ಆಳ್ವಾಸ್‌ ಶಿಕ್ಷಣ ಸಂಸ್ಥೆ: ಕೇಂದ್ರ ಬಜೆಟ್‌ ಕುರಿತು ಚರ್ಚಾಗೋಷ್ಠಿ

KannadaprabhaNewsNetwork | Published : Mar 1, 2025 1:07 AM

ಸಾರಾಂಶ

ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ಕೇಂದ್ರ ಬಜೆಟ್ 2025ರ ಕುರಿತ ಚರ್ಚಾಗೋಷ್ಠಿ ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್‌ಕೆಡಿಆರ್‌ಡಿಪಿ) ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್ ಮಂಜುನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ಕೇಂದ್ರ ಬಜೆಟ್ 2025ರ ಕುರಿತ ಚರ್ಚಾಗೋಷ್ಠಿ ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್‌ಕೆಡಿಆರ್‌ಡಿಪಿ) ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಎಚ್ ಮಂಜುನಾಥ್, ಕೇಂದ್ರದ ಈ ಭಾರಿಯ ಬಜೆಟ್ ಹಲವು ಕ್ಷೇತ್ರಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.ಆದರೆ ಭಾರತ, 2047ರ ವೇಳೆಗೆ ವಿಕಸಿತ ಭಾರತವಾಗಿ ಬದಲಾಗಿ ಜಾಗತಿಕ ನಾಯಕನಾಗಲು ಜಿಡಿಪಿ ಬೆಳವಣಿಗೆ ದರ 6.7% ದಿಂದ 7% ರಷ್ಟು ಸಾಲುವುದಿಲ್ಲ. ಈ ದೃಷ್ಟಿ ಸಾಧಿಸಬೇಕಾದರೆ, 12% ದಿಂದ 14% ವರೆಗಿನ ಜಿಡಿಪಿ ಬೆಳವಣಿಗೆ ಅಗತ್ಯ, ಇದು ಪ್ರಸ್ತುತ ಬಜೆಟ್ ನಿಂದ ಸಾಧ್ಯವಿಲ್ಲ ಎಂದರು.

ಭಾರತದಲ್ಲಿ ಕಳೆದ 25 ವರ್ಷಗಳಲ್ಲಿ ಮೈಕ್ರೊಫೈನಾನ್ಸ್ ಬಡವರ ಮನೆ ಬಾಗಿಲಿಗೆ ಸಾಲ ನೀಡುವ ಮೂಲಕ ಹಣಕಾಸಿನ ನೆರವನ್ನು ನೀಡುತ್ತಾ ಬಂದಿದೆ. ಸುಮಾರು ₹ 4.5 ಲಕ್ಷ ಕೋಟಿ ಹಣ ಈ ವ್ಯವಸ್ಥೆ ಸಾಲದ ರೂಪದಲ್ಲಿ ನೀಡಿರುವುದರಿಂದ ಇದು ವಿಶ್ವದ ಅತಿದೊಡ್ಡ ಬಡತನ ನಿರ್ಮೂಲನೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದರು.

ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ದೇಶದಲ್ಲಿ ಆರ್ಥಿಕ ಬೆಳವಣಿಗೆ ಅತ್ಯಗತ್ಯ, ಆದರೆ ಕೇವಲ 6.5% ಜಿಡಿಪಿ ಬೆಳವಣಿಗೆ ಮಾತ್ರ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದಿಲ್ಲ. ನಾವೆಲ್ಲಾ ಒಟ್ಟಾಗಿ ಬೆಳವಣಿಗೆಗೆ ಶ್ರಮಿಸಬೇಕು, ಅದು ಸಾಮಾಜಿಕ ಜವಾಬ್ದಾರಿಯುಳ್ಳ ಪ್ರಜೆಗಳಿಂದ ಸಾಧ್ಯ ಎಂದರು. ವೃತ್ತಿಪರತೆಯು ಜ್ಞಾನ, ಅನುಭವ ಮತ್ತು ಬದ್ಧತೆಯಿಂದ ಬರುತ್ತದೆ. ಭವಿಷ್ಯದ ಬೆಳವಣಿಗೆಗೆ ಹಣಕಾಸು ಮತ್ತು ಅರ್ಥಶಾಸ್ತ್ರದ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುವ ವಾಣಿಜ್ಯ ವಿದ್ಯಾರ್ಥಿಗಳು ನಮಗೆ ಬೇಕು ಎಂದರು.

ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳಕ್ಕೆ ತಾವು ನೀಡಿದ ಭೇಟಿಯ ಅನುಭವವನ್ನು ವಿವರಿಸುತ್ತಾ, ಕುಂಭಮೇಳದಿಂದ ಉಂಟಾದ ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳನ್ನು ವಿವರಿಸಿದರು.

ಮಹಾಕುಂಭಮೇಳಕ್ಕೆ ಉತ್ತರ ಪ್ರದೇಶ ರಾಜ್ಯವು 3,700 ಕೋಟಿ ಖರ್ಚು ಮಾಡಿತು. ಪ್ರತಿಯಾಗಿ, ರಾಜ್ಯವು ₹ 25,000 ಕೋಟಿಗಳ ನೇರ ಲಾಭ ಗಳಿಸಿತು, ಆದರೆ ಇದರಿಂದಾಗಿ ಇಡೀ ದೇಶವು ಸುಮಾರು ₹ 3 ಲಕ್ಷ ಕೋಟಿಗಳಷ್ಟು ಲಾಭ ಗಳಿಸಿತು. ಆದರೆ ಸಾಮಾಜಿಕ ಮಾಧ್ಯಮಗಳು ಇಂತಹ ವಿಚಾರಗಳನ್ನು ಹೆಚ್ಚು ಪ್ರಚಾರಗೊಳಿಸದೆ ಬೆಕ್ಕಿನ ಕಣ್ಣಿನ ಮೊನಾಲಿಸಾ, ಐಐಟಿ ಬಾಬಾ ಮುಂತಾದ ಹ್ಯಾಶ್ ಟ್ಯಾಗ್ ಮೂಲಕ ಅನಗತ್ಯ ಪ್ರಚಾರಗಳನ್ನು ಮಾಡಿವೆ ಎಂದು ವಿಷಾದ ವ್ಯಕ್ತ ಪಡಿಸಿದರು.

ರಾಜ್ಯದ ಇತರ ಗ್ಯಾರಂಟಿ ಯೋಜನೆಗಳ ಜೊತೆಗೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವ ರಾಜ್ಯದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯನ್ನೂ ಅವರು ಶ್ಲಾಘಿಸಿದರು.

ನಂತರ ನಡೆದ ಚರ್ಚಾಗೋಷ್ಠಿಯಲ್ಲಿ ಮೂಲ ಸೌಕರ್ಯ ಹಾಗೂ ಸರಕು ಸಾಗಣೆ ಕ್ಷೇತ್ರಕ್ಕೆ 2025ರ ಬಜೆಟ್ ಕೊಡುಗೆಗಳ ಬಗ್ಗೆ ಜಸ್ಟೀಸ್ ಕೆ ಎಸ್ ಹೆಗ್ಡೆ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್‌ನ ಪ್ರಾಧ್ಯಾಪಕ ಡಾ. ಜ್ಞಾನೇಶ್ವರ್, ನಿವೃತ್ತ ಐಆಆರ್‌ಎಸ್ ಅಧಿಕಾರಿ ಡಿ. ಬಿ. ಮೆಹ್ತಾ, ಲೆಕ್ಕ ಪರಿಶೋಧಕ ನವೀನ್ ನಾರಾಯಣ್ ವಿಚಾರ ಮಂಡಿಸಿದರು.

ಸ್ಟಾರ್ಟ್ ಅಪ್ ಹಾಗೂ ಸಣ್ಣ ಕೈಗಾರಿಕೋದ್ಯಮಗಳಿಗೆ ಬಜೆಟ್ ಸಹಾಯಕವಾಗಲಿದೆಯೇ ಎನ್ನುವುದರ ಕುರಿತು ಅರ್ಥಶಾಸ್ತ್ರಜ್ಞ ಡಾ. ಜಿ. ವಿ. ಜೋಶಿ, ಜೆ ವಿ ಸ್ಪ್ರಿಂಗ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಆತ್ಮಿಕಾ ಅಮೀನ್, ಉದ್ಯಮಿ ನಿವೇದನ್ ನಿಂಫೆ ಚರ್ಚಿಸಿದರು. ಅಮೃತಕಾಲದಿಂದ ವಿಕಸಿತ ಭಾರತದ ವರೆಗಿನ ಭಾರತದ ಭವಿಷ್ಯಕ್ಕೆ ಬಜೆಟ್ ಕೊಡುಗೆಯ ಕುರಿತು ಮಂಗಳೂರಿನ ಐಸಿಎಐ ನ ಮಾಜಿ ಅಧ್ಯಕ್ಷ ಎಸ್ ಎಸ್ ನಾಯಕ್, ಜಸ್ಟೀಸ್ ಕೆ ಎಸ್ ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಪ್ರಾಧ್ಯಪಕ ಡಾ. ಟಿ. ಮಲ್ಲಿಕಾರ್ಜುನ್ ಹಾಗೂ ಸಂಸ್ಥೆಯ ಪ್ರಾಧ್ಯಪಕ ಡಾ. ವಿಷ್ಣು ಪ್ರಸನ್ನ ಚರ್ಚಾಗೋಷ್ಠಿ ನಡೆಸಿದರು.

ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ ಇದ್ದರು.

Share this article