ಅಸಮಾನತೆ ವಿರುದ್ಧ ಹೋರಾಡಿದ ಅಂಬೇಡ್ಕರ್

KannadaprabhaNewsNetwork | Published : Apr 15, 2025 12:49 AM

ಸಾರಾಂಶ

ಬಾಲ್ಯದಿಂದಲೂ ತುಳಿತಕ್ಕೊಳಗಾಗಿ ಅಪಮಾನ ಅನುಭವಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಶೋಷಿತರ ಪರ ಸಂವಿಧಾನ ರಚಸಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದವರು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಬಾಲ್ಯದಿಂದಲೂ ತುಳಿತಕ್ಕೊಳಗಾಗಿ ಅಪಮಾನ ಅನುಭವಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಶೋಷಿತರ ಪರ ಸಂವಿಧಾನ ರಚಸಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದವರು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಅಸಮಾನತೆ ವಿರುದ್ಧ ಹೋರಾಡಿದ ಅಂಬೇಡ್ಕರ್ ಶೋಷಿತ ಕಲ್ಯಾಣಕಕಾಗಿ ಶ್ರಮಿಸಿದರು. ಅವರ ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದೆ. ಇದು ಒಂದು ದೇಶಕ್ಕೆ ಸೀಮಿತವಾಗದೆ, ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಅವರು ರಚಿಸಿದ ಸಂವಿಧಾನದಿಂದಾಗಿ ರಾಜಕೀಯ, ಸಾಮಾಜಿಕ ಸ್ವಾತಂತ್ರ್ಯ ಕಾಣಲು ಸಾಧ್ಯವಾಗಿದೆ. ಬಾಲ್ಯದಲ್ಲಿಯೇ ಶ್ರೇಣೀಕೃತ ಸಮಾಜದಲ್ಲಿ ಅಂಬೇಡ್ಕರ್ ಸಂಕಷ್ಟ, ಶೋಷಣೆ ಹಾಗೂ ಅಪಮಾನ ಅನುಭವಿಸಿದವರು. ಅದೆಲ್ಲವನ್ನು ಸಾಮಾಜಿಕವಾಗಿ ಬದಲಾಯಿಸುವ ಹಾಗೂ ಸಮಾಜದ ಕಟ್ಟಕಡೆಯ ಸಮುದಾಯವಾಗಿ ಜೀವಿಸುತ್ತಿದ್ದ ದಲಿತರಿಗೂ ಪರಿಪೂರ್ಣ ಜೀವನಾವಕಾಶ ಒದಗಿಸುವ ಸಂವಿಧಾನವನ್ನು ಕೊಡುಗೆಯಾಗಿ ನೀಡಿದರು ಎಂದು ಬಣ್ಣಿಸಿದರು.

ಅಂಬೇಡ್ಕರ್ ಭಾರತರತ್ನ ಮಾತ್ರವಲ್ಲ, ವಿಶ್ವರತ್ನ ಬಿರುದಾಂಕಿತರು. ಅವರು ಯಾವ ರೀತಿ ಇಷ್ಟೊಂದು ಎತ್ತರಕ್ಕೆ ಬೆಳೆದರು. ಅವರ ಜೀವನ ಹೇಗೆ ಬದಲಾಯಿತು. ಅವರು ಬೇರೆಯವರ ಜೀವನವನ್ನು ಹೇಗೆ ಬದಲಾವಣೆ ಮಾಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಕಾರಣ ಶಿಕ್ಷಣ ಎಂಬ ಅಸ್ತ್ರ. ಆದ್ದರಿಂದ ಶೋಷಿತ ಸಮುದಾಯದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಮನವಿ ಮಾಡಿದರು.

ಪ್ರಪಂಚದಲ್ಲಿ ಕೋಟಿ ಜನರು ಜನಿಸುತ್ತಾರೆ, ಕೋಟಿ ಜನರು ಸಾವನ್ನಪ್ಪುತ್ತಾರೆ. ಅವರಲ್ಲಿ ಕೆಲವರು ಮಾತ್ರ ಸಮಾಜದ ಇತಿಹಾಸದ ಪುಟಗಳಲ್ಲಿ ಅಮರರಾಗಿ ಉಳಿದುಕೊಳ್ಳುತ್ತಾರೆ. ನಾವು ಎಲ್ಲರ ಜಯಂತಿ ಆಚರಿಸುವುದಿಲ್ಲ. ಕೇವಲ ಬೆರಳಣಿಕೆಯಷ್ಟು ಮಂದಿ ಜಂಯತಿ ಮಾತ್ರ ಆಚರಿಸುತ್ತೇವೆ. ಅವರ ಸಾಲಿನಲ್ಲಿ ಅಂಬೇಡ್ಕರ್ ಮೊದಲಿಗರು ಎಂದು ಹೇಳಿದರು.

ಅಂಬೇಡ್ಕರ್ ಸಂವಿಧಾನದಡಿ ನಾವೆಲ್ಲರು ಬದುಕುತ್ತಿದ್ದೇವೆ. ಅಂಬೇಡ್ಕರ್ ಹಬ್ಬ ಒಂದು ಜಾತಿ ಧರ್ಮಕ್ಕೆ ಸೀಮಿತವಲ್ಲ. ಇದು ರಾಷ್ಟ್ರ ಹಬ್ಬವಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಆಚರಿಸಬೇಕು ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಸಂವಿಧಾನ ಮೂಲಕ ಸಮಾನತೆ ಸಿದ್ಧೌಷಧ:

ಎಂಎಲ್ಸಿ ಸುಧಾಮ್ ದಾಸ್ ಮಾತನಾಡಿ, ನಾಗರಿಕತೆ ಹೆಸರಲ್ಲಿ ಬುಡಕಟ್ಟು ಸಂಸ್ಕೃತಿ ಜಾರಿಯಲ್ಲಿತ್ತು. ಆಗ ಅಂಬೇಡ್ಕರ್ ಸಾಮಾಜಿಕ ಬದಲಾವಣೆಗೆ ಮುಂದಾದಾಗ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಆದರೆ, ಇದೆಲ್ಲವನ್ನು ಸಮರ್ಥವಾಗಿ ಎದುರಿಸಿ ಅಂಬೇಡ್ಕರ್ ಶೋಷಿತ ಸಮಾಜಕ್ಕೆ ಸಂವಿಧಾನ ಮೂಲಕ ಸಮಾನತೆ ಸಿದ್ಧೌಷಧ ಒದಗಿಸಿದರು. ಸಂವಿಧಾನದ ಕಾರಣ ಎಲ್ಲರಿಗೂ ಮತದಾನದ ಹಕ್ಕು ದೊರಕಿದೆ. ಮತದ ಹಕ್ಕು ಮಾರಾಟಕ್ಕೆ ಸಿದ್ದವಾದ ದಿನದಿಂದಲೆ ಸಂವಿಧಾನ ಅವನತಿ ಹಾದಿಯಲ್ಲಿದೆ. ಆದ್ದರಿಂದ ಅಂಬೇಡ್ಕರ್ ಯಾವ ವ್ಯವಸ್ಥೆ ವಿರುದ್ಧ ಹೋರಾಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಟರಾಜು ಗಾಣಕಲ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ. ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಎಸ್ಪಿ ಶ್ರೀನಿವಾಸ್ ಗೌಡ, ಜಿಪಂಸಿಇಒ ಅನ್ಮೋಲ್ ಜೈನ್, ನಿವೃತ್ತ ಐಎಫ್ ಎಸ್ ಅಧಿಕಾರಿ ರಾಜು ಮತ್ತಿತರರು ಉಪಸ್ಥಿತರಿದ್ದರು.

Share this article