ಸ್ತ್ರೀ ಪರಿಪೂರ್ಣತೆಯ ಸಂಕೇತ: ಡಾ. ಮೋಹನ್ ಆಳ್ವ

KannadaprabhaNewsNetwork |  
Published : Jun 28, 2026, 03:45 AM IST
ಪುಸ್ತಕ ಬಿಡುಗಡೆ | Kannada Prabha

ಸಾರಾಂಶ

ಸ್ತ್ರೀ ಎಂಬುದು ಪರಿಪೂರ್ಣತೆ ಸಂಕೇತ. ಆಕೆಯ ಅಂತರಂಗದ ಶಕ್ತಿ, ಸಂವೇದನೆ ಮತ್ತು ಚಿಂತನೆ ಅಕ್ಷರ ರೂಪದಲ್ಲಿ ಅಭಿವ್ಯಕ್ತಿಯಾದಾಗ ಅದು ಸಮಾಜದ ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.

ಮೂಡುಬಿದಿರೆ: ಸ್ತ್ರೀ ಎಂಬುದು ಪರಿಪೂರ್ಣತೆ ಸಂಕೇತ. ಆಕೆಯ ಅಂತರಂಗದ ಶಕ್ತಿ, ಸಂವೇದನೆ ಮತ್ತು ಚಿಂತನೆ ಅಕ್ಷರ ರೂಪದಲ್ಲಿ ಅಭಿವ್ಯಕ್ತಿಯಾದಾಗ ಅದು ಸಮಾಜದ ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಆಳ್ವಾಸ್‌ನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸೌಮ್ಯ ತಿಲಕ್ ಶೆಟ್ಟಿ ಅವರ ‘ಮಸಿಯ ಮಾತು’ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಕವನಗಳಲ್ಲಿ ಪ್ರತಿಫಲಿಸಿರುವ ಚಿಂತನೆಗಳು ಮೌಲ್ಯಾಧಾರಿತ ಬದುಕಿನತ್ತ ಓದುಗರನ್ನು ಕರೆದೊಯ್ಯುತ್ತವೆ ಎಂದರು.

ಕೃತಿ ಪರಿಚಯ ಮಾಡಿ ಮಾತನಾಡಿದ ಮೂಡುಬಿದಿರೆ ತಾಲೂಕು ಕಸಾಪ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಭಾಷೆ ಎನ್ನುವುದು ಕೇವಲ ವೃತ್ತಿ ವಿಷಯವಲ್ಲ. ಅದು ಮನಸ್ಸಿನ ಅಭಿವ್ಯಕ್ತಿ ಮತ್ತು ಸಂಸ್ಕೃತಿಯ ಪ್ರತೀಕ. ಸೌಮ್ಯ ಶೆಟ್ಟಿ ಇಂಗ್ಲಿಷ್ ಭಾಷೆಯನ್ನು ಬೋಧಿಸುವ ಶಿಕ್ಷಕಿಯಾಗಿದ್ದರೂ ಕನ್ನಡದ ಮೇಲಿನ ಪ್ರೀತಿ, ಬದ್ಧತೆ ಹಾಗೂ ಸಾಹಿತ್ಯಾಸಕ್ತಿಯನ್ನು ಉಳಿಸಿಕೊಂಡು ಸೃಜನಶೀಲ ಬರವಣಿಗೆಯಲ್ಲಿ ತೊಡಗಿರುವುದು ಪ್ರಶಂಸನೀಯ ಎಂದರು.

ಕವಯಿತ್ರಿ ಸೌಮ್ಯ ತಿಲಕ್ ಶೆಟ್ಟಿ ಮಾತನಾಡಿ, ಮಸಿ ಕಾಗದದ ಮೇಲೆ ಮೂಡುವ ಗುರುತಷ್ಟೇ ಅಲ್ಲ. ಅದು ಹೃದಯದ ಮಾತುಗಳಿಗೆ ಜೀವ ನೀಡುವ ಮಾಧ್ಯಮ. ಪ್ರತಿಯೊಂದು ಕವನವೂ ನನ್ನ ಬದುಕಿನ ಅನುಭವ, ಆತ್ಮ ಸಂವಾದ ಮತ್ತು ಸಮಾಜವನ್ನು ನೋಡುವ ದೃಷ್ಟಿಕೋನದ ಪ್ರತಿಬಿಂಬವಾಗಿದೆ ಎಂದು ಹೇಳಿದರು.

ವಿಶ್ರಾಂತ ಕುಲಸಚಿವ ಡಾ. ಬಿ.ಪಿ. ಸಂಪತ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ಕವಿಯ ಸಾಹಿತ್ಯ ಪಯಣದಲ್ಲಿ ಮೊದಲ ಕವನ ಸಂಕಲನವು ಕೇವಲ ಒಂದು ಕೃತಿಯಲ್ಲ, ಅವರ ಸೃಜನಶೀಲ ಬದುಕಿನ ಮೈಲಿಗಲ್ಲಾಗಿರುತ್ತದೆ. ಅದು ಲೇಖಕರ ಸಂವೇದನೆ, ಚಿಂತನೆ ಮತ್ತು ಸಾಹಿತ್ಯದ ದಿಕ್ಕನ್ನು ಪರಿಚಯಿಸುವ ಮಹತ್ವದ ಹೆಜ್ಜೆಯಾಗಿರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹವ್ಯಾಸಿ ಬರಹಗಾರ್ತಿ ಆಶಾ ಅಡೂರು ಮಾತನಾಡಿ, ಕವಿ ಮನಸ್ಸಿನ ಭಾವಲೋಕದ ಪ್ರತಿಬಿಂಬವೇ ಈ ಕೃತಿ. ಜ್ಞಾನ, ಚಿಂತನೆ, ಆತ್ಮಾವಲೋಕನ ಮತ್ತು ಸಮಾಜಮುಖಿ ಸಂದೇಶಗಳನ್ನು ಒಳಗೊಂಡಿರುವ ಈ ಸಂಕಲನ ವೈವಿಧ್ಯಮಯ ಅನುಭವಗಳನ್ನು ನೀಡುವ ‘ಫ್ರೂಟ್ ಸಲಾಡ್’ನಂತಿದೆ ಎಂದರು.

ಆಮಂತ್ರಣ ಸೇವಾ ಪ್ರತಿಷ್ಠಾನದ ಟ್ರಸ್ಟಿ ವಿಜಯ ಕುಮಾರ್ ಜೈನ್ ಮಾತನಾಡಿದರು. ಆಳ್ವಾಸ್ ಪ.ಪೂ. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಸುಧಾರಾಣಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಜನತೆಯಲ್ಲಿ ಯೋಗದ ಬಗ್ಗೆ ರೆಡ್‌ಕ್ರಾಸ್‌ ಅರಿವು: ಸಿಎ ಶಾಂತಾರಾಮ ಶೆಟ್ಟಿ
ಮೈಸೂರು ದಸರಾ ಕಂಬಳಕ್ಕೆ ಪುತ್ತೂರು ಶಾಸಕರಿಂದ ಸ್ಥಳ ವೀಕ್ಷಣೆ