ಪುರಸಭೆಯ ನಿಷ್ಕಾಳಜಿಗೆ ಹಾಳು ಕೊಂಪೆಯಾದ ಕಟ್ಟಡ । ದಲಿತ ಸಮುದಾಯದಿಂದ ಆಕ್ರೋಶ
ದಲಿತ ಸಮುದಾಯದ ಸಭೆ, ಸಮಾರಂಭಗಳಿಗಾಗಿ ಹಾಗೂ ಇತರ ಚಟುವಟಿಕೆಗಳ ಉದ್ದೇಶದಿಂದ ನಿರ್ಮಿಸಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭವನವು ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಪುರಸಭೆಯ ನಿಷ್ಕಾಳಜಿಯೇ ಕಾರಣವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.ವ್ಯವಸ್ಥೆ ಅಣಕಿಸುತ್ತಿರುವ ಭವನ:1998ರಲ್ಲಿ ನಿರ್ಮಿಸಲಾದ ಈ ಭವನ ಸದ್ಯ ಹಾಳು ಕೊಂಪೆಯಂತಾಗಿದ್ದು, ಭವನದಲ್ಲಿರುವ ಮೂರು ಕೊಠಡಿಗಳು ಈಗ ನಿರುಪಯುಕ್ತ ವಸ್ತುಗಳ ಸಂಗ್ರಹಣಾ ಕೊಠಡಿ ತಾಣವಾದಂತಿವೆ. ಭವನದ ಮುಂಭಾಗವು ಸಿಗರೇಟ್ ಹಾಗೂ ಎಲೆ ಅಡಿಕೆಯ ಕಸೂರಿಯಿಂದ ವರ್ಣರಂಜಿತವಾಗಿದ್ದು, ಈ ವರ್ಣ ಚಿತ್ರದ ಮೇಲೆ ಕಳೆ ನೀಡುವಂತೇ ಮದ್ಯದ ಬಾಟಲಿಗಳು ಬಿದ್ದು ಆಡಳಿತ ವ್ಯವಸ್ಥೆ ಅಣಕಿಸುತ್ತಿವೆ. ಇದೇ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಪುರಸಭೆಯು ಸಭಾಂಗಣ ನಿರ್ಮಿಸಿದ್ದು, ಈ ಮೊದಲು ಪುರಸಭೆಯೇ ಈ ಸಭಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನೂತನ ಕಟ್ಟಡಕ್ಕೆ ಪುರಸಭೆಯು ಸ್ಥಳಾಂತರವಾದ ನಂತರ ಈ ಸಭಾಂಗಣವನ್ನು ಉಪ-ನೋಂದಣಿ ಇಲಾಖೆಯು ಬಳಸಲಾರಂಭಿಸಿದೆ. ಈ ಭವನದ ಪಕ್ಕದಲ್ಲಿಯೇ ಪುರಸಭೆ ವಾಣಿಜ್ಯ ಮಳಿಗೆಗಳಿದ್ದು, ಇಲ್ಲಿಗೇ ವ್ಯಾಪಾರ ವಹಿವಾಟಿಗೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಅಂಬೇಡ್ಕರ್ ಭವನದ ಪಕ್ಕವೇ ಹಾಗೂ ಪ್ರವೇಶ ದ್ವಾರದಲ್ಲಿ ತಮ್ಮ ಎಲ್ಲ ಬರ್ಹಿದೆಸೆಯ ಚಟುವಟಿಕೆ ಕ್ರಿಯಾಕರ್ಮ ಮುಗಿಸುವುದರಿಂದ ಭವನದ ಸುತ್ತಮುತ್ತಲಿನ ವಾತಾವರಣ ದುರ್ಗಂಧಮಯವಾಗಿದೆ.
ಭವನದ ಆರ್ತನಾಧ:ಭವನದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ಪುರಸಭೆಯು ಯಾವುದೇ ವಿಧದಲ್ಲಿ ನಿರ್ವಹಣೆಯಾಗಲಿ, ಸ್ವಚ್ಛತೆಯಾಗಲಿ ಕೈಗೊಳ್ಳುತ್ತಿಲ್ಲ ಎಂಬುದಕ್ಕೆ ಭವನದ ಕಟ್ಟಡ, ಅಲ್ಲಿನ ವಾತಾವರಣವೇ ಸಾಕ್ಷಿಯಾಗಿದೆ.ಪುರಸಭೆ ವಿರುದ್ಧ ಆಕ್ರೋಶ:
ಭವನದ ನಿರ್ವಹಣೆಯನ್ನು ಮಾಡದ ಪುರಸಭೆ ಆಡಳಿತದ ಬಗ್ಗೆ ದಲಿತ ಸಮುದಾಯವು ಆಕ್ರೋಶ ವ್ಯಕ್ತಪಡಿಸಿದೆ. ಈ ಹಿಂದೇ ದಲಿತ ಸಮುದಾಯದವರು ತಮ್ಮ ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದ ಸಭೆ ಕಾರ್ಯಕ್ರಮಗಳನ್ನು ಈ ಭವನದಲ್ಲಿ ಆಯೋಜಿಸುತ್ತಿದ್ದರು. ತದನಂತರದ ವರ್ಷಗಳಲ್ಲಿ ಪುರಸಭೆಯವರು ಈ ಭವನವನ್ನು ತಾತ್ಕಾಲಿಕವಾಗಿ ತಮ್ಮ ಕಾರ್ಯಚಟುವಟಿಕೆಗಳಿಗೆ ಬಳಸಲು ಮೀಸಲಾಗಿಟ್ಟ ನಂತರ ದಲಿತ ಸಮುದಾಯದ ಕಾರ್ಯಕ್ರಮಗಳು ಅಲ್ಲಿಗೆ ನಿಂತವು. ಪುರಸಭೆಗೆ ನೂತನ ಕಟ್ಟಡ ನಿರ್ಮಾಣವಾದ ನಂತರ ಪುರಸಭೆಯವರು ಈ ಭವನವನ್ನು ತಮ್ಮ ಪುರಸಭೆಯ ಉಗ್ರಾಣವಾಗಿ ಬಳಸಿ ಸಂವಿಧಾನ ಶಿಲ್ಪಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಇಲ್ಲಿನ ದಲಿತ ಮುಖಂಡರು ಆರೋಪಿಸಿದ್ದಾರೆ.