ಚಳ್ಳಕೆರೆಯಲ್ಲಿ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್, ಬಾಬೂ ಜಗಜೀವನ ರಾಂ ಜಯಂತಿ ಕಾರ್ಯಕ್ರಮವನ್ನು ಮುಖಂಡರು ದೀಪ ಬೇಳಗುವ ಮೂಲಕ ಉದ್ಘಾಟಿಸಿದರು. ಈ ವೇಳೆ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ವೀರಭದ್ರಯ್ಯ ಇದ್ದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಪ್ರಸ್ತುತ ಕಾಲಘಟ್ಟದ ಮಹಿಳೆಯರಲ್ಲಿ ಅಂಬೇಡ್ಕರ್ ವಿಚಾರಗಳನ್ನು ಬಿತ್ತಬೇಕಿದೆ. ಆ ಮೂಲಕ ಸಮಾಜದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಅಂಬೇಡ್ಕರ್ ನೀಡಿದ ಕಾನೂನುಗಳು ಸಾಕಾರಗೊಳ್ಳಲಿವೆ ಎಂದು ಮೖಸೂರಿನ ಬುದ್ಧ ಬೆಳಕು ನಾಟಕ ತಂಡದ ಸಂಚಾಲಕ ಹಾಗೂ ವಿಚಾರವಾದಿ ಮಲ್ಕುಂಟೆ ಮಹದೇವಸ್ವಾಮಿ ಅಭಿಪ್ರಾಯ ಪಟ್ಟರು.
ಚಳ್ಳಕೆರೆ ನಗರದ ಹೊರವಲಯದಲ್ಲಿರುವ ಅಭಿಷೇಕ್ ನಗರದ ಶಿಲ್ಪ ಭವನದಲ್ಲಿ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್, ಬಾಬು ಜೀವನ ರಾಂ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಯುವಕರಲ್ಲಿ ಅಂಬೇಡ್ಕರಿಸಂ ಎಂಬ ಬೀಜವನ್ನು ಬಿತ್ತುವ ಮೂಲಕ ಮುಂದಿನ ಭಾರತದ ಭವಿಷ್ಯತ್ತಿನ ವಾರಸುದಾರರನ್ನು ಸೃಷ್ಟಿ ಮಾಡಬೇಕಾಗಿದೆ. ಮುಂದಿನ ಪೀಳಿಗೆಗೆ ನಾವು ಪ್ರೀತಿ, ಅನುಕಂಪ, ಬುದ್ಧನ ಮೖತ್ರಿ ಭಾವವನ್ನು ತುಂಬಬೇಕಿದೆ ಎಂದು ಹೇಳಿದರು.
ಅಂಬೇಡ್ಕರಿಸಂ ಎನ್ನುವುದು ಬಾಯಿ ಮಾತಿನ ಚಪಲವಾಗಬಾರದು. ಅವರು ಕಂಡ ಕನಸುಗಳನ್ನು ಈಡೇರಿಸುವ ಕಡೆಗೆ ಶೋಷಿತ ಸಮುದಾಯಗಳು ಹೆಜ್ಜೆ ಹಾಕಬೇಕು. ಅಂಬೇಡ್ಕರ್ ಬುದ್ಧ ಮಾರ್ಗದಲ್ಲಿ ಸಾಗುವ ನಿರ್ಧಾರ ತೆಗೆದುಕೊಂಡಿರುವುದು ಸಾಮಾನ್ಯವಾದುದಲ್ಲ. ಅದೊಂದು ಐತಿಹಾಸಿಕವಾದುದು ಎಂದು ವಿವರಿಸಿದರು.
ಅಂಬೇಡ್ಕರ್ ಪ್ರಜ್ಞೆ ಎಂಬುದು ಮಾನವೀಯ ನೆಲೆಯಲ್ಲಿ ನಿರ್ಮಿತವಾಗಿರುವಂತದ್ದು. ಇಂತಹ ಪ್ರಜ್ಞೆಯನ್ನು ಮೊದಲು ನಮ್ಮ ನಮ್ಮ ಮನೆಗಳಲ್ಲಿ ಬಿತ್ತಬೇಕು. ಆ ನಂತರ ಸಮಾಜದಲ್ಲಿ ಪ್ರಜ್ಞೆ ಬೆಳೆಯುತ್ತದೆ ಎಂದು ಹೇಳಿದರು.
ಒಳ ಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, ಈ ದೇಶದ ಚರಿತ್ರೆಯಲ್ಲಿ ಅಂಬೇಡ್ಕರ್ ಹೆಸರು ಚಿರಸ್ಥಾಯಿಯಾದುದು. ಶೋಷಿತರ ಹಿಂದುಳಿದ ಎಲ್ಲಾ ಬಡವರ ಪರವಾದಂತಹ ಹೋರಾಟವನ್ನು ಮಾಡಿದವರನ್ನು ಇಂದಿನ ಪೀಳಿಗೆ ಮರೆಯಬಾರದು ಎಂದು ಹೇಳಿದರು. ಒಳ ಮೀಸಲಾತಿಯ ಹೋರಾಟ ಮೂರೂವರೆ ದಶಕಗಳದ್ದು. ಈ ದೇಶದಲ್ಲಿ ಎಲ್ಲಾ ಹಕ್ಕುಗಳನ್ನು ಹೋರಾಟ ಮಾಡಿಯೇ ಪಡೆಯಬೇಕಾಗಿದೆ ಎಂದರು.
ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್ ಮಾತನಾಡಿ, ನಿಗಮದ ಅಧ್ಯಕ್ಷನಾದಾಗ ಬೂದಿಹಳ್ಳಿ ಸಂತ್ರಸ್ಥರು ಸೇರಿದಂತೆ ಚಮ್ಮಾರಿಕೆ ಮಾಡುವ ಕುಟುಂಬಗಳಿಗೆ 175ಮನೆಗಳಿಗೆ ಅನುದಾನ ನೀಡಿ ಮನೆ ನಿರ್ಮಿಸಲಾಗಿದೆ. ಇಂತಹ ಮನೆಗಳಿಗೆ ಕಾಂಪೌಂಡ್, ಶಿಲ್ಪ ಭವನ, ಸೇರಿದಂತೆ ಸಿಸಿ ರಸ್ತೆ ಎಲ್ಲವನ್ನೂ ಮಾಡಿದ್ದೇನೆ. ಮನೆಗಳು ನಿರ್ಮಾಣವಾಗಿ ವರ್ಷಗಳೇ ಕಳೆದರೂ ಇನ್ನೂ ಮನೆಗಳಿಗೆ ಹೋಗದಿರುವುದು ಏಕೆ? ಎಂದು ಪ್ರಶ್ನಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ ಮಾತನಾಡಿ, ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುವ ಕಡೆಗೆ ಎಲ್ಲರೂ ಗಮನಹರಿಸಬೇಕು. ಬದಲಾದ ಕಾಲಘಟ್ಟದಲ್ಲಿ ಅಂಬೇಡ್ಕರ್ ಮಾರ್ಗದಲ್ಲಿ ನಡೆಯಬೇಕಾದರೆ ಶಿಕ್ಷಣದ ಅರಿವು ಬಹಳ ಮುಖ್ಯ ಎಂದರು.
ಶಿಕ್ಷಣ ಪಡೆದು ಸ್ವಾಭಿಮಾನಿಗಳಾಗಿ ಸಮಾಜದ ಇತರರಿಗೆ ಉದಾರಿಗಳಾಗಿ ಸ್ಪಂದಿಸುವ ಗುಣ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿ ಅರಿವಿನ ದಾರಿಯನ್ನು ಕಂಡಕೊಂಡು ಎಲ್ಲರೂ ಪ್ರಜ್ಞೆಯನ್ನು ಪಡೆದುಕೊಳ್ಳುವಂತಾಗಬೇಕು. ತಾಲೂಕಿನ ಮಾದಿಗ ಸಮುದಾಯಕ್ಕೆ ಹಕ್ಕುಪತ್ರಗಳನ್ನು ಕೊಡಿಸಿಕೊಡುವ ಕೆಲಸ ಆಗಬೇಕು. ಅಭಿಷೇಕ್ ನಗರದ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ಕೊಡಬೇಕು ಎಂದು ಒತ್ತಾಯಿಸಿದರು.
ದಲಿತ ವಿಮೋಚನಾ ಮಾನವ ಹಕ್ಕುಗಳ ಸಂಚಾಲಕ ಭೀಮನಕೆರೆ ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಅಂಬೇಡ್ಕರ್ ಕುರಿತು ವಕೀಲ ಪರಮೇಶ್ ಉಪನ್ಯಾಸ ನೀಡಿದರು. ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಹೊನ್ನೂರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಪಿ.ದ್ಯಾಮಯ್ಯ, ದಲಿತ ಚಳವಳಿ ಮುಖಂಡ ಟಿ.ವಿಜಯಕುಮಾರ್, ಹೊಟ್ಟೆಪ್ಪನಹಳ್ಳಿ ಕಾಂತರಾಜ್, ಹಳೇಟೌನ್ ವೀರಭದ್ರಿ, ಆರೋಗ್ಯ ಇಲಾಖೆ ಕುದಾಪುರ ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ, ಪಿ.ದ್ಯಾಮಯ್ಯ, ಕೋಲಮ್ಮನಹಳ್ಳಿ ಬಸವರಾಜು, ಹೊನ್ನೂರು ಮಾರಣ್ಣ, ಜಯಣ್ಣ, ಬೋರಣ್ಣ, ಗಾಂಧೀನಗರ ಚಂದ್ರು, ಸುಶೀಲಮ್ಮ, ರೇಣುಕಮ್ಮ, ಪರಮೇಶ್ ಮೌರ್ಯ, ಡಿ. ನಿಂಗರಾಜ್, ರವಿಕುಮಾರ್, ಗಾಯಕ ಮುತ್ತುರಾಜು, ಎನ್. ಪ್ರಕಾಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.