ಭಾರತ ನೋಡಲು ಅಂಬೇಡ್ಕರ್ ಕಣ್ಣುಗಳು ಬೇಕು: ಪತ್ರಕರ್ತ ಎನ್.ರವಿಕುಮಾರ್

KannadaprabhaNewsNetwork |  
Published : Sep 13, 2024, 01:39 AM IST
ಪೋಟೊ: 12ಎಸ್‌ಎಂಜಿಕೆಪಿ04ಶಿವಮೊಗ್ಗದ ಫ್ರೆಂಡ್ಸ್ ಸೆಂಟರ್ ಹಾಲ್‌ನಲ್ಲಿ ಬುಧವಾರ ಸಂಜೆ ನಡೆದ ಬಹುಮುಖಿಯ 40ನೇ ಕಾರ್ಯಕ್ರಮದಲ್ಲಿ ಪತ್ರಕರ್ತ ಎನ್.ರವಿಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ವಾಲ್ಮೀಕಿ ಜಾತಿ, ಮಾದಿಗ ಜಾತಿ ಇಬ್ಬರೂ ದಲಿತರೇ ಆದರೂ ಕೂಡ ಅವರ ಮಧ್ಯೆ ಮರ್ಯಾದಾ ಹತ್ಯೆ ನಡೆಯುತ್ತಲೇ ಇದೆ ಎಂದು ಪತ್ರಕರ್ತ ಎನ್.ರವಿಕುಮಾರ್ ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಾತಿಯ ಕಾರಣಕ್ಕಾಗಿ ದೌರ್ಜನ್ಯದ ವಿಸ್ತರಣೆಯಾಗುತ್ತಲೇ ಇದೆ. ಇದು ವರ್ತಮಾನದಲ್ಲೂ ಮುಂದುವರೆದಿದೆ ಎಂದು ಪತ್ರಕರ್ತ ಎನ್.ರವಿಕುಮಾರ್ ಹೇಳಿದರು.

ಇಲ್ಲಿನ ಫ್ರೆಂಡ್ಸ್ ಸೆಂಟರ್ ಹಾಲ್‌ನಲ್ಲಿ ಬುಧವಾರ ಸಂಜೆ ನಡೆದ ಬಹುಮುಖಿಯ 40ನೇ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಪುರಾಣದಿಂದ ಹಿಡಿದು ಬುದ್ಧನ ಕಾಲವನ್ನು ದಾಟಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರವೂ ದಲಿತ ವಿಚಾರಗಳು ಶೋಷಣೆಯೊಂದಿಗೆ ಕೇಳಿ ಬರುತ್ತಲೇ ಇವೆ. ಭಾರತದೊಳಗೊಂದು ಭಾರತ ಇದ್ದರೆ ಅದು ಅಸ್ಪೃಶ್ಯ ಭಾರತ. ಬಸವಣ್ಣನ ಕಾಲದಲ್ಲಿ ಪರಿವರ್ತನೆಯಾದರೂ ಕೂಡ ಅದು ಸಂಘರ್ಷಕ್ಕೆ ಕಾರಣವಾಯಿತು. ಈಗಲೂ ಕೂಡ ಜಾತಿಯ ಸ್ವರೂಪ ಹಿಗ್ಗಿದೆ. ದಲಿತತ್ವ ಎಂಬುವುದೇ ಒಂದು ಅಸ್ಮಿತೆಯಾಗಿದೆ ಎಂದರು.

ಭಾರತವನ್ನು ನಿಜವಾಗಿ ಅಂಬೇಡ್ಕರ್ ಕಣ್ಣುಗಳಿಂದ ನೋಡಬೇಕು. ದಲಿತ ಪದ ಕೆಲವರಿಗೆ ತಾತ್ಸರ ಮುಜುಗರ ತಂದರೆ ಕೆಲವರಿಗೆ ರೋಮಾಂಚನ ತರುತ್ತದೆ. ದಲಿತ ಸಮಸ್ಯೆ ಪ್ರಾಚೀನ ಕಾಲದಲ್ಲಿ ಆರ್ಯರು ಬಂದ ಮೇಲೆ ಪ್ರಾರಂಭವಾಯಿತು ಎಂದು ಹೇಳಿದರು.

ಇಂದು ವಿಶ್ವಗುರು ಆಗಲು ಹೊರಟ ಭಾರತ ಒಂದು ಕಡೆಯಾದರೆ, ದಲಿತ ಭಾರತ ಒಂದು ಕಡೆ ಇದೆ. ಈ ಭಾರತವನ್ನು ನೋಡಲು ಅಂಬೇಡ್ಕರ್ ಕಣ್ಣುಗಳು ಬೇಕು. ಈ ದಲಿತ ಭಾರತದ ಜಾತಿಗಳೇ ಎಲ್ಲಾ ಸಮಸ್ಯೆಗೆ ಕಾರಣ. ಭಾರತದಲ್ಲಿ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎಂಬ ನಾಲ್ಕು ಜಾತಿಗಳಲ್ಲದೆ, ಪಂಚಮರು ಎಂಬ ಅಸ್ಪೃಶ್ಯ ಜಾತಿ ಇದೆ. ಬುದ್ಧನ ಕಾಲದಲ್ಲಿ ಸುನೀತ ಎಂಬ ಜಾಡಮಾಲಿಯನ್ನು ಮುಖ್ಯ ವಾಹಿನಿಗೆ ತರಲಾಯಿತು. ಆದರೆ ಇಂದಿಗೂ ಜಾತಿಯತೆ ಹಾಗೇ ಉಳಿದಿದೆ ಎಂದರು.

ಬದನವಾಳು ಗ್ರಾಮದಲ್ಲಿ ದೇವಸ್ಥಾನದ ಪ್ರವೇಶದ ವಿಷಯವಾಗಿ ಗಲಾಟೆ ನಡೆದು 3 ಜನ ದಲಿತರು ಕೊಲ್ಲಲ್ಪಟ್ಟರು. ಕಂಬಾಲಪಲ್ಲಿಯಲ್ಲೂ ಕೂಡ 7 ಜನ ದಲಿತರ ಹತ್ಯೆ ಆಯಿತು. ಆದರೆ ಇದುವರೆಗೆ ಅವರಿಗೆ ನ್ಯಾಯ ಸಿಗಲಿಲ್ಲ. ಬಿಹಾರ ಮತ್ತು ಗುಜರಾತ್‌ನಲ್ಲಿ ದಲಿತರು ದಿನವೂ ಹಲ್ಲೆಗೆ ಒಳಗಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾಲ್ಮೀಕಿ ಜಾತಿ, ಮಾದಿಗ ಜಾತಿ ಇಬ್ಬರೂ ದಲಿತರೇ ಆದರೂ ಕೂಡ ಅವರ ಮಧ್ಯೆ ಮರ್ಯಾದಾ ಹತ್ಯೆ ನಡೆಯುತ್ತಲೇ ಇದೆ. ರಾಜಕಾರಣಿಗಳು ಕೇವಲ ನಾಟಕಕ್ಕಾಗಿ ದಲಿತರ ಮನೆಯಲ್ಲಿ ಊಟ ಮಾಡುತ್ತಾರೆ. ಕ್ಯಾಮೆರಾ ಪೇಪರ್‌ನವರನ್ನು ಕರೆದು ಕೊಂಡು ಹೋಗುವುದು ಆತ್ಮವಂಚನೆ ಆಗುತ್ತದೆ. ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ನಿರಾಕರಿಸಿದಷ್ಟು ಅವರು ಬೆಳೆಯುತ್ತಿದ್ದಾರೆ. ಗಾಂಧೀಜಿ ಭಾರತದ ರಾಷ್ಟ್ರಪಿತ ಆದರೆ ಅಂಬೇಡ್ಕರ್ ಭಾರತದ ರಾಷ್ಟ್ರಮಾತೆಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಡಾ.ಕೆ.ಜಿ.ವೆಂಕಟೇಶ್ ಅವರು ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ