ಗ್ರಾಮಗಳಲ್ಲಿ ಅಂಬೇಡ್ಕರ್‌ ಟೆಂಟ್‌ ಗ್ರಂಥಾಲಯ ಅಭಿಯಾನ

KannadaprabhaNewsNetwork | Updated : Dec 14 2023, 01:31 AM IST

ಸಾರಾಂಶ

ಗ್ರಾಮಗಳಲ್ಲಿ ಅಂಬೇಡ್ಕರ್‌ ಟೆಂಟ್‌ ಗ್ರಂಥಾಲಯ ಅಭಿಯಾನಅಂಬೇಡ್ಕರ್‌ ಕುರಿತು ಯುವಜನತೆಗೆ ಮಾಹಿತಿ ನೀಡುವ ಉದ್ದೇಶ: ಸಾಹಿತಿ ರಾಮಯ್ಯ

ಅಂಬೇಡ್ಕರ್‌ ಕುರಿತು ಯುವಜನತೆಗೆ ಮಾಹಿತಿ ನೀಡುವ ಉದ್ದೇಶ: ಸಾಹಿತಿ ರಾಮಯ್ಯಕನ್ನಡಪ್ರಭ ವಾರ್ತೆ ಕೋಲಾರ

ಗ್ರಹಿಕೆಗಳು ಮಸುಕಾಗುತ್ತಿರುವ ಬಿಕ್ಕಟ್ಟಿನ ಈ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ನುಡಿ ಸೇನಾನಿಗಳಾಗಬೇಕು ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ೨೦೨೩ ಹಾಗೂ ಜಾಗೃತಿ ಅರಿವು ಸಪ್ತಾಹ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಉತ್ತಮ ಓದುಗರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಪುಸ್ತಕ ಆತ್ಮವಿಶ್ವಾಸ ಮೂಡಿಸಬೇಕು

ಮನಸ್ಸಿನ ಸೋಂಕು ನಿವಾರಿಸಲು ನುಡಿಗಳಿಂದ ಮಾತ್ರ ಸಾಧ್ಯ ಎಂದು ವಿವರಿಸಿದ ಅವರು, ಕೋಲಾರ ನಗರ ಹೇಗೆ ಕಸ ಕೊಚ್ಚೆಯ ನಗರವಾಗಿದೆಯೋ ಹಾಗೆಯೇ ಬಹುತೇಕ ಗ್ರಂಥಾಲಯಗಳು ಶೇ.೮೦ರಷ್ಟು ವಿಷ ತುಂಬುವ ಕಸವನ್ನು ಹೊಂದಿವೆ. ಮಕ್ಕಳು ಓದಲೇಬೇಕಾದ ಗ್ರಂಥಗಳು ಗ್ರಂಥಾಲಯಗಳಲ್ಲಿರಬೇಕು, ಮಕ್ಕಳಲ್ಲಿ ಆದಮ್ಯ ಆತ್ಮವಿಶ್ವಾಸ ಮೂಡಿಸುವ ಅಂಬೇಡ್ಕರ್ ಕುರಿತ ಹತ್ತು ಪುಸ್ತಕಗಳು ಗ್ರಂಥಾಲಯಗಳಲ್ಲಿ ಇಲ್ಲವೆಂದರೆ ಹೇಗೆ ಎಂದು ಅವರು ಪ್ರಶ್ನಿಸಿ ಮುಂದಿನ ಪೀಳಿಗೆ ಸರಿದಾರಿಯಲ್ಲಿ ನಡೆಸಬೇಕಾಗಿದೆ ಎಂದರು.

ಅಂಬೇಡ್ಕರ್ ಟೆಂಟ್ ಲೈಬ್ರರಿ

ಗ್ರಂಥಾಲಯಗಳಿಗೆ ಜನರು ಬಾರದಿದ್ದಾಗ ಗ್ರಂಥಾಲಯಗಳೇ ಜನರ ಬಳಿಗೆ ಹೋಗಬೇಕು, ಆದರೆ, ಇಂತ ಯಾವುದೇ ಸಿದ್ಧತೆಗಳಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇದಕ್ಕಾಗಿಯೇ ಅಂಬೇಡ್ಕರ್ ಟೆಂಟ್ ಲೈಬ್ರರಿ ಅಭಿಯಾನ ಪ್ರತಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಂಬೇಡ್ಕರ್‌ರನ್ನು ಯುವ ಪೀಳಿಗೆಗೆ ಪರಿಚಯಿಸಲು ತಾವು ಸಿದ್ಧತೆ ನಡೆಸಿರುವುದಾಗಿ ವಿವರಿಸಿದರು.

ಬಹುಮಾನ ವಿಜೇತರು:

ಗ್ರಂಥಾಲಯ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಆಶುಭಾಷಣ ಸ್ಪರ್ಧೆಯಲ್ಲಿ ಮೊದಲ ಮೂರು ಬಹುಮಾನ ಗೆದ್ದುಕೊಂಡ ನೂತನ ಪದವಿ ಪೂರ್ವ ಕಾಲೇಜಿನ ಅಕ್ಷಿತಾ, ಎನ್.ಹರ್ಷಿತಾ ಹಾಗೂ ಬಾಲಕರ ಪದವಿ ಪೂರ್ವ ಕಾಲೇಜಿನ ರಿಹಾನ್ ಖಾನ್ ಪಡೆದರು. ಜನಪದ ಗೀತೆ ಸ್ಪರ್ಧೆಯಲ್ಲಿ ಚಿನ್ಮಯ ವಿದ್ಯಾಲಯದ ಎಸ್.ಭೂಮಿಕಾ, ಎಸ್.ವೈಭವ್, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆರ್. ಕೃಪಾನಯನ ಪಡೆದರು. ಭಾವಗೀತೆ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಪ್ರಮಾಣಪತ್ರ, ಸ್ಮರಣ ಫಲಕಗಳನ್ನು ನೀಡಲಾಯಿತು.

ಸಮಾರಂಭದಲ್ಲಿ ಗ್ರಂಥಾಲಯ ಪ್ರಾಧಿಕಾರ ಸಮಿತಿ ಸದಸ್ಯ ಬಿ.ವಿ. ಗೋಪಿನಾಥ್, ಪ್ರೊ.ಅರಿವು ಶಿವಪ್ಪ, ಗ್ರಂಥಾಲಯ ಪ್ರಾಧಿಕಾರ ಸಮಿತಿ ಸದಸ್ಯ ಕೆ.ಎಸ್.ಗಣೇಶ್, ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಸಿ.ಗಣೇಶ ಇದ್ದರು. ಗ್ರಂಥಾಪಾಲಕ ಜಿ.ಗಂಗಪ್ಪ, ಮಂಜುಳಾ, ಗ್ರಂಥಪಾಲಕಿ ಆರ್.ನಾಗಮಣಿ ಇದ್ದರು.

೧೨ಕೆಎಲ್‌ಆರ್‌ಪಿ-೧ ಕೋಲಾರ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಮಾರೋಪದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಬಹುಮಾನ ವಿತರಿಸಿದರು.

Share this article