ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಮುಖ್ಯ ರಸ್ತೆಯಲ್ಲಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಮಹೇಶ್ ತಿಳಿಸಿದರು.ಕೊಳ್ಳೇಗಾಲದಿಂದ ಹನೂರು ಪಟ್ಟಣದವರೆಗೆ ಕೆಶಿಪ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಹನೂರು ಮುಖ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ರಸ್ತೆಯ ಮಧ್ಯಭಾಗಕ್ಕೆ ಸ್ಥಳಾಂತರ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದರು. ಈ ಹಿನ್ನೆಲೆ ಷರತ್ತಿಗೆ ಒಳಪಟ್ಟು ಜಿಲ್ಲಾಧಿಕಾರಿ ಆದೇಶದಂತೆ ಪ್ರತಿಮೆ ಸ್ಥಳಾಂತರ ಮಾಡಲಾಗಿದೆ. ರಸ್ತೆಯ ಮಧ್ಯಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಲು ಅನುಮೋದನೆಗಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ನಂತರ ಕೆಶಿಫ್ ಇಂಜಿನಿಯರ್‌ಗಳು ಕಾಮಗಾರಿ ಪ್ರಾರಂಭಿಸಲಿದ್ದಾರೆ ಎಂದರು.
ಭದ್ರತೆಗೆ ಸೂಚನೆ: ಇನ್ನು ಅಂಬೇಡ್ಕರ್ ಪ್ರತಿಮೆಯನ್ನು ಸ್ಥಳಾಂತರ ಮಾಡಲಾಗಿದ್ದು, ಪುತ್ಥಳಿ ನಿರ್ಮಾಣ ಮಾಡುವವರೆಗೆ ಪಪಂ ಸಮಾಜ ಕಲ್ಯಾಣ ಇಲಾಖೆ ಹಾಗೂ ಅಂಬೇಡ್ಕರ್ ಸಂಘದವರಿಗೆ ಹಸ್ತಾಂತರ ಮಾಡಲಾಗಿದೆ. ಇದಲ್ಲದೆ ಪೊಲೀಸರು ಸಹ ಪ್ರತಿನಿತ್ಯ ಬೀಟ್ ಮಾಡಿ ಸೂಕ್ತ ರಕ್ಷಣೆ ಒದಗಿಸಲಿದ್ದಾರೆ ಎಂದರು .ಕೆ ಶಿಪ್ ರಸ್ತೆ ಅಭಿವೃದ್ಧಿಗೆ ಕ್ರಮ: 108 ಕೋಟಿ ವೆಚ್ಚದಲ್ಲಿ ಕೊಳ್ಳೇಗಾಲದಿಂದ ಹನೂರು ಪಟ್ಟಣದವರೆಗೆ ನಡೆಯುತ್ತಿರುವ ಕೆಶಿಪ್ ರಸ್ತೆ ಯೋಜನೆ ಕಾಮಗಾರಿ ಪ್ರಾರಂಭವಾಗಿ ಐದು ವರ್ಷಗಳು ಕಳೆದಿದೆ. ಆದರೂ ಇನ್ನೂ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಜಿಲ್ಲಾಧಿಕಾರಿ ಇನ್ನು ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಪಟ್ಟಣದ ಇಬ್ಬರು ವಾಣಿಜ್ಯ ಮಾಲೀಕರಿಗೆ ಹಣ ನೀಡಬೇಕಾಗಿದ್ದು ಇಂದೇ ಹಣ ಪಾವತಿ ಮಾಡಲಾಗುವುದು. ರಸ್ತೆ ಅಭಿವೃದ್ಧಿ ಸಂಬಂಧ ಇನ್ನೂ ಒಂದು ವಾರದವರೆಗೆ ಹನೂರು ಪಟ್ಟಣದಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.ಸೂಕ್ತ ಪೊಲೀಸ್ ಬಂದೋಬಸ್ತ್: ಕೆಶಿಪ್ ರಸ್ತೆ ಅಭಿವೃದ್ಧಿ ಸಂಬಂಧ ಅಂಬೇಡ್ಕರ್ ಪುತ್ಥಳಿಯನ್ನು ಸ್ಥಳಾಂತರ ಮಾಡುತ್ತಿದ್ದ ಹಿನ್ನೆಲೆ ಯಾವುದೇ ಹಿತಕರ ಘಟನೆ ನಡೆದಂತೆ ಇನ್ಸ್‌ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.ಸ್ಥಳಾಂತರ ವೇಳೆ ತಹಸೀಲ್ದಾರ್ ವೈ ಕೆ ಗುರುಪ್ರಸಾದ್, ಪಪಂ ಮುಖ್ಯಾಧಿಕಾರಿ ಆರ್ ಅಶೋಕ್, ಇನ್ಸ್‌ಪೆಕ್ಟರ್ ಶಶಿಕುಮಾರ್, ಕೆಶಿಪ್ ಯೋಜನಾ ನಿರ್ದೇಶಕ ಮುತ್ತಣ್ಣ, ಗ್ರಾಮ ಆಡಳಿತಾಧಿಕಾರಿ ಶೇಷಣ್ಣ, ಮಹಾಂತೇಶ್ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.