ಗಣಗೂರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

KannadaprabhaNewsNetwork |  
Published : May 16, 2025, 01:54 AM IST
ಗಣಗೂರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ: ಕ್ರೀಕೆಟ್ ನಲ್ಲಿ ಮುಳ್ಳುಸೋಗೆ ತಂಡ ಪ್ರಥಮ, ಉಂಜಿಗನಹಳ್ಳಿ ಬಾಯ್ಸ್ ದ್ವಿತೀಯ | Kannada Prabha

ಸಾರಾಂಶ

ಗಣಗೂರಿನ ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತೋತ್ಸವ ಸಮಿತಿ ವತಿಯಿಂದ ಭಾರತ ರತ್ನ ಬಾಬಾ ಸಾಹೇಬ್‌ ಡಾ. ಬಿ. ಆರ್‌. ಅಂಬೇಡ್ಕರ್‌ ಅವರ 134ನೇ ಜನ್ಮ ದಿನಾಚರಣೆ ಆಚರಿಸಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಗಣಗೂರಿನ ಡಾ. ಬಿ.ಆರ್. ಅಂಬೇಡ್ಕರ್ ಜಯಂತೋತ್ಸವ ಸಮಿತಿ ವತಿಯಿಂದ ಭಾರತ ರತ್ನ ಬಾಬಾ ಸಾಹೇಬ್ ಡಾ ಬಿ.ಆರ್. ಅಂಬೇಡ್ಕರ್ ರವರ 134 ಜನ್ಮ ದಿನಾಚರಣೆಯನ್ನು ಗ್ರಾಮದಲ್ಲಿ ಈಚೆಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಪ್ರಯುಕ್ತ ಮೂರು ದಿನಗಳ ಕಾಲ ಕ್ರೀಡಾಕೂಟಗಳು ನಡೆದವು. ಕ್ರೀಡಾಕೂಟವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು. ಕ್ರೀಡೆಯಲ್ಲಿ ಯಾವುದೇ ಜಾತಿ ಮತವಿಲ್ಲದೆ, ಎಲ್ಲರೂ ಒಟ್ಟಾಗಿ ಸೇರಲು ಅವಕಾಶವಾಗುವುದು. ಯುವ ಪ್ರತಿಭೆಗಳು ತಮ್ಮ ಬಿಡುವಿನ ಸಮಯವನ್ನು ಮೊಬೈಲ್ ನೊಂದಿಗೆ ಕಳೆಯುತ್ತಿದ್ದು, ಕ್ರೀಡೆಗಳ ಬಗೆಗಿನ ಆಸಕ್ತಿ ಕಮ್ಮಿಯಾಗಿದೆ. ಕ್ರೀಡೆಯಲ್ಲಿ ಬಹುಮಾನಕ್ಕಾಗಿ ಪಾಲ್ಗೊಳ್ಳದೆ, ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಳ್ಳುವ ಮೂಲಕ, ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರುಷರಿಗೆ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್. ಮಹಿಳೆಯರಿಗೆ ಮುಕ್ತ ಥ್ರೋಬಾಲ್ ಹಾಗೂ ಗ್ರಾಮೀಣ ಕ್ರೀಡೆಗಳಾದ ನೀರಿನ ನಡಿಗೆ, ರಂಗೊಲಿ ಬಿಡಿಸುವ ಸ್ಪರ್ಧೆ ಮತ್ತು ಪ್ರಾಥಮಿಕ ಶಾಲೆ ಮಕ್ಕಳಿಂದ ಪದವೀಧರರ ವರೆಗಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ಪ್ರಬಂಧ ಸ್ಪರ್ಧೆಗಳು ನಡೆದವು.

ಕನ್ನಂಬಾಡಮ್ಮ ತಂಡ ಪ್ರಥಮ:

ಟೆನ್ನಿಸ್ ಬಾಲ್ ಕ್ರಿಕೆಟ್ ನಲ್ಲಿ ಪ್ರಥಮ ಬಹುಮಾನವನ್ನು ಮುಳ್ಳುಸೋಗೆಯ ಕನ್ನಂಬಾಡಮ್ಮ ತಂಡ ಪಡೆದು, ಆಕರ್ಷಕ ಟ್ರೋಫಿಯೊಂದಿಗೆ 25, 000 ರು. ನಗದು ಬಹುಮಾನವನ್ನು ಮುಡಿಗೇರಿಸಿಕೊಂಡಿತು. ದ್ವಿತೀಯ ಬಹುಮಾನವನ್ನು ಉಂಜಿಗನಹಳ್ಳಿ ಬಾಯ್ಸ್ ತಂಡ ಟ್ರೋಫಿಯೊಂದಿಗೆ 15, 000 ರು. ನಗದನ್ನು ಪಡೆದುಕೊಂಡಿತು. ತೃತೀಯ ಬಹುಮಾನವನ್ನು ಅಬ್ಬೂರುಕಟ್ಟೆಯ ಯಂಗ್ ಸ್ಟಾರ್ ಅಬ್ಬೂರ್ ಕಟ್ಟೆ ತಂಡ ತನ್ನದಾಗಿಸಿಕೊಂಡಿತು.

ಡೊಳ್ಳು ಕುಣಿತ, ವಾದ್ಯಗೋಷ್ಠಿ ಮೆರವಣಿಗೆ:

ಮಹಿಳೆಯರಿಗೆ ನಡೆದ ಥ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಜೈ ಭೀಮ್ ತಂಡ ಪಡೆದುಕೊಂಡರೆ. ದ್ವಿತೀಯ ಬಹುಮಾನವನ್ನು ಯಂಗ್ ಸ್ಟಾರ್ ತಂಡ ಪಡೆಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಸ್ತಬ್ಧ ಚಿತ್ರದೊಂದಿಗೆ ಗೋಣಿಮರೂರಿನಿಂದ ಗಣಗೂರಿನ ವರೆಗೂ ಡೊಳ್ಳು ಕುಣಿತ ಹಾಗೂ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ದಲಿತ ಸಂಘಟನೆಯ ಹಿರಿಯರಾದ ಜಯಪ್ಪ ಹಾನಗಲ್ಲು ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಶಿಕ್ಷಕರಾದ ಲೋಕೇಶ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್. ವಲಯ ಅರಣ್ಯ ಅಧಿಕಾರಿ ಶೈಲೇಂದ್ರ. ವಕೀಲರಾದ ಬಿ.ಈ. ಜಯೇಂದ್ರ, ಡಿ.ಎಸ್, ನಿರ್ವಣಪ್ಪ. ಚಂದ್ರಶೇಖರ್, ಮೋಹನ್ ಮೌರ್ಯ ಇದ್ದರು.

ಇದೇ ಸಂದರ್ಭ ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ, ಹಿರಿಯ ದಲಿತ ಮುಖಂಡರು ಮತ್ತು ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.

PREV

Recommended Stories

ಸಂಚಾರ ಉಲ್ಲಂಘನೆ ದಂಡ ಪಾವತಿಗೆ 50% ರಿಯಾಯ್ತಿ
ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಅನಾಮಿಕ ಮಂಡ್ಯದವ