ದೊಡ್ಡಬಳ್ಳಾಪುರ: ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ಕಲ್ಪಿಸಬೇಕಾದದ್ದು ಪ್ರಜಾಪ್ರಭುತ್ವದ ಮೂಲ ಆಶಯಗಳಲ್ಲಿ ಒಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಮಹಿಳೆಯರಿಗೆ ಲಿಂಗ ತಾರತಮ್ಯವಿಲ್ಲದೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿ ಸಮಾನವಾದ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತಮ್ಮದೆ ಆದ ಸಾಮರ್ಥ್ಯದಿಂದ ಮುನ್ನುಗುತ್ತಿದ್ದಾರೆ. ಮನೆಯ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು, ಹೊರಗಿನ ಕೆಲಸಗಳನ್ನು ಅಷ್ಟೇ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಾ ಉತ್ತಮ ಜೀವನ ನಡೆಸುವಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಂಪೇಗೌಡ ಮಹಿಳಾ ಜಿಲ್ಲಾ ಒಕ್ಕಲಿಗರ ಸಂಘ ಅಧ್ಯಕ್ಷೆ ಶಾಂತಮ್ಮಮಾತನಾಡಿ, ಮಹಿಳೆಯರು ಕೀಳರಿಮೆ ತೊರೆದು, ತಮಗೆ ಸಿಕ್ಕ ಅವಕಾಶಗಳನ್ನು ಸದ್ಬಳಸಿಕೊಳ್ಳಬೇಕು. ತಮ ಚಾಣಾಕ್ಷತನದಿಂದ ತಮ್ಮಲ್ಲಿರುವ ಕಲೆಗಳನ್ನು ಅಭಿವೃದ್ಧಿಪಡಿಸಿಕೊಂಡು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ನೀಡುವ ತರಬೇತಿ, ವೃತ್ತಿ ಕೌಶಲ್ಯಗಳಿಂದ ಸಣ್ಣ ಸಣ್ಣ ಉದ್ಯಮಗಳನ್ನು ಆರಂಭಿಸಿಬೇಕು. ಹತ್ತಾರು ಜನರಿಗೆ ಕೆಲಸವನ್ನೂ ಕೊಟ್ಟು, ತಾವು ಬೆಳೆಯಬಹುದು. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು. ಸಮಾದಲ್ಲಿ ಪ್ರತಿ ಮಹಿಳೆಯೂ ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಿಸಲು ಆದ್ಯತೆ ನೀಡಬೇಕು. ಸರ್ಕಾರಗಳು ಹೆಣ್ಣುಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ಅವುಗಳನ್ನು ಸದ್ಬಳಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷೆ ಎಚ್.ಎಸ್. ರೇವತಿ ಅನಂತರಾಮ್, ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ರಂಗಪ್ಪ, ಆರ್.ವಿ.ಮಹೇಶ, ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಸಂಘದ ಪದಾಧಿಕಾರಿಗಳಾದ ವರಲಕ್ಷ್ಮೀ , ಮಂಗಳಾ, ಲಕ್ಷ್ಮೀ, ರತ್ನಮ್ಮ, ಕಲ್ಪನಾ, ಶೋಭಾ, ಮಮತಾ, ಸಾವಿತ್ರಮ್ಮ, ಭಾಗ್ಯಮ್ಮ, ರೂಪ, ಮಂಜುಳಾ, ಲಕ್ಷ್ಮೀದೇವಿ, ಎ.ಎಸ್. ಆಶಾ ಮೊದಲಾದವರು ಭಾಗವಹಿಸಿದ್ದರು.9ಕೆಡಿಬಿಪಿ4-