ಕೆ.ಎಂ.ದೊಡ್ಡಿ: ಹಿರಿಯ ನಟ ದಿ.ಅಂಬರೀಶ್ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಮುಖ್ಯಮಂತ್ರಿಯಾಗುವ ಎಲ್ಲ ಅವಕಾಶಗಳಿದ್ದರೂ ಸಹ ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡಿರಲಿಲ್ಲ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಸಮೀಪದ ದೊಡ್ಡರಸಿನಕರೆ ಗ್ರಾಮದಲ್ಲಿ ದಿ.ಡಾ.ಅಂಬರೀಶ್ ಅವರ ಪುತ್ಥಳಿ ಮಂಟಪ ಅನಾವರಣ ಹಾಗೂ ಅಂಬಿ ರಂಗಮಂದಿರ ಉದ್ಘಾಟಿಸಿ ಮಾತನಾಡಿ, ಅಂಬರೀಶ್ ನಾಡಿನ ದೊಡ್ಡ ಆಸ್ತಿ. ಅವರ ನಿಸ್ವಾರ್ಥ ಸೇವಾಗುಣ ಇಂದಿಗೂ ಆದರ್ಶ ಹಾಗೂ ಅನುಕರಣೀಯ ಎಂದರು.
ಅಂಬರೀಶ್ ಕನ್ನಡ ಚಿತ್ರರಂಗ ಹಾಗೂ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಅರ್ಹತೆ ಮತ್ತು ಅವಕಾಶವಿದ್ದರೂ ಹುದ್ದೆಯನ್ನು ಪಡೆಯದೆ ತ್ಯಾಗ ಮಾಡಿದ್ದಾರೆ. ಕಾವೇರಿ ವಿಷಯವಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷಾತೀತವಾಗಿ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿ ಅಜರಾಮರಾಗಿದ್ದಾರೆ ಎಂದು ಶ್ಲಾಘಿಸಿದರು.ಅಂಬರೀಶ್ ಪುತ್ರ ಅಭಿಷೇಕ್ ಸಹ ಚಿತ್ರರಂಗ ಹಾಗೂ ರಾಜಕೀಯ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಸೇವೆಗೆ ಮುಂದಾಗಬೇಕು ಎಂದು ಆಶಿಸಿದರು.
ಮಾಜಿ ಸಂಸದೆ ಸುಮಲತಾ ಮಾತನಾಡಿ, ಅಂಬರೀಶ್ ಯಾವುದಕ್ಕೂ ರಾಜಿಯಾಗದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.ನಟ ಅಭಿಷೇಕ್ ಅಂಬರೀಶ್ ಮಾತನಾಡಿ, ನಮ್ಮ ತಂದೆ ಅಂಬರೀಶ್ ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ವಿಶ್ವ ಮಟ್ಟದಲ್ಲಿ ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಿದವರು, ಚಿತ್ರರಂಗದಲ್ಲಿ ಹಾಗೂ ರಾಜಕಾರಣದಲ್ಲಿ ಅಗಾಧವಾದ ಸಾಧನೆಗೈದು ನಾಡಿನ ಜನರ ಹೃದಯದಲ್ಲಿ ಅಜರಾಮರರಾಗಿದ್ದಾರೆ ಎಂದು ಭಾವುಕರಾದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಕದಲೂರು ರವಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ಬಿ.ಬಸವರಾಜು, ಗ್ರಾಪಂ ಅಧ್ಯಕ್ಷ ಶರತ್, ಮುಖಂಡರಾದ ಬೇಲೂರು ಸೋಮಶೇಖರ್, ಸಿದ್ದಾಂತ್ ಸಾಗರ್, ರುದ್ರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.