ಸಂವಿಧಾನ ಕಾಯುವ ಅಂಬೇಡ್ಕರ್ ಅನುಯಾಯಿಗಳು: ಸತೀಶ್ ಜಾರಕಿಹೊಳಿ

KannadaprabhaNewsNetwork | Published : Oct 7, 2024 1:34 AM

ಸಾರಾಂಶ

ಶೋಷಿತರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಜೊತೆಗೆ ಆರ್ಥಿಕ ಸಮಾನತೆ ದೊರೆಯಬೇಕಾದರೆ ಸಂವಿಧಾನದ ರಕ್ಷಣೆಯ ಜವಾಬ್ದಾರಿಯನ್ನು ನಾವೆಲ್ಲರೂ ಮುಂದುವರೆಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಕಳೆದ 70 ವರ್ಷಗಳಿಂದ ಅಂಬೇಡ್ಕರ್ ಅನುಯಾಯಿಗಳು ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕಾಯುವ ಕೆಲಸ ಮಾಡುತ್ತಿದ್ದು, ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳು ಭೂಮಿ ಇರುವರೆಗೂ ಇರಬೇಕೆಂದರೆ, ಮತ್ತಷ್ಟು ಎಚ್ಚರಿಕೆಯಿಂದ ಕಾಯುವ ಕೆಲಸವನ್ನು ಮುಂದುವರೆಸಬೇಕಾದ ಅಗತ್ಯತೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದ್ದಾರೆ.

ನಗರದ ಎಂಪ್ರೆಸ್ ಕೆಪಿಎಸ್ ಶಾಲೆಯ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶೋಷಿತರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಜೊತೆಗೆ ಆರ್ಥಿಕ ಸಮಾನತೆ ದೊರೆಯಬೇಕಾದರೆ ಸಂವಿಧಾನದ ರಕ್ಷಣೆಯ ಜವಾಬ್ದಾರಿಯನ್ನು ನಾವೆಲ್ಲರೂ ಮುಂದುವರೆಸಬೇಕಾಗಿದೆ ಎಂದರು.

ಗಾಂಧಿ, ನೆಹರು ವಿಚಾರಧಾರೆಗಳು ಇಂದು ಮೂಲೆಗೆ ಸರಿದಿವೆ. ಆದರೆ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಅಂತಹ ಸ್ಥಿತಿ ಬರದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಒಂದು ವೇಳೆ ಈ ವಿಚಾರಧಾರೆಗಳು ಮೂಲೆಗುಂಪಾದರೆ ಸೃಷ್ಟಿಯೇ ಮುಗಿದಂತೆ ಎಂದು ಮಾರ್ಮಿಕವಾಗಿ ನುಡಿದ ಸಚಿವ ಸತೀಶ್ ಜಾರಕಿಹೋಳಿ, ಅರ್ಥಿಕವಾಗಿ ಸಬಲರಾಗಿರುವ ದಲಿತರು, ತಮ್ಮದೇ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಆಗಬೇಕು. ಸರಕಾರಿ ನೌಕರಿ ಹೊಂದಿರುವ ದಲಿತರು, ತಮ್ಮದೇ ಸಮುದಾಯದ ಬಡವರ ಮಕ್ಕಳನ್ನು ದತ್ತು ಪಡೆದು ಅವರನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕಾಗಿದೆ ಎಂದು ಸಚಿವರು ನುಡಿದರು.

ರಾಜ್ಯದ ಯಾವುದೇ ಮೂಲೆಯಲ್ಲಿ ದೌರ್ಜನ್ಯ, ದಬ್ಬಾಳಿಕೆಗಳು ನಡೆದರೂ ಮೊದಲು ಸಂತ್ರಸ್ತರ ಜೊತೆ ನಿಲ್ಲುವುದು ದಸಂಸ ಎಂಬ ಹೆಗ್ಗಳಿಕೆ ನಮ್ಮದು. ಅಂಬೇಡ್ಕರ್ ಒಂದು ವರ್ಗದ ಒಳಿತಾಗಿ ಕೆಲಸ ಮಾಡಲಿಲ್ಲ. ಇಡೀ ಮನುಕುಲದ ಒಳಿತಿಗಾಗಿ ಕೆಲಸ ಮಾಡಿದರು ಎಂಬುದನ್ನು ನಮ್ಮ ಯುವಜನತೆಗೆ ತಿಳಿಸುವ ಮೂಲಕ, ಹಳ್ಳಿ ಹಳ್ಳಿಗಳಲ್ಲಿ ಅಂಬೇಡ್ಕರ್ ವಿಚಾರಧಾರೆಯನ್ನು ಬಿತ್ತುವ ಕೆಲಸ ಆಗಬೇಕಾಗಿದೆ. ವಿಘಟನೆಯಾಗಿರುವ ಎಲ್ಲಾ ದಲಿತಪರ ಸಂಘಟನೆಗಳು ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ ಒಗ್ಗೂಡಿ ಎದುರಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಸದಾ ನಿಮ್ಮೊಂದಿಗೆ ಇರಲಿದ್ದೇನೆ ಎಂದು ಸತೀಶ್ ಜಾರಕಿಹೋಳಿ ಭರವಸೆ ನೀಡಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಪ್ರತಿಯೊಂದು ಮಾನವ ವಿರೋಧಿ, ಜೀವ ವಿರೋಧಿ ಪ್ರಕ್ರಿಯೆಗಳಿಗೆ ದಸಂಸ ಪ್ರತಿಕ್ರಿಯಿಸಿದೆ. ದಲಿತರ ಸ್ವಾಭಿಮಾನದ ಹಾಡುಗಳು ಮನರಂಜನೆಯ ಸರಕುಗಳಾಗದೆ ಆಲೋಚನೆಗಳಾಗಬೇಕು ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಪ್ರೊ. ಬಿ.ಕೆ. ತಮ್ಮ ಇಡೀ ಜೀವನವನ್ನೇ ಶೋಷಿತ ಸಮುದಾಯಗಳ ಏಳಿಗೆಗಾಗಿ ಮುಡಿಪಾಗಿಟ್ಟವರು. ಸವಲತ್ತುಗಳೇ ಇಲ್ಲದ ಕಾಲದಲ್ಲಿ ಇಡೀ ರಾಜ್ಯ ಸುತ್ತಿ ದಸಂಸವನ್ನು ಪ್ರಬಲವಾಗಿ ಕಟ್ಟಿದರು ಎಂದರು.

ದಸಂಸ ಹಿರಿಯ ಸದಸ್ಯ ಕುಂದೂರು ತಿಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ,ಒಳಮೀಸಲಾತಿ ತೀರ್ಪು ಬಂದು ತಿಂಗಳು ಕಳೆದರೂ ಸರಕಾರಗಳು ಅವುಗಳ ಜಾರಿಗೆ ಮೀನಾಮೇಷ ಎಣಿಸುತ್ತಿರುವುದರ ಪರಿಣಾಮ ಶೋಷಿತ ಸಮುದಾಯಗಳಲ್ಲಿ ಹೆಚ್ಚು ಒಡಕು ಉಂಟಾಗುತ್ತಿದೆ.ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಒಳಮೀಸಲಾತಿ ಜಾರಿಗೆ ಬರಬೇಕಾಗಿದೆ. ಹಾಗೆಯೇ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಸೇರಿದಂತೆ ಕಿರು ಹಣಕಾಸು ಸಂಸ್ಥೆಗಳು ಮಹಿಳೆಯರ ಮಾನ, ಪ್ರಾಣ ಹರಣಕ್ಕೆ ಕಾರಣವಾಗಿದ್ದು, ಸರಕಾರ ಕೂಡಲೇ ಇವುಗಳ ಪರವಾನಗಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ಮಾನವ ಬಂಧುತ್ವ ವೇದಿಕೆಯ ಆನಂತನಾಯ್ಕ್, ವಿರೂಪಾಕ್ಷ ಡ್ಯಾಗೇರಹಳ್ಳಿ, ,ಮುರುಳಿ ಕುಂದೂರು,ಚೇಳೂರು ಶಿವನಂಜಪ್ಪ,ಗಾನ ಅಶ್ವಥ್,ಮಲ್ಲೇಶ್ ಅಂಬುಗ, ನಾಗಣ್ಣ ಬಡಿಗೇರ, ಅರ್ಜುನ್ ಗೊಬ್ಬುರ್, ತಾಯಪ್ಪ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ನಿರ್ಮಲ, ಮುಖಂಡರಾದ ರವೀಂದ್ರ ಹೊಸಕೋಟೆ, ಚಂದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Share this article