ಸೌಹಾರ್ದತೆಯಿಂದ ಅಂತಾರಾಜ್ಯ ಗಡಿ, ಜಲ ವಿವಾದ ಪರಿಹಾರ

KannadaprabhaNewsNetwork |  
Published : Jul 11, 2024, 01:35 AM IST
ಕಾರ್ಯಕ್ರಮದಲ್ಲಿ ಡಾ. ವಿದ್ಯಾ ಹಡಗಲಿ ಮಾತನಾಡಿದರು. | Kannada Prabha

ಸಾರಾಂಶ

ಕೇಂದ್ರ ಸರ್ಕಾರವು 1956ರಲ್ಲಿ ಅಂತಾರಾಜ್ಯ ನದಿ ನೀರಿನ ವಿವಾದಗಳ ಕಾಯ್ದೆಯನ್ನು ಭಾರತ ಸಂವಿಧಾನದ 262ನೇ ವಿಧಿಯ ಅಡಿಯಲ್ಲಿ ಜಾರಿಗೊಳಿಸಲಾಗಿದೆ

ಗದಗ: ಅಂತಾರಾಜ್ಯಗಳ ಗಡಿ, ಜಲ ವಿವಾದಗಳನ್ನು ಸೌಹಾರ್ದತೆಯಿಂದ ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ಅಣ್ಣಿಗೇರಿಯ ಎಂ.ಬಿ. ಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕಿ ಡಾ.ವಿದ್ಯಾ ಹಡಗಲಿ ಹೇಳಿದರು.

ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ, ಐಕ್ಯುಎಸಿ ಅಡಿಯಲ್ಲಿ ಆಯೋಜಿಸಿದ್ದ ಅಂತಾರಾಜ್ಯ ಗಡಿ ಮತ್ತು ಜಲ ವಿವಾದಗಳು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕರ್ನಾಟಕ ಮತ್ತು ಇದರ ನೆರೆಹೊರೆಯ ಮಹಾರಾಷ್ಟ್ರ,ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ನಡುವೆ ಗಡಿ ಮತ್ತು ಜಲ ವಿವಾದಗಳು ದಶಕಗಳಿಂದಲೂ ನಡೆಯುತ್ತ ಬಂದಿವೆ. ಈ ವಿವಾದಗಳನ್ನು ಪರಿಹರಿಸಲು ಸಂಬಂಧಿಸಿದ ನ್ಯಾಯಮಂಡಳಿಗಳು ಮಾರ್ಗೋಪಾಯಗಳನ್ನು ಕಾಯ್ದೆಗಳ ಮೂಲಕ ಜಾರಿಗೊಳಿಸಿದರೂ ಇವು ಒಂದಿಲ್ಲೊಂದು ಬಗೆಯಲ್ಲಿ ಮುಂದುವರೆಯುತ್ತ ಬಂದಿವೆ. ಈ ವಿವಾದಗಳನ್ನು ಪರಸ್ಪರ ಚರ್ಚೆ, ಮಾತುಕತೆಗಳ ಮೂಲಕ ಪರಿಹರಿಸಲು ಪ್ರಯತ್ನಗಳು ನಡೆದರೂ ಈವರೆಗೆ ಪರಿಹಾರ ಕಾಣಲು ಸಾಧ್ಯವಾಗುತ್ತಿಲ್ಲ. ಇದರಿಂದ ಪರಸ್ಪರ ರಾಜ್ಯಗಳ ಪ್ರಜೆಗಳಲ್ಲಿ ವೈರತ್ವ ಹೆಚ್ಚಾಗುತ್ತಿದೆ ಎಂದರು.

ಕೇಂದ್ರ ಸರ್ಕಾರವು 1956ರಲ್ಲಿ ಅಂತಾರಾಜ್ಯ ನದಿ ನೀರಿನ ವಿವಾದಗಳ ಕಾಯ್ದೆಯನ್ನು ಭಾರತ ಸಂವಿಧಾನದ 262ನೇ ವಿಧಿಯ ಅಡಿಯಲ್ಲಿ ಜಾರಿಗೊಳಿಸಲಾಗಿದೆ. ಅಂತಾರಾಜ್ಯ ನದಿ ನೀರಿನ ಬಳಕೆ, ನಿಯಂತ್ರಣ ಮತ್ತು ವಿತರಣೆಯಲ್ಲಿ ಉದ್ಭವಿಸುವ ನೀರಿನ ವಿವಾದ ಪರಿಹರಿಸಲು ಹಾಗೂ ಸಂಬಂಧಿತ ರಾಜ್ಯಗಳ ನಡುವಿನ ಒಪ್ಪಂದಗಳನ್ನು ಇನ್ನಷ್ಟು ಸರಳಗೊಳಿಸಲು ಈ ಕಾಯ್ದೆಯಲ್ಲಿ ಅನೇಕ ತಿದ್ದುಪಡಿ ಮಾಡುತ್ತ ಬರಲಾಗಿದೆ. 2019ರ ಜು. 25ರಂದು ಅಂತಾರಾಜ್ಯ ನದಿ ನೀರಿನ ವಿವಾದಗಳ (ತಿದ್ದುಪಡಿ) ಮಸೂದೆ ಜಾರಿಗೊಳಿಸಿ, ಅಂತಾರಾಜ್ಯ ನದಿ ನೀರಿನ ವಿವಾದಗಳ ತೀರ್ಪನ್ನು ಮತ್ತಷ್ಟು ಸುಗಮಗೊಳಿಸಲಾಗಿದೆ ಎಂದರು.

ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಇತಿಹಾಸ ವಿಭಾಗದ ಮೂಲಕ ಕೈಗೊಳ್ಳುತ್ತಿರುವ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಅಧ್ಯಯನ ಪ್ರವಾಸಗಳು, ಐತಿಹಾಸಿಕ ಸ್ಥಳಗಳಿಗೆ ಭೇಟಿ, ಕ್ಷೇತ್ರಕಾರ್ಯ ಅಧ್ಯಯನಗಳು, ವಿಶೇಷ ಉಪನ್ಯಾಸಗಳು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿವೆ ಎಂದರು.

ಈ ವೇಳೆ ಐಕ್ಯುಎಸಿ ಸಹ ಸಂಯೋಜಕ ಡಾ.ಮಂಜುನಾಥ ತ್ಯಾಳಗಡಿ, ಪ್ರಾಂಶುಪಾಲ ಡಾ.ಶಿವಪ್ಪ ಕುರಿ ಮಾತನಾಡಿದರು.

ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ಬಸವಂತಪ್ಪ ದೊಡ್ಡಮನಿ ನಿರ್ವಹಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ