ಕನ್ನಡಪ್ರಭ ವಾರ್ತೆ ನಾಗಮಂಗಲಅಮರಶಿಲ್ಪಿ ಜಕಣಾಚಾರಿ ರೂಪಿಸಿದ ಅದ್ಭುತ ಕಲಾಕೃತಿಗಳು ಇಂದಿಗೂ ನಮ್ಮನ್ನು ಬೆರಗುಗೊಳಿಸುತ್ತವೆ. ಈ ಕಲೆಗಳನ್ನು ಶಾಶ್ವತವಾಗಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಹಸೀಲ್ದಾರ್ ನಯೀಂಉನ್ನೀಸಾ ತಿಳಿಸಿದರು.
ಜಗತ್ತಿನ ಅತ್ಯದ್ಭುತ ಶಿಲ್ಪಿಗಳ ಸಾಲಿನಲ್ಲಿ ನಿಲ್ಲುವ ಅಮರಶಿಲ್ಪಿ ಜಕಣಾಚಾರಿ ಅವರು ಬೇಲೂರು, ಹಳೆಬೀಡು ಸೇರಿದಂತೆ ಹಲವು ಸ್ಥಳಗಳಲ್ಲಿ ಕಲ್ಲಿನಲ್ಲಿ ಕೆತ್ತನೆ ಮಾಡಿರುವ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ ಎಂದರು.
ಅಮರಶಿಲ್ಪಿ ಜಕಣಾಚಾರಿ ಕೇವಲ ನಮ್ಮ ರಾಜ್ಯಮಾತ್ರವಲ್ಲದೆ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಷ್ಟು ಬಹುದೊಡ್ಡ ಸಾಧನೆ ಮಾಡಿದ್ದಾರೆ. ಮಾಡುವ ಕೆಲಸದ ಬಗ್ಗೆ ತಿಳುವಳಿಕೆ, ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆ ಇದ್ದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ ಎಂದರು.ನಮ್ಮೊಳಗಿನ ಕಲೆಯನ್ನು ನಾವು ಗುರುತಿಸಿದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ. ಸಾಧಕರನ್ನು ಸ್ಮರಣೆ ಮಾಡಿದರಷ್ಟೇ ಸಾಲದು, ಅವರ ಗುಣ ಬೆಳೆದುಬಂದ ಪರಿಶ್ರಮದ ಘಟನೆಗಳನ್ನು ತಿಳಿದುಕೊಳ್ಳುವ ಜೊತೆಗೆ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದರು.
ತಾಲೂಕು ಎಸ್‌ಎಸ್‌ಕೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಲ್ಕುಂದಿ ಕೃಷ್ಣಾಚಾರ್ ಮಾತನಾಡಿ, ಅಮರ ಶಿಲ್ಪಿ ಜಕಣಾಚಾರಿ ಅವರು ಶಿಲ್ಪ ಕಲೆಗೆ ನೀಡಿರುವ ಕೊಡುಗೆ ಅಪಾರ. ಒಳ್ಳೆಯ ಕೆಲಸ ಮತ್ತು ಉತ್ತಮ ಸೇವೆ ಮಾಡಿದರೆ ಸಮಾಜದಲ್ಲಿ ಶಾಶ್ವತವಾಗಿ ಉಳಿಯಬಹುದು ಎಂಬುದಕ್ಕೆ ಅಮರಶಿಲ್ಪಿ ಜಕಣಾಚಾರಿ ಅವರೇ ನಿದರ್ಶನವಾಗಿದ್ದಾರೆ. ವಿಶ್ವಮಕರ್ಮ ಸಮುದಾಯವು ಪಂಚ ಕಸುಬುಗಳನ್ನು ಅವಲಂಬಿಸಿದ್ದು, ಇವುಗಳನ್ನು ಶಾಶ್ವತವಾಗಿ ಉಳಿಸಿಕೊಂಡು ಹೋಗಬೇಕು ಎಂದರು.
ಈ ವೇಳೆ ಪ್ರೊಬೆಷನರಿ ತಹಸೀಲ್ದಾರ್ ಸುಪ್ರಿತಾ, ಸಿಡಿಪಿಓ ಕೃಷ್ಣಮೂರ್ತಿ, ರಾಜಸ್ವ ನಿರೀಕ್ಷಕರಾದ ಮಲ್ಲಿಕಾರ್ಜುನಸ್ವಾಮಿ, ಗಣೇಶ್, ಶಶಿಧರ್, ಕಂದಾಯ ಇಲಾಖೆಯ ಭಾಗ್ಯಮ್ಮ, ತಾಲೂಕು ಎಸ್‌ಎಸ್‌ಕೆ ವಿಶ್ವಕರ್ಮ ಸಮಾಜದ ಕಾನೂನು ಸಲಹೆಗಾರ ಲಕ್ಷ್ಮೀಸಾಗರ್ ಸೇರಿದಂತೆ ವಿಶ್ವಕರ್ಮ ಸಮಾಜದ ಹಲವು ಮುಖಂಡರು ಇದ್ದರು.