ಅಂಬೇಡ್ಕರ್ ನಮ್ಮೆಲ್ಲರ ಪ್ರೇರಕ ಶಕ್ತಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

KannadaprabhaNewsNetwork | Published : Apr 15, 2024 1:17 AM

ಸಾರಾಂಶ

ಶಿವಮೊಗ್ಗದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ , ಸಮಾಜ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ ಶಿವಮೊಗ್ಗ ಸಹಯೋಗ ದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ದೇಶದಲ್ಲಿ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾರ ಕೊಡುಗೆ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ನಮಗೆಲ್ಲ ಪ್ರೇರಕ ಶಕ್ತಿ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ , ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಶಿವಮೊಗ್ಗ ಇವರ ಸಹಯೋಗದಲ್ಲಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಆಯೋಜಿಸಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಮಹಾನ್ ನಾಯಕ, ಸಂವಿಧಾನದ ಶಿಲ್ಪಿ ಡಾ.ಅಂಬೇಡ್ಕರ್‌ ಅವರು ಅಸ್ಪೃಶ್ಯತೆಯಿಂದ ಮುಕ್ತಿಯನ್ನು ನೀಡಿ, ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರು ಕೇವಲ ಸಂವಿಧಾನ ಶಿಲ್ಪಿಯಲ್ಲ, ಓರ್ವ ಅರ್ಥಿಕ ತಜ್ಞ, ರಾಜನೀತಿಜ್ಞ ಹಾಗೂ ಆರ್‌ಬಿಐ ಸ್ಥಾಪನೆಗೆ ಕಾರಣರಾದವರು. ಶೋಷಿತ ವರ್ಗ ಮಾತ್ರವಲ್ಲ ಕಾರ್ಮಿಕರು, ಮಹಿಳೆಯರ ಹಕ್ಕು ಮತ್ತು ಕಾಯ್ದೆಗಳನ್ನು ತರುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿ ಎಂದರು.

ಯಾವುದೇ ಒಂದು ವರ್ಗಕ್ಕೆ ಅವರು ಸೀಮಿತವಾಗಿಲ್ಲ. ಅವರು ಸರ್ವಜನಾಂಗದ ನಾಯಕ. ಪ್ರತಿ ದಿನ ನಾವು ಕಚೇರಿ, ಇತರೆ ಕೆಲಸಗಳಿಗೆ ತೆರಳುವಾಗ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಅಥವಾ ನೆನಪಿಸಿಕೊಂಡರೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪ್ರಸ್ತಾವನೆಯನ್ನು ಎಲ್ಲರಿಗೂ ತಲುಪಿಸಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ನಾವೆಲ್ಲ ಅಂಬೇಡ್ಕರ್‌ ಅವರ ಜೀವನದ ಮೌಲ್ಯಗಳನ್ನು ಅಳವಡಿಸಿಸಬೇಕಿದೆ ಎಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಜ್ಞಾನದ ಸಂಪತ್ತು. ಅವರು ಓದಿರುವಷ್ಟು ನಾವು ಓದಲು 100 ಜನ್ಮ ಬೇಕಾಗುತ್ತದೆ. ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಮೌಲ್ಯಗಳನ್ನು ನಾವು ಪಾಲಿಸಬೇಕಾಗಿದೆ. ಬಡ ಕುಟುಂಬದ ಹಿನ್ನೆಲೆಯಲ್ಲಿ ಬಂದ ನಾವು ಈ ಸ್ಥಾನಕ್ಕೆ ಬರಲು ಸಂವಿಧಾನ ಕಾರಣವಾಗಿದೆ ಎಂದು ತಿಳಿಸಿದರು,

ಅಂಬೇಡ್ಕರ್‌ ಅವರ ಚರ್ಚೆ ಮತ್ತು ಚಿಂತನೆಗಳಲ್ಲಿ ನಂಬಿಕೆ ಇಟ್ಟಿದ್ದರು. ಮನುಷ್ಯರ ನಡುವೆ ಅನೇಕ ಭಿನ್ನಾಭಿಪ್ರಾಯಗಳು ಇರುತ್ತವೆ. ಈ ಭಿನ್ನಾಭಿಪ್ರಾಯಗಳನ್ನು ಚರ್ಚೆ ಮಾಡಿ, ಮಾತನಾಡಿ ಬಗೆಹರಿಸಿಕೊಳ್ಳಬಹುದು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮಾತನಾಡಿ, ಸಂವಿಧಾನವನ್ನು ರಚಿಸುವಾಗ ಅನೇಕ ದೇಶಗಳ ಲಿಖಿತ ಸಂವಿಧಾನವನ್ನು ಅಧ್ಯಯನ ಮಾಡಿ ಸದೃಢವಾದ ಸಂವಿಧಾನವನ್ನು ನಮಗೆ ನೀಡಿದ್ದಾರೆ ಎಂದರು.

ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರವರು ಓರ್ವ ರಾಜನೀತಿಜ್ಞ, ಕಾರ್ಮಿಕರು, ಶೋಷಿತರು, ಮಹಿಳೆಯರು ಸೇರಿದಂತೆ ದೇಶದ ಎಲ್ಲ ವರ್ಗಗಳ ಏಳ್ಗೆಗಾಗಿ ದುಡಿದವರು. ಅವರ ಕಾರಣದಿಂದು ಇಂದು ನಾನು ಐಎಎಸ್ ಪಾಸ್ ಮಾಡಿ ಅಧಿಕಾರಿಯಾಗಿದ್ದೇನೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಎಲ್ಲರಿಗೂ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್ ಇತರೆ ಅಧಿಕಾರಿಗಳು, ವಿವಿಧ ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.ಬಾಬಾ ಸಾಹೇಬ ಬಹುತ್ವದ ನಾಯಕ

ಕುವೆಂಪು ವಿವಿ ಎನ್‍ಎಸ್‍ಎಸ್ ಸಂಯೋಜಕಿ ಡಾ.ಶುಭ ಮರವಂತೆ ಮಾತನಾಡಿ, ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಜೀವನದ ಕುರಿತು ಪ್ರತಿಯೊಬ್ಬರು ಓದುಬೇಕು, ಮತ್ತೆ ಮತ್ತೆ ತಿಳಿದುಕೊಳ್ಳಬೇಕು. ಏಕೆಂದರೆ ಬಾಬಾ ಸಾಹೇಬರು ದೇಶದ ಬಹುತ್ವದ ನಾಯಕ ಎಂದು ಹೇಳಿದರು.ಸಂವಿಧಾನವನ್ನು ರಚಿಸಲು ಬೇರೆ ಬೇರೆ ದೇಶಗಳ ಸಂವಿಧಾನ ತಜ್ಞರ ಬಳಿ ಹೋದಾಗ, ಐವರ್‌ ಜೆನ್ನಿಂಗ್ ರವರು ಭಾರತದ ಸಂವಿಧಾನವನ್ನು ರಚಿಸಲು ಜ್ಞಾನ ಇರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾತ್ರ ಎಂದು ಹೇಳಿ ಕಳುಹಿಸಿರುತ್ತಾರೆ. ಸುದೀರ್ಘ ಅಧ್ಯಯನ ಮಾಡಿ ಅತ್ಯುತ್ತಮ ಸಂವಿಧಾನವನ್ನು ದೇಶಕ್ಕೆ ನೀಡಿದ ಕೊಡುಗೆ ಅವರಿಗೆ ಸಲ್ಲುತ್ತದೆ. ಅಂಬೇಡ್ಕರ್ ಅವರ ಚಿಂತನೆಗಳು ಜೀವಂತ ಇರುವವರೆಗೆ ಸಂವಿಧಾನಕ್ಕೆ ಸಾವಿಲ್ಲ. ಸಂವಿಧಾನವೇ ನಮ್ಮೆಲ್ಲರ ಶಕ್ತಿ ಎಂದರು.

Share this article