ನದಿ ನೀರು ಕೃಷಿಗೆ ಬಳಸಬೇಡಿ ಎಂದ ಅಧಿಕಾರಿಗಳ ವಿರುದ್ಧ ಆಲೂರು ರೈತರ ಕಿಡಿ

KannadaprabhaNewsNetwork | Published : May 1, 2024 1:18 AM

ಸಾರಾಂಶ

ಆಲೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಪನ್ ಪ್ರಕಾಶ್ ರವರು ಯಗಚಿ ನದಿಯಿಂದ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು. ನಂತರ ಕೃಷಿಗೆ ಬಳಕೆ ಮಾಡಲು ಆದೇಶವಿರುವುದರಿಂದ ರೈತರು ಸಹಕರಿಸಬೇಕು ಎಂದು ಪಂಪ್‌ಗಳ ಸಂಪರ್ಕ ಕಡಿತಗೊಳಿಸಲು ಮುಂದಾದರು.

ಯಗಚಿ ನದಿಯಿಂದ ಮೋಟರ್‌ಗಳನ್ನು ತೆಗೆಸಲು ಹೋದ ಅಧಿಕಾರಿಗಳ ಜತೆ ರೈತರ ವಾಗ್ವಾದ

ಕನ್ನಡಪ್ರಭ ವಾರ್ತೆ ಆಲೂರು

ಯಗಚಿ ನದಿ ಪಾತ್ರದಲ್ಲಿರುವ ಸಾವಿರಾರು ರೈತರು ಬೆಳೆದಿರುವ ಬೆಳೆಗೆ ಪಂಪ್ ಮೂಲಕ ನದಿಯಿಂದ ನೀರು ಹಾಯಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಪನ್ ಪ್ರಕಾಶ್ ರವರು ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು. ನಂತರ ಕೃಷಿಗೆ ಬಳಕೆ ಮಾಡಲು ಆದೇಶವಿರುವುದರಿಂದ ರೈತರು ಸಹಕರಿಸಬೇಕು ಎಂದು ಪಂಪ್‌ಗಳ ಸಂಪರ್ಕ ಕಡಿತಗೊಳಿಸಲು ಮುಂದಾದರು.

ತಕ್ಷಣ ನೆರೆದಿದ್ದ ನೂರಾರು ರೈತರು ಮುಖ್ಯಾಧಿಕಾರಿಗಳ ವಿರುದ್ಧ ತಿರುಗಿಬಿದ್ದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ನಂದಕುಮಾರ್ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ರವರೂ ಸಹ ರೈತರ ಆಕ್ರೋಶಕ್ಕೆ ತುತ್ತಾಗಬೇಕಾಯಿತು.

ಅಂತಿಮವಾಗಿ ಚೆಕ್ ಡ್ಯಾಂ ತುಂಬಿ ಹರಿಯುತ್ತಿರುವ ನೀರು ನಿಲ್ಲುವವರೆಗೆ ಕೃಷಿಗೆ ಬಳಸಿಕೊಳ್ಳಲು ಸೂಚಿಸಿ, ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ ಬಳಸಲು ರೈತರು ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳು ರೈತರಿಗೆ ಸೂಚಿಸಿದರು. ನಂತರ ರೈತರು ಸ್ಥಳದಿಂದ ಚದುರಿದರು.

ಕುಡಿಯುವ ನೀರಿಗೆ ಅಭಾವ ಎದುರಾದ ಹಿನ್ನೆಲೆಯಲ್ಲಿ, ಮೈಸೂರು ಹೇಮಾವತಿ ಜಲಾಶಯದ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ಏ.೨೩ರಿಂದ ಬೇಲೂರು ತಾಲೂಕು ಯಗಚಿ ನದಿಯಿಂದ ಆಲೂರಿಗೆ ಪ್ರತಿದಿನ ೩೦ ಕ್ಯೂಸೆಕ್ಸ್ ನಂತೆ ಮೇ.೮ ರವರೆಗೆ ನೀರು ಬಿಡಲು ಆದೇಶ ನೀಡಲಾಗಿದೆ. ಅಲ್ಲಿಯವರೆಗೆ ಮಳೆಯಾದರೆ ಮಾತ್ರ ಭವಿಷ್ಯದಲ್ಲಿ ಕುಡಿಯುವ ನೀರು ದೊರಕಬಹುದು. ಮಳೆಯಾಗದಿದ್ದರೆ ತೀವ್ರ ಸಮಸ್ಯೆ ಎದುರಾಗಲಿದೆ ಎನ್ನಲಾಗಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ವಾರ್ಡುಗಳಿಗೆ ಕೊಳವೆ ಬಾವಿ ಕೊರೆಸಲಾಗಿದೆ. ನೀರು ದೊರಕದಿದ್ದರೆ ಆಳವಾಗಿ ಕೊರೆಸಿ ನೀರು ಪಡೆದು ನಿವಾಸಿಗಳಿಗೆ ವಿತರಿಸಬೇಕು. ಪ್ರತಿ ಮನೆಗಳಲ್ಲಿ ಪೋಲಾಗುತ್ತಿರುವ ನೀರನ್ನು ತಡೆಯಲು ಪಪಂ ಕ್ರಮ ಕೈಗೊಳ್ಳಬೇಕು. ಯಗಚಿ ನದಿ ಪಾತ್ರದಲ್ಲಿ ಸಾವಿರಾರು ರೈತರು ಹತ್ತಾರು ಕೋಟಿ ರು. ಬೆಳೆ ಬೆಳೆದಿದ್ದಾರೆ. ಬೆಳೆ ನಾಶವಾದರೆ ರೈತರು ವಿಷ ಕುಡಿಯಬೇಕಾಗುತ್ತದೆ. ರೈತರ ಉಳಿವಿಗೂ ಸಹಕರಿಸಬೇಕು ಎಂದು ಸ್ಥಳದಲ್ಲಿದ್ದ ರೈತರು ಆಗ್ರಹಿಸಿದರು.

ರೈತರ ಬದುಕು ಹಸನಾದರೆ ಮಾತ್ರ ಸಮಾಜದಲ್ಲಿ ಎಲ್ಲರೂ ಬದುಕಲು ಸಾಧ್ಯ. ಕುಡಿಯುವ ನೀರಿಗೆ ಆದ್ಯತೆ ನೀಡಿದಂತೆ ಕೃಷಿಗೂ ನೀರು ಬಳಸಿಕೊಳ್ಳುವ ಅವಕಾಶ ಕಲ್ಪಿಸಬೇಕು ಎನ್ನುತ್ತಾರೆ ಕರವೇ (ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಎಚ್.ವಿ.ರಾಘವೇಂದ್ರ.

ಹರಿದು ಬಂದ ನೀರು ಕೃಷಿಗೂ ಕೊಡಿ:

ಆಲೂರು ಹುಣಸವಳ್ಳಿ ಚೆಕ್ ಡ್ಯಾಂ ಬಳಿ ನೀರಿಗಾಗಿ ರೈತರು ಮತ್ತು ಅಧಿಕಾರಿಗಳ ನಡುವೆ ಮಾತುಕತೆ ನಡೆಯಿತು. ತಹಸೀಲ್ದಾರ್ ನಂದಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್, ಪ.ಪಂ ಮುಖ್ಯಾಧಿಕಾರಿ ಸ್ಟೀಪನ್ ಪ್ರಕಾಶ್ ಮತ್ತು ರೈತರು ಇದ್ದರು.

Share this article