ಅಡ್ಡಮತದಾನ ಭೀತಿ ಮಧ್ಯೆ ನಾಳೆ ಪರಿಷತ್ತಿಗೆ ಎಲೆಕ್ಷನ್‌

KannadaprabhaNewsNetwork |  
Published : Jun 17, 2026, 02:00 AM IST
ಪರಿಷತ್‌  | Kannada Prabha

ಸಾರಾಂಶ

ಅಡ್ಡಮತದಾನದ ಭೀತಿ ನಡುವೆ ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿದ್ದು, ಪ್ರಮುಖ ಮೂರು ರಾಜಕೀಯ ಪಕ್ಷಗಳು ಕೊನೆಯ ಹಂತದ ತಂತ್ರಗಾರಿಕೆಯಲ್ಲಿ ತೊಡಗಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಡ್ಡಮತದಾನದ ಭೀತಿ ನಡುವೆ ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿದ್ದು, ಪ್ರಮುಖ ಮೂರು ರಾಜಕೀಯ ಪಕ್ಷಗಳು ಕೊನೆಯ ಹಂತದ ತಂತ್ರಗಾರಿಕೆಯಲ್ಲಿ ತೊಡಗಿವೆ.

ಈ ಏಳು ಸ್ಥಾನಗಳಿಗೆ ಕಾಂಗ್ರೆಸ್‌ ಐವರು, ಬಿಜೆಪಿ ಇಬ್ಬರು ಮತ್ತು ಜೆಡಿಎಸ್‌ ಓರ್ವ ಸೇರಿ ಒಟ್ಟು ಎಂಟು ಮಂದಿ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಿವೆ. ಇಲ್ಲಿ ಒಂದು ಸ್ಥಾನ ಗೆಲ್ಲಲು 28 ಮತಗಳ ಅಗತ್ಯವಿದೆ. ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳ ಶಾಸಕರ ಸಂಖ್ಯಾಬಲ ನೋಡಿದಾಗ, ಕಾಂಗ್ರೆಸ್‌ 135, ಬಿಜೆಪಿ 62 ಮತ್ತು ಜೆಡಿಎಸ್‌ 18 ಶಾಸಕರ ಸಂಖ್ಯಾಬಲ ಹೊಂದಿವೆ.

ಈ ಶಾಸಕ ಸಂಖ್ಯಾಬಲದ ಆಧಾರದ ಮೇಲೆ 7 ಸ್ಥಾನಗಳ ಪೈಕಿ ಕಾಂಗ್ರೆಸ್‌ 4 ಮತ್ತು ಬಿಜೆಪಿ 2 ಸ್ಥಾನ ಗೆಲ್ಲುವುದು ನಿಶ್ಚಿತ. ಇನ್ನು ಜೆಡಿಎಸ್‌ಗೆ ಒಂದು ಸ್ಥಾನ ಗೆಲ್ಲುವಷ್ಟೂ ಮತಗಳು ಇಲ್ಲ. ಆದರೂ ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಪೈಪೋಟಿ ನೀಡಲು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹೀಗಾಗಿ ಚುನಾವಣಾ ಕಣ ರೋಚಕತೆ ಪಡೆದುಕೊಂಡಿದೆ.

ಮತಗಳ ಲೆಕ್ಕಾಚಾರ ಜೋರು:

ಕಾಂಗ್ರೆಸ್‌ನ 135 ಮತಗಳ ಪೈಕಿ ನಾಲ್ವರು ಅಭ್ಯರ್ಥಿಗಳು ಗೆಲುವಿಗೆ ತಲಾ 28 ಮತಗಳಂತೆ 112 ಮತಗಳು ಸಾಕು. ಐದನೇ ಅಭ್ಯರ್ಥಿ ಗೆಲುವಿಗೆ ಉಳಿಕೆ 23 ಮತಗಳ ಜೊತೆಗೆ ಇನ್ನೂ 5 ಮತಗಳ ಕೊರತೆ ಉಂಟಾಗಲಿದೆ. ಬಿಜೆಪಿ 62 ಮತಗಳ ಪೈಕಿ ಇಬ್ಬರ ಗೆಲುವಿಗೆ ತಲಾ 28 ಮತಗಳಂತೆ 56 ಮತಗಳು ಸಾಕಾಗುತ್ತದೆ. 6 ಮತಗಳು ಉಳಿಯುತ್ತವೆ. ಜೆಡಿಎಸ್‌ನ ಬಳಿ ಕೇವಲ 18 ಮತಗಳಿವೆ. ಮೈತ್ರಿ ಪಕ್ಷ ಬಿಜೆಪಿಯಿಂದ ಈ ಆರು ಮತ ಪಡೆದರೂ ಒಟ್ಟು 24 ಮತಗಳಾಗಲಿವೆ. ಗೆಲುವಿಗೆ ಇನ್ನೂ 4 ಮತಗಳ ಕೊರತೆ ಉಂಟಾಗಲಿದೆ.

ಕಾಂಗ್ರೆಸ್‌ ತನ್ನ 5ನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು 5 ಮತಗಳ ಸೆಳೆಯಲು ತಂತ್ರಗಾರಿಕೆ ರೂಪಿಸಿದೆ. ಸರ್ವೋದಯ ಕರ್ನಾಟಕ ಪಕ್ಷದ(ಕೆಎಸ್‌ಪಿ) ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ಹರಪ್ಪನಹಳ್ಳಿ ಸ್ವತಂತ್ರ ಶಾಸಕಿ ಲತಾ ಮಲ್ಲಿಕಾರ್ಜುನ್‌ ಮತ್ತು ಗೌರಿಬಿದನೂರು ಸ್ವತಂತ್ರ ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೌಡ ಕಾಂಗ್ರೆಸ್‌ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನೇ ಈ ಮೂವರು ಬೆಂಬಲಿಸುವುದು ಖಚಿತವಾಗಿದೆ. ಇನ್ನು ಬಿಜೆಪಿಯಿಂದ ಉಚ್ಚಾಟಿತ ಶಾಸಕರಾದ ಎಸ್‌.ಟಿ.ಸೋಮಶೇಖರ್‌ ಮತ್ತು ಶಿವರಾಮ ಹೆಬ್ಬಾರ್‌ ಅವರ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಈ ಇಬ್ಬರು ಶಾಸಕರ ಮತ ಪಡೆದರೆ, ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವು ಸಾಧ್ಯವಾಗಲಿದೆ.

ಜೆಡಿಎಸ್ ತನ್ನ 18 ಮತಗಳ ಜೊತೆಗೆ ಬಿಜೆಪಿ 6 ಮತ ಪಡೆದರೂ ಒಟ್ಟು 24 ಮತಗಳಾಗಲಿವೆ. ಉಳಿದ 4 ಮತ ಪಡೆಯಲು ಜೆಡಿಎಸ್‌ ಸರ್ಕಸ್‌ ನಡೆಸುತ್ತಿದೆ. ಕೆಆರ್‌ಪಿಪಿ ಪಕ್ಷದ ಶಾಸಕ ಜನಾರ್ಧನ ರೆಡ್ಡಿ ಮತ್ತು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್‌ ಮತ ಪಡೆಯಲು ಪ್ರಯತ್ನಿಸುತ್ತಿದೆ. ಈ ಎರಡು ಮತಗಳು ಸೇರಿದರೂ ಜೆಡಿಎಸ್‌ ಅಭ್ಯರ್ಥಿ ಗೆಲುವಿಗೆ ಇನ್ನೂ 2 ಮತಗಳ ಕೊರತೆ ಉಂಟಾಗಲಿದೆ. ಹೀಗಾಗಿ ಕಾಂಗ್ರೆಸ್‌ ಪಾಳಯದಿಂದಲೇ ಈ 2 ಮತ ಸೆಳೆಯಲು ಜೆಡಿಎಸ್‌ ಪ್ರಯತ್ನಿಸುತ್ತಿದೆ. ಒಂದು ವೇಳೆ ಇದರಲ್ಲಿ ಜೆಡಿಎಸ್‌ ಸಫಲವಾದರೆ, ಕಾಂಗ್ರೆಸ್‌ನ 5ನೇ ಅಭ್ಯರ್ಥಿ ಗೆಲುವು ಕಷ್ಟವಾಗಲಿದೆ ಎನ್ನಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರವಾನಗಿ ಇಲ್ಲದ ವಾಹನ ವಿರುದ್ಧ ಕ್ರಮಕೈಗೊಳ್ಳಿ
ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮುನಿಸ್ವಾಮಯ್ಯನವರಿಗೆ ಆತ್ಮೀಯ ಬೀಳ್ಕೊಡುಗೆ