ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಗ್ರಾ.ಪಂ.ಗೆ ಒಳಪಟ್ಟ ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು, ಗ್ರಾಮಸಭೆಯಲ್ಲಿ ತಮ್ಮ ಶಾಲೆಗಳಲ್ಲಿರುವ ಕುಂದು ಕೊರತೆ, ಸಮಸ್ಯೆಗಳು ಸೇರಿದಂತೆ ತಮ್ಮ ಶಾಲೆಗೆ ಅಗತ್ಯ ಇರುವ ಸೌಲಭ್ಯಗಳ ಕುರಿತಾದ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು.
ತಮ್ಮ ಶಾಲೆಯಲ್ಲಿ ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇಲ್ಲದಿರುವುದು, ಶಾಲೆಯಲ್ಲಿ ಶೌಚಾಲಯ ಇದ್ದರೂ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲದೆ ಇರುವುದು, ಶಾಲೆಯ ಮುಂಭಾಗದಲ್ಲಿ ತಡೆಗೋಡೆ ನಿರ್ಮಿಸಿದ್ದರೂ ಶಾಲಾ ಹಿಂಭಾಗದಲ್ಲಿ ತಡೆಗೋಡೆ ನಿರ್ಮಿಸದಿರುವುದ್ದರಿಂದ ಜಾನುವಾರುಗಳು ಆಟದ ಮೈದಾನದಲ್ಲಿ ಓಡಾಡುತ್ತವೆ, ಇದರಿಂದ ಸಮಸ್ಯೆ ಆಗುತ್ತಿರುವುದು, ಶಾಲಾ ಆಟದ ಮೈದಾನ ಸಮತಟ್ಟು ಇಲ್ಲದ ಕಾರಣದಿಂದ ಮಳೆಗಾಲದಲ್ಲಿ ಆಟದ ಮೈದಾನದಲ್ಲಿ ನೀರು ತುಂಬಿಕೊಳ್ಳುವುದು, ಶಾಲೆಗೆ ಕ್ರೀಡಾ ಸಾಮಾಗ್ರಿಗಳು ಇಲ್ಲಿದಿರುವುದು, ದೂರದ ಊರಿನಿಂದ ಮಕ್ಕಳು ಶಾಲೆಗೆ ಬರುತ್ತಾರೆ, ಆದರೆ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಇಲ್ಲದಿರುವುದ್ದರಿಂದ ಶಾಲಾ ಮಕ್ಕಳಿಗೆ ಶಾಲೆಗೆ ಬರಲು ಸಮಸ್ಯೆಯಾಗುತ್ತಿದೆ ಎಮದು ಮಕ್ಕಳು ಸಮಸ್ಯೆಗಳನ್ನು ಹೇಳಿದರು.ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಇದ್ದರೂ ವಿಜ್ಞಾನ ಪ್ರಾಯೋಗಿಕ ಪರಿಕರಗಳು ನಾದುರಸ್ತಿಗೊಂಡಿರುವುದು, ಶಾಲೆಗೆ ಕುಡಿಯುವ ನೀರಿನ ಸಮಸ್ಯೆ, ಶಾಲೆಗೆ ಸಿಸಿ ಕ್ಯಾಮಾರ ಅಳವಡಿಸುವುದು, ಶಾಲಾ ಮಕ್ಕಳಿಗೆ ಸೈಕಲ್ ವ್ಯವಸ್ಥೆ ಒದಗಿಸುವುದು ಇನ್ನು ಮುಂತಾದ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಸಭೆಯ ಮುಂದೆ ಬಿಚ್ಚಿಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ ಅಂಕನಹಳ್ಳಿ ಶಾಲಾ ವಿದ್ಯಾರ್ಥಿನಿ ಯಶ್ವಿನಿ, ನಮ್ಮ ಶಾಲೆಯ ಮುಂಭಾಗದ ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದ್ದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ಹರಿಯುತ್ತದೆ. ಇದರಿಂದ ಶಾಲೆಗೆ ಬರುವ ಮಕ್ಕಳಿಗೆ ತೊಂದರೆಯಾಗುತ್ತಿದೆ, ಅಂಕನಹಳ್ಳಿ ಮಾರ್ಗದಲ್ಲಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ಕುರಿತು ಗಮನ ಸೆಳೆದರು.
ಗ್ರಾಮೀಣ ಪ್ರದೇಶದಲ್ಲಿ ಶೇ.48ರಷ್ಟು ಮಕ್ಕಳು ಇರುವುದರಿಂದ ಮಕ್ಕಳಿಗೆ ಮೂಲಸೌಕರ್ಯಗಳ ಬಗ್ಗೆ, ಮಕ್ಕಳ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುವ ಸಲುವಾಗಿಯೇ ಮಕ್ಕಳ ಗ್ರಾಮಸಭೆಯನ್ನು ನಡೆಸಲಾಗುತ್ತದೆ. ಈ ದಿಸೆಯಲ್ಲಿ ಅಧಿಕಾರಿಗಳು ಮಕ್ಕಳ ಸಮಸ್ಯೆಗಳ ಬಗ್ಗೆ ಸ್ಪಂದಿಸಬೇಕಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರು, ಪ್ರೌಢಶಾಲಾ ಮುಖ್ಯಶಿಕ್ಷಕ ಸೋಮಶೇಖರ್, ನಾವು ಪ್ರತಿಷ್ಠಾನ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಗೌತಮ್ ಕಿರಗಂದೂರು, ಸಂಸ್ಥೆಯ ಕಾರ್ಯಕರ್ತೆ ಬಿ.ಕೆ.ಕುಮಾರಿ, ವಿವಿಧ ಶಾಲಾ ಮುಖ್ಯ ಶಿಕ್ಷಕರು, ಸಂಜೀವಿನಿ ತಾಲೂಕು ಒಕ್ಕೂಟ ಅಧ್ಯಕ್ಷೆ ಜಾನಕಿ ಗಂಗಾಧರ್ ಮುಂತಾದವರಿದ್ದರು.