ಕನ್ನಡಪ್ರಭ ವಾರ್ತೆ ಭಾರತೀನಗರ
ಚಿತ್ರನಟ ದಿ.ಅಂಬರೀಶ್ ಹುಟ್ಟುಹಬ್ಬದ ಅಂಗವಾಗಿ ಹುಟ್ಟೂರು ದೊಡ್ಡರಸಿನಕೆರೆ ಗ್ರಾಮದಲ್ಲಿ ಅಭಿಮಾನಿಗಳು ನಿರ್ಮಿಸಿರುವ ಅಂಬರೀಶ್ ಪುತ್ಥಳಿಗೆ ಸಂಸದೆ ಸುಮಲತಾ ಹಾಗೂ ಪುತ್ರ ಅಭಿಷೇಕ್ ರೊಂದಿಗೆ ಪೂಜೆಸಲ್ಲಿಸಿದರು.ಗ್ರಾಮದ ಅಂಬಿ ಸರ್ಕಲ್‌ಗೆ ಭೇಟಿ ನೀಡಿ ಅಂಬರೀಶ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ಸಿಹಿ ತಿನಿಸಿದರು. ಇದಕ್ಕೂ ಮೊದಲು ಗ್ರಾಮದ ಮುಖ್ಯದ್ವಾರದಲ್ಲಿ ನಿರ್ಮಿಸಿರುವ ಅಂಬರೀಶ್ ಸ್ಮಾರಕಕ್ಕೆ ಪೂಜೆಸಲ್ಲಿಸಿ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅಭಿಷೇಕ್ ಹಾಗೂ ಸುಮಲತಾ ಆಚರಣೆ ಮಾಡಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಈ ವೇಳೆ ಅಭಿಮಾನಿಗಳು ಅಂಬರೀಶ್‌ಗೆ ಜೈಕಾರ ಹಾಕಿ ಅಂಬಿಯಣ್ಣ ಮತ್ತೆ ಹುಟ್ಟಿ ಬಾ ಎಂದು ಕೂಗಿದರು.ಸಂಸದೆ ಸುಮಲತಾ ಮಾತನಾಡಿ, ಮಂಡ್ಯ ಜಿಲ್ಲೆಯ ಜನತೆ ನನ್ನಪತಿ ಅಂಬರೀಶ್‌ರವರ ಮೇಲೆ ಇಟ್ಟ ಅಭಿಮಾನದಿಂದ ಜಿಲ್ಲೆಯಲ್ಲಿ ಅಂಬರೀಶ್ ಹುಟ್ಟುಹಬ್ಬ ಆಚರಣೆ ನಡೆಯುತ್ತಿದೆ ಎಂದರು.
ಅಂಬರೀಶ್ ಹುಟ್ಟುಹಬ್ಬವನ್ನು ಜಿಲ್ಲೆಯ ಅನೇಕ ಕಡೆ ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಿರುವುದು ನನಗೆ ಸಂತಸ ತರುತ್ತಿದೆ. ಒಂದು ಕಡೇ ನನ್ನ ಪತಿಯನ್ನು ಕಳೆದುಕೊಂಡಿರುವ ನೋವು ಇದೆ. ಆದರೂ ಜನತೆಯ ಈ ಋಣವನ್ನು ಎಂದಿಗೂ ನಾನು ಮರೆಯುವುದಿಲ್ಲ ಎಂದರು.ಹುಲಿಗೆರೆ ಪುರ ಅನಿಕೇತನ ಶಾಲೆಯಿಂದ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸದೆ ಸುಮಲತಾ ಅಭಿನಂದಿಸಿದರು. ನಂತರ ಅಂಬಿ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ತಿನಿಸಿದರು.
ಈ ವೇಳೆ ನಿರ್ಮಾಪಕ ಹಾಗೂ ಚಿತ್ರ ನಟ ರಾಕ್‌ಲೈನ್‌ವೆಂಕಟೇಶ್, ಅಂಬಿ ಸರ್ಕಲ್ ಅಧ್ಯಕ್ಷ ಮಹೇಶ್, ಮುಖಂಡರಾದ ರಘು, ಶಿವು, ರಮೇಶ್, ಜ್ಯೋತಿ, ಅಮರ್, ಮಹೇಂದ್ರ, ಕೃಷ್ಣ, ಲತಾ, ಪ್ರಸನ್ನ, ಸೇರಿದಂತೆ ಹಲವರಿದ್ದರು.ಯಶೋಧಮ್ಮ ಕುಟುಂಬಕ್ಕೆ ಸಂಸದೆ ಸುಮಲತಾ ಸಾಂತ್ವನ
ಮದ್ದೂರು:ತಾಲೂಕು ಅಂಬರೀಶ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಮಹೇಂದ್ರರ ಸಹೋದರಿ ಯಶೋಧಮ್ಮ ನಿಧನದ ಹಿನ್ನೆಲೆಯಲ್ಲಿ ಮುಟ್ಟನಹಳ್ಳಿ ನಿವಾಸಕ್ಕೆ ಸಂಸದೆ ಸುಮಲತಾ ಅಂಬರೀಶ್ ಬುಧವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ತಾಲೂಕಿನ ದೊಡ್ಡ ಅರಸಿನಕೆರೆ ಗ್ರಾಮದ ಅಂಬರೀಶ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮುಟ್ಟನಹಳ್ಳಿಯ ಮಹೇಂದ್ರ ನಿವಾಸಕ್ಕೆ ಭೇಟಿ ನೀಡಿ ಅವರ ಸಹೋದರಿ ಯಶೋಧಮ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಪುತ್ರ ಅಭಿಷೇಕ್ ಅಂಬರೀಶ್. ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಒಕ್ಕೂಟದ ಪದಾಧಿಕಾರಿಗಳು ಇದ್ದರು.