ಬಿಜೆಪಿಯಿಂದ ಅಂಬೇಡ್ಕರ್ ಕನಸುಗಳ ಸಾಕಾರ ಸಾಧ್ಯ: ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್

KannadaprabhaNewsNetwork | Published : Jan 29, 2024 1:32 AM

ಸಾರಾಂಶ

ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಜನ್ಮಸ್ಥಳ, ಶಿಕ್ಷಣ ಸ್ಥಳ ಲಂಡನ್, ಪರಿನಿರ್ವಾಣ ಸ್ಥಳ( ದೆಹಲಿ), ದೀಕ್ಷಾ ಭೂಮಿ (ನಾಗಪುರ), ಚೈತ್ಯ ಭೂಮಿ (ಸಮಾಧಿ)ಯನ್ನು ಬಿಜೆಪಿ ಸರ್ಕಾರ ಅಭಿವೃದ್ಧಿಪಡಿಸಿದೆ. ಸಮುದ್ರದ ತೀರದಲ್ಲಿ ಅಂಬೇಡ್ಕರ್ ರ ಶವ ಸಂಸ್ಕಾರ ಮಾಡಿದ್ದರು. ಆ ಜಾಗವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೊಡ್ಡದಾಗಿ ಅಭಿವೃದ್ಧಿಪಡಿಸಿದ್ದು. ಇದಕ್ಕಾಗಿ 2 ಸಾವಿರ ಕೋಟಿ ಖರ್ಚು ಮಾಡಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಕಾಂಗ್ರೆಸ್ ಪಕ್ಷವು ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಬದುಕಿದ್ದಷ್ಟು ದಿನವೂ ಅಗೌರವದಿಂದ ನಡೆಸಿಕೊಂಡಿತು. ಆದರೆ, ಬಿಜೆಪಿಯು ಅವರು ಕಂಡ ಕನಸುಗಳನ್ನು ಸಾಕಾರಗೊಳಿಸಿ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಎನ್. ಮಹೇಶ್ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ನಡೆದ ಬಲವರ್ಧನೆಗಾಗಿ ಭೀಮ ಸಮಾವೇಶದಲ್ಲಿ ಮಾತನಾಡಿದ ಅವರು, ಗಾಂಧಿ, ಇಂದಿರಾ, ರಾಜೀವ್, ನೆಹರು ಸಮಾಧಿಗೆ ದೆಹಲಿಯಲ್ಲಿ ಜಾಗ ಕೊಟ್ಟರು. ಆದರೆ, ದೇಶಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರಿಗೆ ಜಾಗ ಕೊಡಲಿಲ್ಲ ಎಂದರು.

ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಜನ್ಮಸ್ಥಳ, ಶಿಕ್ಷಣ ಸ್ಥಳ ಲಂಡನ್, ಪರಿನಿರ್ವಾಣ ಸ್ಥಳ( ದೆಹಲಿ), ದೀಕ್ಷಾ ಭೂಮಿ (ನಾಗಪುರ), ಚೈತ್ಯ ಭೂಮಿ (ಸಮಾಧಿ)ಯನ್ನು ಬಿಜೆಪಿ ಸರ್ಕಾರ ಅಭಿವೃದ್ಧಿಪಡಿಸಿದೆ. ಸಮುದ್ರದ ತೀರದಲ್ಲಿ ಅಂಬೇಡ್ಕರ್ ರ ಶವ ಸಂಸ್ಕಾರ ಮಾಡಿದ್ದರು. ಆ ಜಾಗವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೊಡ್ಡದಾಗಿ ಅಭಿವೃದ್ಧಿಪಡಿಸಿದ್ದು. ಇದಕ್ಕಾಗಿ 2 ಸಾವಿರ ಕೋಟಿ ಖರ್ಚು ಮಾಡಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಅಂಬೇಡ್ಕರ್ ಭೇಟಿ ನೀಡಿದ ಕಲಬುರಗಿ, ವಿಜಯಪುರ ಸೇರಿ ಏಳು ಸ್ಥಳಗಳ ಅಭಿವೃದ್ಧಿಗೆ ಬಿಜೆಪಿ ಹಣ ಬಿಡುಗಡೆಗೊಳಿಸಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅದನ್ನು ಮರೆಯಿತು. ಅವುಗಳನ್ನು ಅಭಿವೃದ್ಧಿಗೊಳಿಸಲು ಮತ್ತೆ ನಾವು ಅಧಿಕಾರಕ್ಕೆ ಬರಬೇಕಿದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಜಮ್ಮು ಮತ್ತು ಕಾಶ್ಮೀರ ಭಾರತದೊಳಗೆ ಪ್ರತ್ಯೇಕವಾಗಿ ಉಳಿಯಿತು. ದೇಶದ ಐಕ್ಯತೆಗೆ ಧಕ್ಕೆ ತರುವ ಕಲಂ ಮಾಡಲು ಅಂಬೇಡ್ಕರ್ ಒಪ್ಪಿರಲಿಲ್ಲ. ಆದರೆ, ನೆಹರುರವರು ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ 370ನೇ‌ ಕಲಂ ಸೇರಿಸಿದರು. ಆ ಪ್ರದೇಶಕ್ಕೆ ಸಂವಿಧಾನ ಅನ್ವಯಿಸುವುದಿಲ್ಲ, ಮೀಸಲಾತಿ ಅನ್ವಯಿಸದಂತೆ ಮಾಡಿದರು. ಇದರ ವಿರುದ್ಧ ಜನಸಂಘ ಮತ್ತು ಬಿಜೆಪಿ ನಿರಂತರ ಹೋರಾಡಿತು. ಕೊನೆಗೆ ಪ್ರಧಾನಿ ಮೋದಿಯವರು 370 ಕಲಂ ರದ್ದುಪಡಿಸಿದರು ಎಂದು ಹೇಳಿದರು.

ಸಂವಿಧಾನ ಬದಲಾಯಿಸಲು ಅದೇನು ಮಗ್ಗಿ ಪುಸ್ತಕವಲ್ಲ. ಅದನ್ನು ಬದಲಾಯಿಸಲು ನಿನಗೂ ಆಗಲ್ಲ, ನಿಮ್ಮಪ್ಪನ‌ ಕೈಲೂ ಆಗಲ್ಲ ಎಂದು ಅನಂತಕುಮಾರ ಹೆಗಡೆಗೆ ಹೇಳಿದ್ದೆ. ಮೋದಿ ಅವರು ಉಗಿದು ಅವನಿಂದ ಸಚಿವ ಸ್ಥಾನದಿಂದ ರಾಜೀನಾಮೆ ಪಡೆದು ಸಂಸತ್ತಿನಲ್ಲಿ ಕ್ಷಮೆ ಕೇಳಿಸಿದ್ದರು. ಈಗಲೂ ಕಾಂಗ್ರೆಸ್ ಅದೇ ವಿಷಯವನ್ನು ಮಾತನಾಡುತ್ತಿದೆ. ಆದರೆ, ಅನಿಲ್ ಲಾಡ್ ಸಂವಿಧಾನ ಬರೆದಿದ್ದು ರಾಜೀವ್ ಗಾಂಧಿ ಎಂದಿದ್ದು, ತೆಲಂಗಾಣದ ಕೆ.ಸಿ.ಆರ್ ಹಾಗೂ ಸ್ಯಾಮ್ ಪಿತ್ರೊಡಾ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡಿದ್ದರ ವಿರುದ್ಧ ಚಕಾರ ಎತ್ತುತ್ತಿಲ್ಲ ಎಂದು ಮಹೇಶ್ ವಾಗ್ದಾಳಿ ನಡೆಸಿದರು.

ಬಿಜೆಪಿ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಕಾಂಗ್ರೆಸ್ ಸುಡುವ ಮನೆ ಎಂದು ಅಂಬೇಡ್ಕರ್ ಹೇಳಿದ್ದರು. ಆದರೂ, ನಮ್ಮವರು ಕಾಂಗ್ರೆಸ್ ನಲ್ಲಿದ್ದಾರೆ. ನಾನು ಸಹ ನಲವತ್ತು ವರ್ಷ ಇದ್ದೆ. ಅಂಬೇಡ್ಕರ್ ಸಂಪೂರ್ಣ ಗೊತ್ತಾಗಲು ಅಷ್ಟು ವರ್ಷ ಬೇಕಾಯಿತು. ಅಂಬೇಡ್ಕರ್ ಗೊತ್ತಾದ ಬಳಿಕ ಆ ಪಕ್ಷ ತೊರೆದೆ. ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರನ್ನು ನೋಡಿ ಸಮುದಾಯ ಅವರ ಜೊತೆ‌ಯಿದೆ ಎಂದರು.

ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಗೌಡ ಮಾತನಾಡಿದರು.

ಸಕಲೇಶಪುರ ಶಾಸಕ ಹಾಗೂ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಎಸ್. ಮಂಜುನಾಥ್ ,ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಶ್ರೀನಿವಾಸ್, ಟಿ.ವಿ. ಬಾಬು, ರುದ್ರದೇವರು, ಶಿವಾನಂದ, ಶಂಕರ್, ಹಾರೋಹಳ್ಳಿ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

ವಾಜಪೇಯಿ ಸಹ ನಮ್ಮದು ಮನುಸ್ಮೃತಿ ಅಲ್ಲ, ಭೀಮಸ್ಮೃತಿ ಎಂದಿದ್ದರು. ಸಂವಿಧಾನ ನಮ್ಮ ಧರ್ಮಗ್ರಂಥ ಎಂದು ಮೋದಿ ಹೇಳಿದ್ದರು. ಗುಜರಾತ್ ಸಿಎಂ ಆಗಿದ್ದಾಗ ಮೋದಿಯವರು ಆನೆ ಮೇಲೆ ಸಂವಿಧಾನ ಇಟ್ಟು ಮೆರವಣಿಗೆ ಮಾಡಿದ್ದರು. ಅಂತಹ ದೊಡ್ಡ ಮನುಷ್ಯ ನರೇಂದ್ರ ಮೋದಿಯು ಸಂವಿಧಾನ ಬದಲಾಯಿಸುತ್ತಾರೆಯೇ? ಮೋದಿಯವರು ವಿಶೇಷ ಅಧಿವೇಶನ ಕರೆದು ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡಿದರು. ಅಂಬೇಡ್ಕರ್ ಕನಸು ನನಸು ಮಾಡಿದರು. ನಾವು ಯಾರ ಜೊತೆ ಇರಬೇಕು ಎಂಬುದನ್ನು ಜನರು ನಿರ್ಧರಿಸಬೇಕು.

- ಎನ್ .ಮಹೇಶ್ , ಮಾಜಿ ಸಚಿವರು

ಲೋಕಸಭಾ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿಯಿವೆ. ದೇಶದ ಅಭಿವೃದ್ಧಿಗಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಪಕ್ಷ ಗೆಲ್ಲಲು ನಮ್ಮ ಸಮುದಾಯದ ಕೊಡುಗೆ ಅಗತ್ಯವಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮೋದಿ ಹವಾದಲ್ಲಿ ಗೆಲ್ಲುತ್ತೇವೆ ಎಂಬುದಷ್ಟೇ ಅಲ್ಲ. ನಾವೆಲ್ಲರೂ ಮನೆ ಮನೆಗೂ ತಲುಪಿದರೆ ಮಾತ್ರ ಗೆಲುವು ಸಾಧ್ಯ.

- ಎಸ್.ಮಂಜುನಾಥ್ , ಶಾಸಕರು, ಸಕಲೇಶಪುರ ಕ್ಷೇತ್ರ

Share this article