ಮಹಿಳಾ ಸ್ವಾತಂತ್ರ್ಯಕ್ಕೆ ಅಂಬೇಡ್ಕರ್‌ ಕೊಡುಗೆ ಅನನ್ಯ

KannadaprabhaNewsNetwork | Published : Apr 17, 2024 1:21 AM

ಸಾರಾಂಶ

ಮಹಿಳೆಯರಿಗೆ ವಿಧಿಸಲಾಗಿದ್ದ ಕಟ್ಟುಪಾಡುಗಳನ್ನು ಸಡಿಲಿಸಿ ಸಮಾನತೆ ಮತ್ತು ಸ್ವಾತಂತ್ರ್ಯಕಲ್ಪಿಸಿದ, ಹೊಸ ಕಾನೂನು ಗಳು ಜಾರಿಯಾಗಲು ಶ್ರಮವಹಿಸಿದ ಡಾ.ಅಂಬೇಡ್ಕರ್ ಅವರ ಕೊಡುಗೆಗಳನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ

ಕನ್ನಡಪ್ರಭ ವಾರ್ತೆ ತುಮಕೂರುಮಹಿಳೆಯರಿಗೆ ವಿಧಿಸಲಾಗಿದ್ದ ಕಟ್ಟುಪಾಡುಗಳನ್ನು ಸಡಿಲಿಸಿ ಸಮಾನತೆ ಮತ್ತು ಸ್ವಾತಂತ್ರ್ಯಕಲ್ಪಿಸಿದ, ಹೊಸ ಕಾನೂನು ಗಳು ಜಾರಿಯಾಗಲು ಶ್ರಮವಹಿಸಿದ ಡಾ.ಅಂಬೇಡ್ಕರ್ ಅವರ ಕೊಡುಗೆಗಳನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಮಹಿಳಾಪರ ಹೋರಾಟಗಾರರು, ಲೇಖಕಿಯರು ಬಣ್ಣಿಸಿದರು.ಇಲ್ಲಿನ ಕೆಇಬಿ ರಸ್ತೆಯಲ್ಲಿರುವ ವರದಕ್ಷಿಣೆ ವಿರೋಧಿ ವೇದಿಕೆ-ತುಮಕೂರು ನಗರ ಸಾಂತ್ವನ ಕೇಂದ್ರದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಸ್ಮರಣೆ, ಮತದಾನ ಜಾಗೃತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಲೇಖಕಿಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಅಧ್ಯಕ್ಷೀಯ ನುಡಿಗಳನ್ನಾಡಿದ ಲೇಖಕಿ ಎಂ.ಸಿ.ಲಲಿತಾ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಅನುಭವ ಮಂಟಪ ವನ್ನು ಆರಂಭಿಸಿ ಎಲ್ಲ ಜಾತಿಯ ಜನರು, ಮಹಿಳೆಯರು ಅಲ್ಲಿ ಸೇರುವುದಕ್ಕೆ ಅವಕಾಶ ಕಲ್ಪಿಸಿದರು. ಅದು ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಸಿಕ್ಕಿದ ಅಪೂರ್ವ ಅವಕಾಶ. ಅಂತಹ ಅವಕಾಶಗಳನ್ನೇ ಅಂಬೇಡ್ಕರ್ ಅವರು ಕಾನೂನಿನ ರೂಪದಲ್ಲಿ ತರಲು ಶ್ರಮಿಸಿದರು. ಮನುಸ್ಮೃತಿಯಲ್ಲಿ ಇದ್ದ ಅನೇಕ ಕಟ್ಟುಪಾಡುಗಳನ್ನು ಸಡಿಲಿಸಿ ಪ್ರಗತಿಪರವಾಗಿ ಚಿಂತಿಸಿ ದರು. ಮಹಿಳಾ ಸಮಾನತೆಗಾಗಿ ಹೋರಾಡಿದ ಅಂಬೇಡ್ಕರ್ ಅವರ ಹೋರಾಟಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, 1927ರಲ್ಲಿಯೇ ಅಂಬೇಡ್ಕರ್ ಮಹಿಳೆಯರ ಸಂಘಟನೆ ಮಾಡಿ 5 ಸಾವಿರ ಜನ ಮಹಿಳೆಯರನ್ನು ಒಂದು ಕಡೆ ಸೇರಿಸಿದ್ದರು. ಮಹಿಳೆಯರ ಶ್ರಮ ಏನೆಂಬುದನ್ನು ಅಂಬೇಡ್ಕರ್ ಅರಿತಿದ್ದರು. ಭಾರತದಲ್ಲಿ ಇರುವ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿಯೇ ವಿವಿಧ ರಾಷ್ಟ್ರಗಳಿಗೆ ತೆರಳಿ ಅಲ್ಲಿರುವ ಗ್ರಂಥಾಲಯಗಳಲ್ಲಿ ಸಾಕಷ್ಟು ಸಮಯ ಕಳೆದರು. ಎಷ್ಟೋ ಬಾರಿ ಹಸಿವಿನಿಂದ ನರಳುತ್ತಿದ್ದರೂ ಪುಸ್ತಕಗಳ ಅಧ್ಯಯನದಲ್ಲಿ ಮುಳುಗಿದ್ದರಿಂದಲೇ ಅವರಿಂದ ಈ ದೇಶಕ್ಕೆ ಸಮಾನತೆಯ ಕೊಡುಗೆ ಬರಲು ಸಾಧ್ಯವಾಯಿತು ಎಂದರು.ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ ಮಹಿಳೆಯರ ಸಮಗ್ರ ಸುಧಾರ ಣೆಗೆ ಹಲವು ಕಾನೂನುಗಳನ್ನು ಅಂಬೇಡ್ಕರ್ ರೂಪಿಸಿದರು. ಇದಕ್ಕಾಗಿಯೇ ಸಮಿತಿಗಳು ರಚನೆಯಾದವು. 1955ರಲ್ಲಿ ಜಾರಿಗೆ ಬಂದ ಹಿಂದೂ ವಿವಾಹ ಕಾಯ್ದೆ, 56ರಲ್ಲಿ ಜಾರಿಗೆ ಬಂದ ಉತ್ತರಾಧಿಕಾರ ಅಧಿನಿಯಮದಲ್ಲಿ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಎಂಬ ಅಂಶ, ಏಕಪತ್ನಿತ್ವ ಇತ್ಯಾದಿ ಹಲವು ಕಾನೂನುಗಳ ಜಾರಿಯಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ ಇದೆ ಎಂದು ಸ್ಮರಿಸಿದರು.ಗೀತಾ ನಾಗೇಶ್, ವೇದಿಕೆ ಪದಾಧಿಕಾರಿಗಳಾದ ಟಿ.ಆರ್.ಅನಸೂಯ, ಎನ್.ಅಕ್ಕಮ್ಮ, ಗಂಗಲಕ್ಷ್ಮಿ ಮೊದಲಾದವರು ಮಾತನಾಡಿದರು. ಸಾಂತ್ವನ ಕೇಂದ್ರದ ಪಾರ್ವತಮ್ಮ, ಯುವರಾಣಿ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

Share this article