ಕನ್ನಡಪ್ರಭ ವಾರ್ತೆ ಮಡಿಕೇರಿ
ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ದಲಿತ ಸಂಘಟನೆಗಳ ಮುಖಂಡರು ಮತ್ತು ಸದಸ್ಯರು ಧರಣಿ ನಡೆಸಿ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಸಮಿತಿ ಅಧ್ಯಕ್ಷ ಎಚ್.ಎಲ್.ದಿವಾಕರ್, ದಲಿತ ಸಂಘರ್ಷ ಸಮಿತಿಗಳು 1985ರಿಂದಲೇ ಡಾ.ಅಂಬೇಡ್ಕರ್ ಭವನಕ್ಕಾಗಿ ನಡೆಸಿದ ಹೋರಾಟದ ಹಿನ್ನೆಲೆ 1991ರಲ್ಲಿ ಸರ್ಕಾರ ಸುದರ್ಶನ ವೃತ್ತದ ಬಳಿ ಜಾಗವನ್ನು ಮಂಜೂರು ಮಾಡಿಕೊಟ್ಟಿತು. ಆ ಸಂದರ್ಭ ಭವನ ನಿರ್ಮಾಣಕ್ಕಾಗಿ ಡಾ.ನಾಗರಾಜ್ ಅಧ್ಯಕ್ಷರಾಗಿದ್ದ ಸಮಿತಿಯೊಂದನ್ನು ರಚಿಸಿಕೊಳ್ಳಲಾಯಿತು. ಆ ಸಮಿತಿಯಲ್ಲಿ ಜಿಲ್ಲೆಯ ದಲಿತ ಸಂಘಟನೆಗಳ ಪ್ರಮುಖರು ಇದ್ದರು. ಆ ಹಂತದಲ್ಲಿ ದಾನಿಗಳ ಸಹಕಾರ, ಲಾಟರಿ ಟಿಕೆಟ್ ಮೂಲಕ ಹಣವನ್ನು ಸಂಗ್ರಹಿಸಿ ಭವನವನ್ನು ನಿರ್ಮಿಸಲಾಗಿತ್ತು ಎಂದರು.ನಂತರದ ಅವಧಿಯಲ್ಲಿ ಸಮಿತಿಯ ಪದಾಧಿಕಾರಿಗಳು ಬದಲಾದರು, ದಿನ ಕಳೆಯುತ್ತಿದ್ದಂತೆ ದಲಿತ ಸಂಘರ್ಷ ಸಮಿತಿಯ ಪ್ರಮುಖರನ್ನು ಭವನ ಸಮಿತಿಯಿಂದ ಕೈಬಿಡುವ ಕಾರ್ಯ ನಡೆದಿದೆ. ಪ್ರಸ್ತುತ ಸಮಿತಿ ಕೆಲವೇ ಕೆಲವು ಮಂದಿಯ ಹಿಡಿತದಲ್ಲಿದೆ. ಇದರಿಂದ ದಲಿತ ಸಮೂಹಕ್ಕೆ ಅನುಕೂಲಕ್ಕೆಂದು ನಿರ್ಮಿಸಿದ ಭವನ ಕೆಲವೇ ಮಂದಿಗೆ ಸೀಮಿತವಾಗಿದೆ ಎಂದು ಆರೋಪಿಸಿದರು.
ದಲಿತ ಮುಖಂಡ ಹಾಗೂ ಸಿಪಿಐಎಂಎಲ್ ಪಕ್ಷದ ಪ್ರಮುಖ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ದಲಿತ ಸಮೂಹದ ಪ್ರಯೋಜನಕ್ಕೆಂದು ನಿರ್ಮಿಸಲ್ಪಟ್ಟ ಡಾ.ಅಂಬೇಡ್ಕರ್ ಭವನ ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಬಾರದು. ಇದರ ಪ್ರಯೋಜನ ಎಲ್ಲ ದಲಿತರಿಗೆ ದೊರಕಬೇಕೆನ್ನುವ ಕಾರಣದಿಂದ ಹೋರಾಟವನ್ನು ನಡೆಸಲಾಗುತ್ತಿದ್ದು, ಭವನವನ್ನು ಪಡೆದೇ ತೀರುವುದಾಗಿ ಹೇಳಿದರು.
ಬೇಡಿಕೆಗಳು:
ಹೋರಾಟ ಸಮಿತಿಯ ಉಪಾಧ್ಯಕ್ಷ ಡಿ.ಜೆ.ಈರಪ್ಪ, ಖಜಾಂಚಿ ಎಚ್.ಈ.ದೇವರಾಜು, ಎಚ್.ಎಲ್.ಕುಮಾರ್, ನಿರ್ದೇಶಕರಾದ ಎ.ಪಿ.ದೀಪಕ್, ಟಿ.ಎನ್.ಗೋವಿಂದಪ್ಪ, ಎಚ್.ಎಂ.ಸೋಮಪ್ಪ, ಜಯಪ್ಪ ಹಾನಗಲ್, ಗಾಯತ್ರಿ ನರಸಿಂಹ, ಮೋಹನ್ ಮೌರ್ಯ, ಎಚ್.ಎಸ್.ಪ್ರೇಂ ಕುಮಾರ್, ಎಚ್.ಸಿ.ಸತೀಶ್, ಟಿ.ಈ.ಸುರೇಶ್, ಸಿಂಗಿ ಸತೀಶ್ ಸೇರಿದಂತೆ ಹಲವು ಪ್ರಮುಖರು ಧರಣಿಯಲ್ಲಿ ಪಾಲ್ಗೊಂಡಿದ್ದರು.