಂದಬಾರದು ಎಂದು ನಿಶ್ಚಯ ಮಾಡಿದ ಊರಿನವರು ಹಾಗೂ ಹಳೆ ವಿದ್ಯಾರ್ಥಿಗಳು, ಈ ಶಾಲೆಯ ಉಳಿಯುವಿಕೆಗಾಗಿ ಕಾರ್ಯಯೋಜನೆ ರೂಪಿಸಿದ್ದರು.

ಶತಮಾನದ ಹೊಸ್ತಿಲಲ್ಲಿ ಕುಂದಬಾರಂದಾಡಿ ಶಾಲೆ । ದಾನಿಗಳ ಸಹಾಯ

ಕನ್ನಡಪ್ರಭ ವಾರ್ತೆ ಕುಂದಾಪುರಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿಗೊಳಿಸಲು ಪೋಷಕರು ಹಿಂದೇಟು ಹಾಕುತ್ತಿರುವ ಹೊತ್ತಲ್ಲೇ, ಜಿಲ್ಲೆಯ ತೀರಾ ಗ್ರಾಮೀಣ ಪ್ರದೇಶವೊಂದರ ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸಲು ದಾನಿಗಳ ಸಹಾಯದಿಂದ ಹಳೆ ವಿದ್ಯಾರ್ಥಿ ಸಂಘ ಹಾಗೂ ಊರಿನವರು ಕೈ ಜೋಡಿಸಿದ್ದಾರೆ.1929ರಲ್ಲಿ ಕುಂದಾಪುರ ತಾಲೂಕಿನ, ಬೈಂದೂರು ಶಿಕ್ಷಣ ವಲಯದ ಕುಂದಬಾರಂದಾಡಿಯಲ್ಲಿ ಸ್ಥಾಪಿತವಾಗಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2029ರಲ್ಲಿ ಶತಮಾನದ ಸಂಭ್ರಮಾಚರಣೆ ನಡೆಯಬೇಕಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಕಾರಣಕ್ಕಾಗಿ ಗಮನ ಸೆಳೆದಿತ್ತು. ಶತಮಾನೋತ್ಸವದ ಹೊಸ್ತಿಲಲ್ಲಿ ನಿಂತಿರುವ ನಮ್ಮೂರ ಶಾಲೆ ಯಾವುದೇ ಕಾರಣಕ್ಕೂ ಕಳೆ ಕುಂದಬಾರದು ಎಂದು ನಿಶ್ಚಯ ಮಾಡಿದ ಊರಿನವರು ಹಾಗೂ ಹಳೆ ವಿದ್ಯಾರ್ಥಿಗಳು, ಈ ಶಾಲೆಯ ಉಳಿಯುವಿಕೆಗಾಗಿ ಕಾರ್ಯಯೋಜನೆ ರೂಪಿಸಿದ್ದರು. ಸ್ಥಳೀಯ ಪ್ರಮುಖರಾದ ಹೊಳ್ಮಗೆ ಸಿಂಗಾರಿ ಶಿವರಾಮ್ ಶೆಟ್ಟಿ ಕುಟುಂಬಸ್ಥರನ್ನು ಸಂಪರ್ಕಿಸಿ ಶಾಲೆ ಉಳಿಸುವ ನಮ್ಮ ಕನಸುಗಳಿಗೆ ಜೊತೆಯಾಗುವಂತೆ ಒಕ್ಕೊರಲ ಮನವಿ ಮಾಡಿದ್ದರು.ಸ್ಥಳೀಯ ವಿದ್ಯಾಭಿಮಾನಿಗಳ ಆಸೆಗಳಿಗೆ ಪ್ರೋತ್ಸಾಹದ ನೀರೆರೆದ ಈ ಕುಟುಂಬದ ಅಳಿಯ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯಾಗಿ ನಿವೃತ್ತರಾದ ಬಿ.ಎನ್.ಶೆಟ್ಟಿ, ಕುಟುಂಬ ಸದಸ್ಯರನ್ನು ಒಟ್ಟು ಮಾಡಿ, ಶಾಲೆಯ ಅಭಿವೃದ್ಧಿಗೆ ಊರುಗೋಲಾಗುವ ತೀರ್ಮಾನವನ್ನು ಪ್ರಕಟಿಸುತ್ತಾರೆ. ಶಾಲೆಯ ಅಭಿವೃದ್ಧಿ ಯೋಜನೆಯನ್ನು ರೂಪಿಸಿ, ಒಟ್ಟು ವೆಚ್ಚದ ಮೂರನೇ ಒಂದು ಪಾಲನ್ನು ಹೊಳ್ಮಗೆ ಸಿಂಗಾರಿ ಶಿವರಾಮ್ ಶೆಟ್ಟಿ ಕುಟುಂಬದಿಂದ ನೀಡುತ್ತಾರೆ. ಸರ್ಕಾರದ ನಿಯಮಾನುಸಾರದಂತೆ ಒಟ್ಟು ವೆಚ್ಚದ ಮೂರನೇ ಒಂದು ಪಾಲನ್ನು ನೀಡಿದ್ದ ಕುಟುಂಬದ ಹಿರಿಯರಾದ ಹೊಳ್ಮಗೆ ಸಿಂಗಾರಿ ಶಿವರಾಮ್ ಶೆಟ್ಟಿ ಹೆಸರನ್ನು ಶಾಲೆಗೆ ಮರು ನಾಮಕರಣ ಮಾಡಲು ತೀರ್ಮಾನಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ದಾನಿಗಳು ಹಾಗೂ ಪ್ರಾಕ್ತನ ವಿದ್ಯಾರ್ಥಿಗಳ ನೆರವಿನಿಂದ ಶಾಲೆಯ ಅಭ್ಯುದಯಕ್ಕೆ ಕಾರ್ಯ ಯೋಜನೆಗಳು ವ್ಯವಸ್ಥಿತವಾಗಿ ನಡೆಯುತ್ತಿದೆ. ಸರ್ಕಾರದಿಂದ ಅನುಮತಿಯೂ ದೊರಕಿ, ಇದೀಗ ಶಾಲೆ ಹೊಳ್ಮಗೆ ಶ್ರೀಮತಿ ಸಿಂಗಾರಿ ಶಿವರಾಮ್ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂದಬಾರಂದಾಡಿ ಎನ್ನುವ ಹೆಸರಿನೊಂದಿಗೆ ಪುನರ್ ನಾಮಕರಣಗೊಂಡು ಹೊಸ ಹುರುಪಿನೊಂದಿಗೆ ಶಿಕ್ಷಣ ಯಜ್ಞವನ್ನು ಆರಂಭಿಸಿದೆ.ಆಂಗ್ಲ ಮಾಧ್ಯಮ ಆರಂಭ:ಸ್ಥಳೀಯ ಪೋಷಕರ ಬೇಡಿಕೆಗೆ ಪೂರಕವಾಗಿ ಈ ವರ್ಷದಿಂದಲೇ 1 ಮತ್ತು 2ನೇ ತರಗತಿಯನ್ನು ಆಂಗ್ಲ ಮಾಧ್ಯಮದಲ್ಲಿ ಆರಂಭಿಸಲಾಗಿದೆ. ಉತ್ತಮ ವಿದ್ಯಾರ್ಜನೆ ನೀಡಲು ಮೂವರು ಅರೆಕಾಲಿಕ ಶಿಕ್ಷಕರನ್ನು ನೇಮಕಗೊಳಿಸಲಾಗಿದೆ. ಪ್ರಸ್ತುತ ಎಲ್‌ಕೆಜಿಯಿಂದ 7ನೇ ತರಗತಿ ವರೆಗೆ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಇದೆ. ಮೂವರು ಸರ್ಕಾರಿ ಶಿಕ್ಷಕರಿದ್ದು, ಮೂವರು ಗೌರವ ಶಿಕ್ಷಕರು ಇದ್ದಾರೆ. ಆಟದ ಮೈದಾನ, ಕ್ರೀಡಾ ತರಬೇತಿ, ಯೋಗ ತರಬೇತಿ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಕೌಶಲ್ಯ ತರಬೇತಿಯಂತಹ ಹತ್ತಾರು ಯೋಜನೆಯ ಕನಸುಗಳು ಇಲ್ಲಿದೆ.ಜಿಲ್ಲೆಗೆ ಮಾದರಿ ಶಾಲೆಯ ಕನಸು:2029ಕ್ಕೆ ಈ ಶಾಲೆ ಆರಂಭವಾಗಿ 100 ಸಂವತ್ಸರಗಳು ಪೂರ್ಣಗೊಳ್ಳುತ್ತವೆ. ಹೀಗಾಗಿ ಶತಮಾನೋತ್ಸವ ಸಂಭ್ರಮದ ವೇಳೆಗೆ ಜಿಲ್ಲೆಗೆ ಮಾದರಿ ಸರ್ಕಾರಿ ಶಾಲೆಯನ್ನಾಗಿಸುವ ಕನಸುಗಳೊಂದಿಗೆ, ದಾನಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಣಾಭಿಮಾನಿಗಳು ಒಟ್ಟಾಗಿ ಅಭಿವೃದ್ಧಿಯ ಯೋಜನೆಗಳ ಗುರಿಯನ್ನು ಇರಿಸಿಕೊಂಡಿದೆ.ಉದ್ಘಾಟನೆ ಹಾಗೂ ಪ್ರಾರಂಭೋತ್ಸವ:ಶಾಲೆಯ ಪ್ರಧಾನ ಪೋಷಕರಾದ ಬಿ.ಎನ್.ಶೆಟ್ಟಿ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಶಾಲೆಯ ಮರುನಾಮಕರಣ, ಕೆಜಿ ತರಗತಿಗಳ ಉದ್ಘಾಟನೆ ಹಾಗೂ ಪ್ರಾರಂಭೋತ್ಸವ ನಡೆಯಿತು. ನಿವೃತ್ತ ಮುಖ್ಯಶಿಕ್ಷಕ ಬಿ.ಗೋಪಾಲಕೃಷ್ಣ ಶೆಟ್ಟಿ ಉದ್ಘಾಟನೆ ನೆರವೇರಿಸಿದರು. ಹಕ್ಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಮೊಗವೀರ ಅವರು ನೂತನ ನಾಮಫಲಕ ಅನಾವರಣಾ ಮಾಡಿದರು. ಪ್ರದೀಪ್ ಎಮ್.ಚಂದನ್, ಕೆಜಿ ತರಗತಿಯನ್ನು ಉದ್ಘಾಟಿಸಿದರು. ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಚಿತ್ತಾರ ನಿಶ್ಮಿತಾ ಅವರನ್ನು ಸನ್ಮಾನಿಸಿ, ಬಗ್ವಾಡಿ ಮೆತ್ತಿನ ಮನೆ ವೆಂಕಮ್ಮ ರಾಮಣ್ಣ ಶೆಟ್ಟಿ ಟ್ರಸ್ಟ್ ವತಿಯಿಂದ 5,000 ರು. ನೀಡಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾನಿಕ ಬಗ್ವಾಡಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ಅನ್ವಿತ್ ಕುಮಾರ್ ಅವರಿಗೆ, ಶೋಭ ಬಿ.ಎನ್. ಶೆಟ್ಟಿ ಹೊಳ್ಮಗೆ ಅವರು ತಲಾ 10,000 ರು. ವಿತರಿಸಿದರು. ಪ್ರಧಾನ ಪೋಷಕರು ಕೊಡುಗೆಯಾಗಿ ನೀಡಿದ ಸಮವಸ್ತ್ರ, ಪಠ್ಯಪುಸ್ತಕ, ಶಾಲಾ ಬ್ಯಾಗ್ ಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಶಾಲಾ ಅಭಿವೃದ್ಧಿಗೆ ಧನ ಸಹಾಯ ಹಾಗೂ ಕೊಡುಗೆಗಳನ್ನು ನೀಡಿದ ದಾನಿಗಳನ್ನು ಗೌರವಿಸಲಾಯಿತು.ಸುಭಾಷ್ ಶೆಟ್ಟಿ ಹೊಳ್ಮಗೆ, ಕಲ್ಪನಾ ಅಶೋಕ್ ಕುಮಾರ ಶೆಟ್ಟಿ, ಶಂಕರ ಹೆಗ್ಡೆ ಹೊಳ್ಮಗೆ, ಭಾಸ್ಕರ್ ಪೂಜಾರಿ, ರತ್ನ ಜಿ ಶ್ರೀಯಾನ್, ರವೀಂದ್ರ ಶೆಟ್ಟಿ, ರಾಘವೇಂದ್ರ ಮೊಗವೀರ, ಸುನೀಲ್ ಮುಂಬೈ, ನಾಗೇಶ್ ನಾಯ್ಕ್, ಸತೀಶ್, ಯೋಗೀಶ್, ಸತೀಶ್ ಶೆಟ್ಟಿ ಸೇರಿದಂತೆ ಇಲಾಖಾ ಅಧಿಕಾರಿಗಳು, ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸಮಿತಿಯವರು, ಲಯನ್ಸ್ ಕ್ಲಬ್ ಸದಸ್ಯರು, ಚೆನ್ನಕೇಶವ ಯುವಕ ಮಂಡಲ, ಚಿಕ್ಕು ಫ್ರೆಂಡ್ಸ್ ಸದಸ್ಯರು ಹಾಗೂ ಊರಿನವರು ಇದ್ದರು.---------------------ಈ ಶಾಲೆಯನ್ನು ಉಳಿಸಲು ಸ್ಥಳೀಯರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಸಿಂಗಾರಿ ಶಿವರಾಮ್ ಶೆಟ್ಟಿಯವರ ಕುಟುಂಬಸ್ಥರ ಸಹಕಾರವನ್ನು ಬಯಸಿದ್ದರು. ವಿದ್ಯಾ ದೇಗುಲವೊಂದರ ಉಳಿಯುವಿಕೆಗಾಗಿ ನಮ್ಮ ಕುಟುಂಬದಿಂದ ಆಗುವ ಸಹಕಾರ ನೀಡಲು ನಾವು ಬದ್ಧರಿದ್ದೇವೆ.ಶೋಭಾ ಬಿಎನ್ ಶೆಟ್ಟಿ. ಶಾಲೆಯ ಪ್ರಧಾನ ಪೋಷಕರು.

---------------------ಈ ಭಾಗದ ಸರ್ಕಾರಿ ಶಾಲೆಯನ್ನು ಉಳಿಸಲು ಸ್ಥಳೀಯರು, ದಾನಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಸಹಕಾರ ನೀಡುತ್ತಿದ್ದಾರೆ. ಶಿಕ್ಷಕರ ತಂಡ ಉತ್ತಮ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದೇವೆ. ಶಿವರಾಜ್ ಭಂಡಾರಿ ಎನ್., ಪ್ರಭಾರ ಮುಖ್ಯ ಶಿಕ್ಷಕಿ--------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ