ಸರ್ವರಿಗೂ ಸಮಬಾಳು ನೀಡಿದ ಅಂಬೇಡ್ಕರ್: ಅಬ್ಬಯ್ಯ

KannadaprabhaNewsNetwork | Published : Nov 27, 2024 1:00 AM

ಸಾರಾಂಶ

ಬಾಬಾ ಸಾಹೇಬರು ಶಿಕ್ಷಣದಿಂದ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದಿದ್ದಾರೆ.

ಛಲವಾದಿ ಸಮಾಜದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಅಸಮಾನತೆಯ ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದ ಹಲವಾರು ಸಮಾಜಗಳಿಗೆ ಸಂವಿಧಾನದ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಸಮಬಾಳು ನೀಡಿದ್ದಾರೆ ಎಂದು ಕೊಳಚೆ ನಿರ್ಮೂಲನಾ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದ ಮೇಘರಾಜ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಛಲವಾದಿ ಜಾಗೃತಿ ವೇದಿಕೆ ಹಾಗೂ ಕ್ಷೇಮಾಭಿವೃದ್ಧಿ ಸೇವಾ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಾಬಾ ಸಾಹೇಬರು ಶಿಕ್ಷಣದಿಂದ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದಿದ್ದಾರೆ. ಇಂದು ದೇಶದಲ್ಲಿ ನಮಗೆ ಮೂಲಸೌಕರ್ಯ ದೊರೆತಿವೆ ಎಂದರೆ ಅದಕ್ಕೆ ಸಂವಿಧಾನವೇ ಕಾರಣ. ದೇಶದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿ ಸಂವಿಧಾನದಿಂದ ಆಗಿದೆ. ಅವರು ತಮ್ಮ ಕುಟುಂಬಕ್ಕೆ ಆಸ್ತಿ ಮಾಡಲಿಲ್ಲ. ಈ ದೇಶಕ್ಕೆ ಸಮಾನತೆ ಬರಬೇಕು. ಸರ್ವರಿಗೂ ಸಮಪಾಲು ಸಿಗಬೇಕು ಎಂದು ಕನಸು ಕಂಡು ಹೋರಾಡಿದವರು ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಮಾಡದಿದ್ದರೆ ದೊಡ್ಡ ಅನ್ಯಾಯ ಆಗುತ್ತಿತ್ತು ಎನಿಸುತ್ತೆ. ಅಶಕ್ತ ಜನಕ್ಕೆ ಬಾಬಾಸಾಹೇಬರು ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ವಿದೇಶಗಳ ಸಂವಿಧಾನ ರಚನೆ ಮಾಡಿ, ನಂತರ ಆ ಸಂವಿಧಾನ ನಾಶ ಮಾಡಿ ಹೊಸ ಸಂವಿಧಾನ ರಚನೆ ಮಾಡಿರುವಂತಹ ಉದಾಹರಣೆ ನಮ್ಮ ಮುಂದೆ ಇವೆ. ಆದರೆ ೭೮ ವರ್ಷ ಕಳೆದರೂ ನಮ್ಮ ಸಂವಿಧಾನ ಕಾಪಾಡುತ್ತಾ ಬಂದಿದ್ದೇವೆ ಎಂದರು.

ಸಮಾರಂಭದಲ್ಲಿ ಎಂಎಲ್‌ಸಿ ಹೇಮಲತಾ ನಾಯಕ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿದರು.

ಛಲವಾದಿ ಜಾಗೃತ ವೇದಿಕೆಯ ಜಿಲ್ಲಾ ಸಂಚಾಲಕ ಕೃಷ್ಣ ಇಟ್ಟಂಗಿ, ನಗರಸಭೆ ಸದಸ್ಯರಾದ ರಾಜಶೇಖರ ಆಡೂರು, ಮುತ್ತು ಕುಷ್ಟಗಿ, ಸಮಾಜದ ಜಿ.ಎಂ. ಬೆಲ್ಲದ್, ಸರಸ್ವತಿ ಕೃಷ್ಣ ಇಟ್ಟಂಗಿ, ರಾಘವೇಂದ್ರ ಛಲವಾದಿ, ಡಾ. ಚನ್ನಬಸಪ್ಪ ಛಲವಾದಿ, ಸಿದ್ದು ಮ್ಯಾಗೇರಿ ಸೇರಿ ಇತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

Share this article