ಕುಮಟಾ: ಅಂಬೇಡ್ಕರರು ಐಕ್ಯಮತದ ಪ್ರತಿಪಾದಕರೆಂದರೆ ತಪ್ಪಲ್ಲ. ನಮ್ಮ ಧರ್ಮವನ್ನು ಆಚರಿಸುವುದು ನಮ್ಮ ಹಕ್ಕು ಎಂಬುದನ್ನು ಪ್ರತಿಪಾದಿಸಿದ ಅಂಬೇಡ್ಕರರು, ಸಮಾಜದಲ್ಲಿ ಸಾಮರಸ್ಯದ ಬದುಕಿಗೆ ಪ್ರಯತ್ನಿಸಿದರು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಬೆಂಗಳೂರಿನ ಡಾ.ಸುಧಾಕರ ಹೊಸಳ್ಳಿ ಹೇಳಿದರು.ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಕಲ್ಪತರು ಸೇವಾ ಪ್ರತಿಷ್ಠಾನ ಮತ್ತು ಸಾಮಾಜಿಕ ಸಾಮರಸ್ಯ ವೇದಿಕೆಯ ಸಹಯೋಗದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಚಿಂತನೆಗಳ ವಿಚಾರ ಸಂಕಿರಣದಲ್ಲಿ ''''''''ಅಂಬೇಡ್ಕರ್ ಮತ್ತು ರಾಷ್ಟ್ರೀಯತೆ'''''''', ''''''''ಅಂಬೇಡ್ಕರ್ ಮತ್ತು ಸಂವಿಧಾನ'''''''' ಎಂಬ ವಿಷಯದ ಕುರಿತಾಗಿ ಮಾತನಾಡಿದರು.
ಮಾತೃಭೂಮಿಯ ಬಗ್ಗೆ ಡಾ.ಅಂಬೇಡ್ಕರರ ಅದಮ್ಯ ನಿಲುವನ್ನು ಯುವಕರು, ಮಕ್ಕಳಿಗೆ ದರ್ಶಿಸುವ ನಡೆಯು ಅಂಬೇಡ್ಕರ್ ಅವರಿಗೆ ಸಲ್ಲಿಸಬಹುದಾದ ಬಹುದೊಡ್ಡ ಗೌರವವಾಗಿದೆ. ಎಲ್ಲ ವೈರುಧ್ಯಗಳ ನಡುವೆಯೂ ಹಿಂದೂಗಳು ಅತಿಯಾಗಿ ನೆಚ್ಚಿಕೊಂಡಿದ್ದು ಅಂಬೇಡ್ಕರ ಅವರನ್ನು ಮಾತ್ರ ಎಂದರು.ಸಂಪೂರ್ಣ ಭಾರತದ ಎಲ್ಲ ಜಾತಿ, ಜನಾಂಗದ ಜನರೂ ಒಟ್ಟಾಗಿ ಕುಳಿತು ಕಾರ್ಯಕ್ರಮ ಮಾಡುವುದೇ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಕೊಡುವ ದೊಡ್ಡ ಗೌರವ. ಎಲ್ಲರೂ ಒಂದಾಗಿ ಇರಬೇಕು. ನಮ್ಮ ನಮ್ಮ ಧಾರ್ಮಿಕ ನಂಬಿಕೆಗಳ ಅಡಿಯಲ್ಲಿ ಬದುಕು ಸಾಗಿಸಬೇಕು ಎಂಬುದು ಅಂಬೇಡ್ಕರ ನಿಲುವಾಗಿತ್ತು. ಅಂಬೇಡ್ಕರರ ಮಾತುಗಳನ್ನು ಸಮಾಜ ಒಗ್ಗೂಡಿಸಲು ಬಳಸಬೇಕೆ ವಿನಃ ಸಮಾಜ ಒಡೆಯಲು ಬಳಸಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎನ್ ಮುಕ್ರಿ ಮಾತನಾಡಿ, ಹಲವಾರು ಏಳು ಬೀಳುಗಳ ಡುವೆ ಉನ್ನತ ಸಾಧನೆ ಮಾಡಿದ ಡಾ. ಅಂಬೇಡ್ಕರ ಅವರನ್ನು ಗಾಂಧೀಜಿಯವರಂತೆಯೇ ಭಾರತದ ಮಹಾತ್ಮ ಎಂದು ನಾವು ಕರೆಯಬಹುದು. ಮಹಾನ್ ಮಾನವತಾವಾದಿ ಅಂಬೇಡ್ಕರರ ಜೀವನ ಹಾಗೂ ಅವರ ಚಿಂತನೆಗಳು ನಮ್ಮೆಲ್ಲರಿಗೆ ಆದರ್ಶ ಎಂದರು.ಕಲ್ಪತರು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹನುಮಂತ ಶಾನಭಾಗ, ಸಾಮಾಜಿಕ ಸಾಮರಸ್ಯ ವೇದಿಕೆಯ ಕೃಷ್ಣಮೂರ್ತಿ, ವಿಭಾಗ ಸಹಸಂಚಾಲಕ ರಾಮಚಂದ್ರ ಕಾಮತ ವೇದಿಕೆಯಲ್ಲಿದ್ದರು. ಡಾ. ಗಣಪತಿ ಭಟ್ಟ ಭೀಮಾಷ್ಠಕಂ ಪ್ರಸ್ತುತಪಡಿಸಿ ಅರ್ಥ ವಿವರಿಸಿದರು. ತಿಮ್ಮಪ್ಪ ಮುಕ್ರಿ ವಂದಿಸಿದರು.