ಅಂಬೇಡ್ಕರ್ ಪುತ್ಥಳಿ ವಿವಾದ; ವಿಧಾನಸೌಧದತ್ತ ಹೆಜ್ಜೆ ಹಾಕಿದ ಸಂಘಟನೆಗಳು

KannadaprabhaNewsNetwork | Published : Mar 14, 2025 12:35 AM

ಸಾರಾಂಶ

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬ ತಿಂಗಳುಗಳಿಂದ ಅಂಬೇಡ್ಕರ್ ಪುತ್ಥಳಿಗೆ ಕೊಳಕು ಬಟ್ಟೆಯನ್ನು ಮುಚ್ಚಿ ಅವರಿಗೆ ಅಪಮಾನ ಮಾಡುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಧೋರಣೆಯನ್ನು ಖಂಡಿಸಿ, ದಲಿತ ಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ವಿಧಾನಸೌಧ ಚಲೋ ಪಾದಯಾತ್ರೆಯಲ್ಲಿ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್, ಮಾಜಿ ಸಂಸದ ಎಸ್.ಮುನಿಸ್ವಾಮಿ ಹೆಜ್ಜೆ ಹಾಕಿದರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೬ ತಿಂಗಳುಗಳಿಂದ ಅಂಬೇಡ್ಕರ್ ಪುತ್ಥಳಿಗೆ ಕೊಳಕು ಬಟ್ಟೆಯನ್ನು ಮುಚ್ಚಿ ಅವರಿಗೆ ಅಪಮಾನ ಮಾಡುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಧೋರಣೆಯನ್ನು ಖಂಡಿಸಿ, ದಲಿತ ಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ವಿಧಾನಸೌಧ ಚಲೋ ಪಾದಯಾತ್ರೆಯಲ್ಲಿ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್, ಮಾಜಿ ಸಂಸದ ಎಸ್.ಮುನಿಸ್ವಾಮಿ ಹೆಜ್ಜೆ ಹಾಕಿದರು.

ಕೊಳಕು ಬಟ್ಟೆಯನ್ನು ತೆರವುಗೊಳಿಸುವುದಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭರವಸೆ ನೀಡಿದ್ದರಾದರೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಭರವಸೆ ಹುಸಿಯಾಗಿದ್ದು, ಇವರ ಧೋರಣೆಯನ್ನು ಖಂಡಿಸಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿಧಾನಸೌಧ ಚಲೋ ಪಾದಯಾತ್ರೆ ನಗರದ ಅಂಬೇಡ್ಕರ್ ಭವನದಿಂದ ಆರಂಭಗೊಂಡಾಗ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್, ಮಾಜಿ ಸಂಸದ ಎನ್. ಮುನಿಸ್ವಾಮಿ, ಬಿಜೆಪಿ ಪಕ್ಷದ ಮುಖಂಡ ದೇವನಹಳ್ಳಿ ವೇಣುಗೋಪಾಲ್ ಮತಿತ್ತರರು ಹೆಜ್ಜೆ ಹಾಕಿದರು.

ಕೈವಾರ ಕ್ರಾಸ್‌ನಲ್ಲಿ ಪಾದಯಾತ್ರೆಯನ್ನು ಉದ್ದೇಶಿಸಿ ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಮಾತನಾಡಿ, ಚಿಂತಾಮಣಿಯಲ್ಲಿ ಅಂಬೇಡ್ಕರ್ ಪುತ್ಥಳಿ ವಿಚಾರವಾಗಿ ಈಗಾಗಲೇ ಎರಡು ಹಂತದ ಚಳವಳಿ ನಡೆದಿದೆ, ಮೂರನೇ ಹಂತವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೂಡಲೇ ಸರ್ಕಾರ ಅಥವಾ ಸ್ಥಳೀಯ ಸಚಿವರು ಎಚ್ಚೆತ್ತುಕೊಂಡು ಅಂಬೇಡ್ಕರ್ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೆರವುಗೊಳಿಸಿ, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವೇ ಅಂಬೇಡ್ಕರ್ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೆಗೆಯಬೇಕಾಗುತ್ತದೆಯೆಂದು ಎಚ್ಚರಿಕೆ ನೀಡಿದರು.

ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ, ತಾಲೂಕಿನ ಇತಿಹಾಸವನ್ನು ಅವಲೋಕಿಸಿದಾಗ ಸಚಿವ ಡಾ.ಎಂ.ಸಿ ಸುಧಾಕರ್‌ರ ಕುಟುಂಬದವರು ತಾಲೂಕಿನಲ್ಲಿ ಒಂದೇ ಒಂದು ಅಂಬೇಡ್ಕರ್‌ ಪುತ್ಥಳಿಯನ್ನು ಇಡಲು ಅವಕಾಶ ಮಾಡಿಕೊಟ್ಟಿಲ್ಲ, ನಗರದಲ್ಲಿನ ಶಾಲೆಯನ್ನು ಲಿಯೋ ಕ್ಲಬ್ ಆಫ್ ಮಾರ್ಗದವರು ದತ್ತು ಪಡೆದುಕೊಂಡು ೧.೫ ಕೋಟಿ ರು. ವೆಚ್ಚದಲ್ಲಿ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಂತೆ ಅಭಿವೃದ್ಧಿಪಡಿಸಿ ಅಂಬೇಡ್ಕರ್‌ರ ಪುತ್ಥಳಿ ಇಡಲು ಎಲ್ಲಾ ಸಿದ್ಧತೆ ನಡೆಸಿದ್ದರು, ಸಚಿವ ಡಾ.ಎಂ.ಸಿ ಸುಧಾಕರ್ ಸರ್ಕಾರಿ ಶಾಲಾ ಜಾಗವನ್ನು ಲಪಟಾಯಿಸಲು ಆ ಶಾಲೆಯಲ್ಲಿ ಅಂಬೇಡ್ಕರ್ ಪುತ್ಥಳಿ ಇಡಲು ಅವಕಾಶ ಮಾಡಿಕೊಡುತ್ತಿಲ್ಲ, ಅಂಬೇಡ್ಕರ್ ಸಂವಿಧಾನದಡಿ ಅಧಿಕಾರ ಪಡೆದುಕೊಂಡಿರುವ ಸಚಿವರಿಗೆ ಅಂಬೇಡ್ಕರ್‌ರ ಮೇಲೆ ಗೌರವವಿದ್ದರೆ ಪುತ್ಥಳಿಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೆರವುಗೊಳಿಸಲು ಮುಂದಾಗಬೇಕು, ಇಲ್ಲವಾದಲ್ಲಿ ಮುಂದೆ ಆಗುವ ಅನಾಹುತಕ್ಕೆ ಸಚಿವರೇ ಕಾರಣರಾಗಿರುತ್ತಾರೆಂದು ಎಚ್ಚರಿಸಿದರು.

ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮಾತನಾಡಿ, ಸಚಿವ ಡಾ. ಎಂ.ಸಿ ಸುಧಾಕರ್ ಕುಟುಂಬದವರು ಶಾಲಾ ಮಕ್ಕಳಿಗಾಗಿ ಮೀಸಲಿಟ್ಟಿರುವ ಶಾಲಾ ಜಾಗವನ್ನು ಲಪಟಾಯಿಸಲು ಪ್ರಯತ್ನಿಸುತ್ತಿರುವುದರಿಂದ ಪುತ್ಥಳಿಯನ್ನು ಅನಾವರಣಗೊಳಿಸಲು ಮುಂದಾಗುತ್ತಿಲ್ಲ, ಸಚಿವರು ಅಂಬೇಡ್ಕರ್ ವಿರೋಧಿ, ದಲಿತ ವಿರೋಧಿಯಾಗಿದ್ದು, ಸಚಿವರಿಗೆ ಅಂಬೇಡ್ಕರ್‌ರ ಮೇಲೆ ಅಭಿಮಾನವಿದ್ದರೆ ದಲಿತ ಪರ ಸಂಘಟನೆಗಳೊಂದಿಗೆ ಚರ್ಚಿಸಿ, ಕೊಳಕು ಬಟ್ಟೆ ತೆರವುಗೊಳಿಸಲು ಮುಂದಾದರೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಬಿಜೆಪಿ ಮುಖಂಡ ದೇವನಹಳ್ಳಿ ಜಿ.ಎನ್. ವೇಣುಗೋಪಾಲ್ ಮಾತನಾಡಿದರು.

ಪಾದಯಾತ್ರೆಯಲ್ಲಿ ದಲಿತ ಪರ ಸಂಘಟನೆಗಳ ಮುಖಂಡರು, ಅಂಬೇಡ್ಕರ್‌ರ ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು. ತಳಗವಾರದಲ್ಲಿ ಮಧ್ಯಾಹ್ನದ ಊಟ ಸೇವಿಸಿ ರಾತ್ರಿ ಎಚ್. ಕ್ರಾಸ್ ನ ಕಲ್ಯಾಣಮಂಟಪವೊಂದರಲ್ಲಿ ತಂಗಿರುವ ಪಾದಯಾತ್ರಿಗಳು ಶುಕ್ರವಾರ ಹೊಸಕೋಟೆಯಡೆಗೆ ಪಾದಯಾತ್ರೆ ಮುಂದುವರಿಸಲಿದ್ದಾರೆ.

Share this article