ಭಾರತೀಯ ನೃತ್ಯ ಪರಂಪರೆ ವಿಶ್ವಕ್ಕೆ ತೋರಿಸಿದ ಆಳ್ವರು: ನಳಿನ್

KannadaprabhaNewsNetwork |  
Published : Nov 21, 2025, 03:00 AM IST
ಫೋಟೋ: ೧೬ಪಿಟಿಆರ್-ಆಳ್ವಾಸ್ಪುತ್ತೂರಿನಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವವನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿರುವ ದೇವರಮಾರು ಗದ್ದೆಯಲ್ಲಿ ಭಾನುವಾರ ಸಂಜೆ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ನಡೆಯಿತು.

ಪುತ್ತೂರು: ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ

ಕನ್ನಡಪ್ರಭ ವಾರ್ತೆ ಪುತ್ತೂರು

ಸಮಯ ಪಾಲನೆ ಹಾಗೂ ಸಾಂಸ್ಕೃತಿಕ ಅಚ್ಚುಕಟ್ಟುತನವು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿಶೇಷತೆಯಾಗಿದ್ದು, ಶಿಕ್ಷಣದ ಜೊತೆಗೆ ಕ್ರೀಡಾ ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಈ ಸಂಸ್ಥೆಯ ಮುಖ್ಯಸ್ಥರಾದ ಡಾ.ಎಂ. ಮೋಹನ ಆಳ್ವರು ಭಾರತೀಯ ನೃತ್ಯ ಮತ್ತು ಸಂಗೀತ ಪರಂಪರೆಯನ್ನು ದೇಶ ವಿದೇಶಗಳಲ್ಲಿ ಅರಳಿಸಿದ್ದಾರೆ ಎಂದು ದ.ಕ. ಜಿಲ್ಲಾ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿರುವ ದೇವರಮಾರು ಗದ್ದೆಯಲ್ಲಿ ಭಾನುವಾರ ಸಂಜೆ ನಡೆದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯದ ಬಗ್ಗೆ ಸರ್ಕಾರಕ್ಕಿಂತಲೂ ಹೆಚ್ಚಿನ ಕೆಲಸ ಮಾಡುತ್ತಿರುವ ಡಾ. ಆಳ್ವರ ಶಿಕ್ಷಣ ಸಂಸ್ಥೆಯು ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರವನ್ನೂ ನೀಡುತ್ತಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮಾನವ ಬಾಂಬರ್ ಆಗಲು ಸಾಧ್ಯವಿಲ್ಲ ಎಂದರು. ಆಶೀರ್ವಚನ ನೀಡಿದ ಬಾರ್ಕೂರು ಸಂಸ್ಥಾನದ ಡಾ. ಸಂತೋಷ್ ಗುರೂಜಿ ಸ್ವಾಮೀಜಿ, ಮಕ್ಕಳು ಪದವೀಧರರಾಗುವುದು ಶಿಕ್ಷಣವಲ್ಲ ಬದಲಿಗೆ ಅವರು ವಿದ್ಯಾವಂತರಾಗಬೇಕು. ಸಂಸ್ಕಾರಯುತ ಕಲಿಕೆಯಿಂದ ಮಾತ್ರ ಮಕ್ಕಳು ವಿದ್ಯಾವಂತರಾಗಲು ಸಾಧ್ಯವಿದೆ. ಇಲ್ಲಿನ ಶಿಕ್ಷಣ ಸಂಸ್ಥೆಯಲ್ಲಿನ ಕಲಾ ತಂಡದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ಬದುಕಿನ ಕಲೆಯನ್ನು ಅರ್ಥೈಸಿಕೊಳ್ಳುವ ಜೊತೆಗೆ ಹೆತ್ತವರಿಗೆ ಗೌರವ ನೀಡುವ ಸಂಸ್ಕಾರವನ್ನೂ ಬೆಳೆಸಿಕೊಳ್ಳುತ್ತಾರೆ. ಅವರ ಸೇವೆಯನ್ನು ಗುರುತಿಸಿ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕು. ಇದಕ್ಕಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಹಾಲಿ ಸಂಸದರು ಪ್ರಯತ್ನಿಸಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಇದೊಂದು ಪ್ರಚಾರಕ್ಕೆ ನಡೆಸುವ ಅಥವಾ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ನಡೆಸುವ ಕಾರ್ಯಕ್ರಮವಲ್ಲ. ಬದಲಿಗೆ ಸಾಂಸ್ಕೃತಿಕ ವಿನಿಮಯ ಮತ್ತು ಸಮಾಜ ಕಟ್ಟು ಕೆಲಸವಾಗಿದೆ. ನಮ್ಮ ದೇಶವು ಹಲವು ಜಾತಿ ಧರ್ಮವನ್ನು ಒಳಗೊಂಡಿದೆ. ಅದರ ನಡುವೆ ಭಾತೃತ್ವವಿದೆ. ಅದನ್ನು ಅರ್ಥಮಾಡಿಕೊಂಡಲ್ಲಿ ನೆಮ್ಮದಿಯ ಬದುಕು ಕಾಣಲು ಸಾಧ್ಯವಿದೆ. ಕ್ರೀಡ, ಸಾಂಸ್ಕೃತಿಕ ಮತ್ತು ಸಮಾಜದ ಪರಿಕಲ್ಪನೆಯಲ್ಲಿ ಮುನ್ನಡೆಯುವ ಈ ತಂಡವು ಹಲವು ಜಾತಿ, ಧರ್ಮವನ್ನು ಒಳಗೊಂಡು ಭಾರತವಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ೩ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಅದಕ್ಕಾಗಿ ವಾರ್ಷಿಕ ೫೦ ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಕ್ರೀಡೆಗೆ ಪ್ರೋತ್ಸಾಹ ನೀಡುವ ಜೊತೆಗೆ ಕನ್ನಡ ಭಾಷೆ ಸೋಲದಂತೆ ಕನ್ನಡ ಮಾಧ್ಯಮ ಶಾಲೆಯನ್ನು ನಡೆಸಲಾಗುತ್ತಿದ್ದು, ಕೊರಗ, ಸೋಲಿಗ, ಮಲೆಕುಡಿಯ, ಜೇನುಕುರುಬ, ಹಕ್ಕಿಪಿಕ್ಕಿ ಇನ್ನಿತ ೭ ಆದಿವಾಸಿ ಸಮುದಾಯದ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲಾಗುತ್ತಿದೆ. ಅಂಗ ನ್ಯೂನತೆಯ ಮಕ್ಕಳಿಗೂ ಉಚಿತ ಶಿಕ್ಷಣ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಮಕ್ಕಳಿಗೆ ವಿದ್ಯಾಬುದ್ದಿ ನೀಡುವುದರ ಜೊತೆಗೆ ಅವರಿಗೆ ಸಂಸ್ಕಾರವನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಿಗೆ ಎಲ್ಲ ರೀತಿಯ ಅವಕಾಶಗಳನ್ನು ಒದಿಗಿಸುತ್ತಿರುವ ಆಳ್ವಾಸ್ ಸಂಸ್ಥೆಯು ಹೆಮ್ಮೆ ಪಡುವ ಕೆಲಸ ಮಾಡುತ್ತಿದೆ. ಡಾ. ಮೋಹನ್ ಆಳ್ವರು ಸ್ವ ಇಚ್ಛೆಯಿಂದ ಪಕ್ಷ ಜಾತಿ ರಹಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿರುವುದು ಮಾದರಿಯಾಗಿದೆ. ಇಂತಹ ಕಾರ್ಯಕ್ರಮಗಳಿ ಮುಂದೆ ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂದರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ನಿಕಟಪೂರ್ವ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಸಂಚಾಲಕ ವಿಜಯ ಹಾರ್ವಿನ್, ಪ್ರಮುಖರಾದ ಡಾ. ಸುರೇಶ ಪುತ್ತೂರಾಯ, ಚನಿಲ ತಿಮ್ಮಪ್ಪ ಶೆಟ್ಟಿ, ಬಲರಾಮ್ ಆಚಾರ್ಯ, ದಂಬೆಕಾನ ಸದಾಶಿವ ರೈ, ಹೇಮನಾಥ ಶೆಟ್ಟಿ ಕಾವು, ಶಶಿಕುಮಾರ್ ರೈ ಬಾಲ್ಯೊಟ್ಟು, ಸೀತಾರಾಮ ರೈ ಕೆದಂಬಾಡಿಗುತ್ತು, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಪೌರಾಯುಕ್ತೆ ವಿದ್ಯಾಕಾಳೆ, ಎನ್.ಕೆ.ಜಗನ್ನಿವಾಸ್ ರಾವ್, ಬೂಡಿಯಾರ್ ರಾಧಾಕೃಷ್ಣ ರೈ, ಡಾ. ಎಚ್. ಮಾಧವ ಭಟ್, ಜಯಸೂರ್ಯ ರೈ ಮಾದೋಡಿ, ಡಾ. ರವೀಶ್ ಪಡುಮಲೆ, ಮಲ್ಲಿಕಾ ಪಕ್ಕಳ, ಪುಲಸ್ತ್ಯ ರೈ, ಕರುಣಾಕರ ಸುವರ್ಣ, ಸಹಜ್ ರೈ ಬಳಜ್ಜ ಸೇರಿದಂತೆ ಹಲವು ಮಂದಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಆಳ್ವಾಸ್ ಕಾಲೇಜ್‌ನ ಡೀನ್ ವೇಣುಗೋಪಾಲ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಅಧಿಕಾರ ಕೊಟ್ಟಿರುವುದು 5 ವರ್ಷಕ್ಕೆ: ಸಿಎಂ ಸಿದ್ದರಾಮಯ್ಯ
ಕೊಟ್ಟ ಮಾತನ್ನು ಎಂದೂ ಸಿಎಂ ತಪ್ಪೋಲ್ಲ : ಡಿಕೆಸು