ಸದಾ ಜನರಿಗೆ ಲಭ್ಯವಿರುವ ಜೆಪಿ ಹೆಗ್ಡೆ ಸಂಸದರಾಗಬೇಕು: ಗೋಪಾಲ ಪೂಜಾರಿ

KannadaprabhaNewsNetwork | Published : Apr 6, 2024 12:46 AM

ಸಾರಾಂಶ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಜಯಪ್ರಕಾಶ್ ಹೆಗ್ಡೆ ಅವರು ಸದಾ ಜನರಿಗೆ ಲಭ್ಯವಿರುವ ವ್ಯಕ್ತಿ. ಅವರು ಸಚಿವ, ಸಂಸದರಾಗಿದ್ದಾಗ ಜಿಲ್ಲೆಯ ಮೀನುಗಾರ, ಬಡವರಿಗಾಗಿ ಅನೇಕ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ಅನುಭವಿ ರಾಜಕಾರಣಿಗೆ ಉತ್ತಮ ಸಂಸದನಾಗುವಲ್ಲಿ ಪ್ರತಿಯೊಬ್ಬರೂ ಮತ ನೀಡಿ, ಶಕ್ತಿ ಮೀರಿ ಅವರ ಗೆಲುವಿಗೆ ಪ್ರಯತ್ನಿಸಬೇಕು ಎಂದು ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ ಕರೆ ನೀಡಿದರು.

ಅವರು ಶುಕ್ರವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರ ಜೊತೆ ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸಿ ಚುನಾವಣಾ ಪ್ರಚಾರ ನಡೆಸಿದರು.

ಈ ಸಂದರ್ಭ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭ ಪ್ರತಿ ತಿಂಗಳು ಗೃಹಿಣಿಯರು, ಯುವಕರು, ವಿದ್ಯಾರ್ಥಿಗಳಿಗೆ ತಲುಪಿ ಅವರಿಗೆ ಬಹಳ ಲಾಭಕರವಾಗಿವೆ. ಅಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಬಿಜೆಪಿಗರು ಧರಣಿ ನಡೆಸಿದರು. ಈಗ ಜಾರಿಗೆ ತಂದ ಬಳಿಕ ರಾಜ್ಯ ದಿವಾಳಿಯಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಅನೇಕ ಉದ್ಯಮಿಗಳ ಕೋಟ್ಯಂತರ ಮೊತ್ತದ ಸಾಲವನ್ನು ಮನ್ನಾ ಮಾಡಿದಾಗ ದೇಶ ದಿವಾಳಿಯಾಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.

ತಾನು ಕೂಡ ಮೀನುಗಾರಿಕಾ ಸಚಿವನಾಗಿ ಕೆಲಸ ಮಾಡಿದ್ದು, ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿ ಕೂಡ ಅದೇ ಖಾತೆಯನ್ನು ನಿರ್ವಹಿಸಿದ್ದರು. ಇಲಾಖೆಗಳ ಕಾರ್ಯಕ್ರಮ ಜನರಿಗೆ ತಲುಪಿಸುವುದನ್ನು ಎಲ್ಲ ಸಚಿವರು ಮಾಡುತ್ತಾರೆ, ಆದರೆ ಮೀನುಗಾರರಿಗೆ ಹೊಸ ಯೋಜನೆಗಳನ್ನು ತಂದು ಅವರ ಅಭಿವೃದ್ಧಿ, ಸಮಸ್ಯೆ ಪರಿಹಾರ ಮಾಡುವುದು ಮುಖ್ಯ. ಆ ಕೆಲಸವನ್ನು ನಾನು ನನ್ನ ಸಚಿವ, ಸಂಸದ ಮತ್ತು ಶಾಸಕ ಅವಧಿಯಲ್ಲಿ ಮಾಡಿದ್ದೇನೆ. ಕಾರ್ಯಕರ್ತರು ತಮ್ಮಿಬ್ಬರ ಕೆಲಸವನ್ನು ತುಲನೆ ಮಾಡಿ ಎಂದರು.

ಅವರು ಕೋಟತಟ್ಟು, ಸಾಲಿಗ್ರಾಮ, ಕೋಡಿ, ಪಾಂಡೇಶ್ವರ, ಐರೋಡಿ ಭಾಗದಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸಿ ಪಕ್ಷದ ಹಿರಿಯ ಮುಖಂಡರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.

ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ನಾಯಕರಾದ ವಿನಯ್ ಕಬ್ಯಾಡಿ, ಪ್ರಕಾಶ್ಚಂದ್ರ ಶೆಟ್ಟಿ ಕಂಬದ ಕೋಣೆ, ತಿಮ್ಮ ಪೂಜಾರಿ, ಪಕ್ಷದ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರು, ಸದ್ಯಸರು, ಕಾರ್ಯಕರ್ತರು ಉಪಸ್ಥಿತರಿದ್ದರು.

Share this article