ಟೀಕೆ, ಗದ್ದಲಗಳ ನಡುವೆ ಸಂಪನ್ನಗೊಂಡ ಯುವ ಸಂಸತ್

KannadaprabhaNewsNetwork | Published : Nov 15, 2024 12:35 AM

ಸಾರಾಂಶ

ಸಂಸದೀಯ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನರಚನೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯುವ ಅಣುಕು ಸಂಸತ್ ಸ್ಪರ್ಧೆ ಆಡಳಿತ ಮತ್ತು ವಿರೋಧ ಪಕ್ಷಗಳ ಪರಸ್ಪರ ಆರೋಪ, ಪ್ರತ್ಯಾರೋಪ, ಕೆಸರೆರೆಚುವಿಕೆ, ಟೀಕೆ ಮತ್ತು ಗದ್ದಲಗಳ ನಡುವೆ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂಸದೀಯ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನರಚನೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯುವ ಅಣುಕು ಸಂಸತ್ ಸ್ಪರ್ಧೆ ಆಡಳಿತ ಮತ್ತು ವಿರೋಧ ಪಕ್ಷಗಳ ಪರಸ್ಪರ ಆರೋಪ, ಪ್ರತ್ಯಾರೋಪ, ಕೆಸರೆರೆಚುವಿಕೆ, ಟೀಕೆ ಮತ್ತು ಗದ್ದಲಗಳ ನಡುವೆ ಸಂಪನ್ನಗೊಂಡಿತು.

ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಂತೆ ವಾದ ಮಂಡಿಸಿದರು. ಆಡಳಿತ ಸದಸ್ಯರಿಂದ ಉತ್ತರ, ಪ್ರತಿಪಕ್ಷದ ಸದಸ್ಯರ ಪ್ರತ್ಯುತ್ತರ ಥೇಟ್ ಜನಪ್ರತಿನಿಧಿಗಳ ಮಾತಿನಂತಿತ್ತು. ಅಧಿವೇಶನ ಕಲಾಪದ ಆರಂಭದಲ್ಲಿ ರಾಷ್ಟ್ರಪತಿಗಳು, ಜಂಟಿ ಸದನ ಉದ್ದೇಶಿಸಿ ಮಾತನಾಡಿದರು. ನಂತರ ನೂತನವಾಗಿ ಆಯ್ಕೆಯಾದ ಸಚಿವರಿಗೆ ಪ್ರಮಾಣ ವಚನ ಬೋಧಿಸಿ, ಸದನವನ್ನು ನಿರ್ಗಮಿಸಿದರು.

ಸಭಾಧ್ಯಕ್ಷರು(ಸ್ಪೀಕರ್) ಆಗಮಿಸಿ, ಸದನ ಉದ್ದೇಶಿಸಿ ಮಾತನಾಡಿ, ಮೊದಲಿಗೆ ಸಂತಾಪ ಸೂಚನೆ ಪ್ರಸ್ತಾಪಿಸಿ ಇತ್ತೀಚಿಗೆ ಅಗಲಿದ ಮಹನೀಯರಾದ ರತನ್ ಟಾಟಾ ಮತ್ತು ಎಂ.ಎಸ್.ಸ್ವಾಮಿನಾಥನ್ ರವರ ಆತ್ಮಕ್ಕೆ ಶಾಂತಿ ಕೋರಿದರು.

ಹಂಗಾಮಿ ಸಭಾಪತಿಗಳು ನೂತನವಾಗಿ ಆಯ್ಕೆಗೊಂಡ ಸದಸ್ಯರಿಗೆ ಪ್ರಮಾಣವಚನ ಬೋಧಿಸುವುದರೊಂದಿಗೆ ಅಧಿವೇಶನ ಆರಂಭಗೊಂಡಿತು. ಸದನದ ನಿಯಮಾನುಸಾರ ಸಭಾಧ್ಯಕ್ಷರ ಆಗಮನ, ಸಂತಾಪ ಸೂಚನೆಯ ನಂತರ ಕಲಾಪ ಆರಂಭಗೊಂಡಿತು.

ಪ್ರಧಾನಮಂತ್ರಿ ಹುದ್ದೆ ನಿರ್ವಹಿಸಿದ ರಾಮನಗರ ಜಿಲ್ಲೆಯ ಬಿಜಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿ ರವಿಕುಮಾರ್ ಹಾಗೂ ವಿರೋಧ ಪಕ್ಷದ ನಾಯಕಿ ಹಾಸನ ಜಿಲ್ಲೆಯ ವರ್ಷಾ ಹಾಗೂ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಅಗಲಿದ ಮಹನೀಯರ ಕುರಿತು ಮಾತನಾಡಿದರು.

ಜಿಲ್ಲೆಯಿಂದ ತಲಾ ಇಬ್ಬರಂತೆ ಒಟ್ಟು 63 ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿ, ನಿರುದ್ಯೋಗ, ಸೈಬರ್ ಅಪರಾಧ, ಎಐ ದುಷ್ಪರಿಣಾಮ, ಸಿಂಧೂ ನದಿ ನೀರು ವಿವಾದ, ರೈತರ ಬೆಳೆ ನಷ್ಟ, ವಕ್ಫ್ ಆಸ್ತಿ ವಿವಾದ, ಒಳ ಮೀಸಲಾತಿ, ರಾಷ್ಟ್ರೀಯ ಶಿಕ್ಷಣ ನೀತಿ, ರಾಜ್ಯ ಶಿಕ್ಷಣ ನೀತಿ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಸೇರಿದಂತೆ ಪ್ರಮುಖ ವಿಷಯಗಳ ಮೇಲೆ ಸುದೀರ್ಘ ಚರ್ಚೆ ನಡೆಸಿದರು.

ಅಧಿವೇಶನದಲ್ಲಿ ಪಾಲ್ಗೊಂಡ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಅಪ್ಪಟ ರಾಜಕಾರಣಿಗಳಂತೆ ವರ್ತಿಸಿ, ನೆರೆದಿದ್ದವರಲ್ಲಿ ಅಚ್ಚರಿ ಹಾಗೂ ಕುತೂಹಲ ಮೂಡಿಸಿದರು. ಅಣುಕು ಯುವಸಂಸತ್ ಸ್ಪರ್ಧೆ ರಾಜ್ಯಸಭೆಯಲ್ಲಿ ನಡೆಯುವ ಅಧಿವೇಶನದ ಚಿತ್ರಣವನ್ನು ಯಥಾವತ್ತಾಗಿ ಅನಾವರಣಗೊಳಿಸುವಲ್ಲಿ ಯಶಸ್ವಿಯಾಯಿತು.ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಕಾಯ್ದೆ ಜಾರಿಗೆ ವಿಧೇಯಕ ಮಂಡನೆ: ರಾಜ್ಯದಲ್ಲಿ ಎಗ್ಗಿಲ್ಲದೇ ಎಲ್ಲೆಂದರಲ್ಲಿ ಮಾರಾಟವಾಗುತ್ತಿರುವ ಬೀಡಿ, ಸಿಗರೇಟು, ಗುಟಕಾ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸಾಗಾಟ ನಿಯಂತ್ರಿಸುವ ನಿಟ್ಟಿನಲ್ಲಿ ಗುರುವಾರ ನಡೆದ ಸದನದಲ್ಲಿ ಆಡಳಿತ ಪಕ್ಷವು ಮಂಡಿಸಿದ ವಿಧೇಯಕ ವಿಪಕ್ಷಗಳ ಸದಸ್ಯರ ಅನುಮೋದನೆಯೊಂದಿಗೆ ಅಂಗೀಕಾರವಾಯಿತು.ರಾಜ್ಯದಲ್ಲಿ ಅಲ್ಲಲ್ಲಿ ಆಗಾಗ್ಗೆ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ನಿರಂತರವಾಗಿವೆ. ಮಹಿಳೆಯರ ರಕ್ಷಣೆ ಇಲ್ಲವಾಗಿದೆ ಎಂಬ ಪ್ರತಿಪಕ್ಷಗಳ ಸದಸ್ಯರ ಆರೋಪಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವೆ ಅವರು ಉತ್ತರಿಸಿ, ಸರ್ಕಾರವು ಈಗಾಗಲೇ ಮಹಿಳಾ ಸಬಲೀಕರಣಕ್ಕೆ ಹಿಂದೆಂದಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಅತ್ಯಾಚಾರ, ದೌರ್ಜನ್ಯ, ಕೌಟುಂಬಿಕ ಹಿಂಸೆಯಂತಹ ಪ್ರಕರಣಗಳ ನಿಯಂತ್ರಣಕ್ಕೆ ಕಠಿಣ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದರು.

ರಾಷ್ಟ್ರಪತಿಯಾಗಿ ಪಿ. ಸಾನಿಕ ಚೌಹಾಣ್ ಶಿವಮೊಗ್ಗ, ಸಭಾಧ್ಯಕ್ಷರಾಗಿ ರಾಕೇಶ್ ಬಸವರಾಜ ಅಂಬರಶೆಟ್ಟಿ ಬೆಳಗಾವಿ, ಉಪ ಸಭಾಧ್ಯಕ್ಷರಾಗಿ ಗಣೇಶ ವಿ.ಪಿ ಹಾಸನ , ಪ್ರಧಾನಮಂತ್ರಿಯಾಗಿ ರವಿಕುಮಾರ್ ರಾಮನಗರ , ವಿರೋಧಪಕ್ಷದ ನಾಯಕಿಯಾಗಿ ವರ್ಷ ಹಾಸನ , ಗೃಹಸಚಿವರಾಗಿ ಚೇತನ್ ಬಿ.ಎಚ್ ಮಂಡ್ಯ, ರಕ್ಷಣಾ ಸಚಿವರಾಗಿ ಮೋಕ್ಷಿತ್ ಎಸ್. ಬಂಗೇರಾ ದಕ್ಷಿಣಕನ್ನಡ , ಸಂಸದೀಯ ವ್ಯವಹಾರಗಳ ಸಚಿವೆಯಾಗಿ ನವ್ಯಶ್ರೀ ಸಿ. ಬಳ್ಳಾರಿ, ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಚೈತ್ರ ಜೆ., ಚಿಕ್ಕಬಳ್ಳಾಪುರ, ಸಾರಿಗೆ ಮತ್ತು ಸಂಪರ್ಕ ಖಾತೆ ಸಚಿವರಾಗಿ ವಿ. ಹರಿ ಬೆಂಗಳೂರು ದಕ್ಷಿಣ ಪಾಲ್ಗೊಂಡಿದ್ದರು.

ಈ ಅಣುಕು ಸಂಸತ್ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಸಂಖ್ಯೆ ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಉಪನ್ಯಾಸಕ ಗಣಪತಿ, ಸತ್ಯನಾರಾಯಣ್, ಡಯಟ್ ಪ್ರಾಚಾರ್ಯರಾದ ಬಿಂಬಾ, ಹಿರಿಯ ಉಪನ್ಯಾಸಕ ಡಾ.ಹರಿಪ್ರಸಾದ್, ಸಂಸದೀಯ ವ್ಯವಹಾರಗಳ ಸಚಿವಾಲಯದ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನಿ ಮಹಿಳೆಯರ ರಕ್ಷಣೆ ಬಗ್ಗೆ ಯಾಕೆ ಮಾತನಾಡಲ್ಲ?

ರಾಜ್ಯದಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯ ನಡೀತಾ ಬಂದಿದೆ. ಹೆಣ್ಣಿನ ರಕ್ಣಣೆಗೆ ಏನು ಕ್ರಮ ವಹಿಸಲಾಗಿದೆ ಎಂದು ವಿರೋಧ ಪಕ್ಷದ ಸದಸ್ಯೆ ಚಿತ್ರದುರ್ಗದ ಆರ್‌. ಆಯಿಷಾ ಅಡಳಿತ ಪಕ್ಷಕ್ಕೆ ಪ್ರಶ್ನಿಸಿದರು. ಶಿವಮೊಗ್ಗದ ಮೇಘನ್ ಆಡಳಿತ ಪಕ್ಷದ ಸಚಿವರಾಗಿ ಉತ್ತರಿಸಿ, ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಲಾಗಿದೆ. ಮಹಿಳೆಯರ ರಕ್ಷಣಗೆ ಸಹಾಯವಾಣಿ, ಪೊಲೀಸರು ಸದಾ ಸಿದ್ಧರಾಗಿದ್ದಾರೆ ಎಂದರು. ಗೃಹ ಸಚಿವರಾಗಿದ್ದ ಮಂಡ್ಯದ ಚೇತನ್ ಮಾತನಾಡಿ, ಮಹಿಳೆಯರ ರಕ್ಷಣೆಗೆ ಹಲವಾರು ಕಾಯ್ದೆಗಳು, ಭೇಟಿ ಬಚಾವೋ ಭೇಟಿ ಪಡಾಯೋ, ಮಹಿಳಾ ಶಕ್ತಿ ಕೇಂದ್ರಗಳು, ಪಡೆಗಳು, ಸಹಾಯವಾಣಿಗಳನ್ನು ತೆರೆಯಲಾಗಿದೆ ತಿಳಿಸಿದರು.

ಗಮನ ಸೆಳೆದ ಡೆಪ್ಯುಟಿ ಸ್ಪೀಕರ್ಸಭಾಧ್ಯಕ್ಷರ ವಿರಾಮದ ವೇಳೆ ಸದನ ಕಲಾಪ ಮುಂದುವರೆಸಿದ ಹಾಸನದ ಗಣೇಶ್ ವಿ.ಪಿ ತಮ್ಮ ವಿಶಿಷ್ಟ ವೈಖರಿ, ಭಾಷೆ, ದೇಹ ಭಾಷೆಯಿಂದ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಮೊಬೈಲ್ ಬಳಕೆ ಮಾಡುತ್ತಿದ್ದಾರೆಂದು ಸುಳ್ಳು ಹೇಳಿದ ಆಡಳಿತ ಪಕ್ಷದ ಸದಸ್ಯರನ್ನೇ ಸದನದಿಂದ ಅಮಾನತು ಮಾಡಿದರು. ಶೂನ್ಯ ವೇಳೆಯಲ್ಲಿ ವಕ್ಫ್ ಆಸ್ತಿಗೆ ಸಂಬಂದಿಸಿದ ವಿಷಯ, ಪರಿಶಿಷ್ಟ ಜಾತಿ ಮತ್ತು ಪ. ಪಂಗಡಗಳಿಗೆ ಒಳ ಮೀಸಲಾತಿ, ರಾಷ್ಟ್ರೀಯ ಶಿಕ್ಷಣ ನೀತಿ, ರಾಜ್ಯ ಶಿಕ್ಷಣ ನೀತಿ ಕುರಿತು ಚರ್ಚಿಸಲಾಯಿತು.

ಈ ಅಣಕು ಸಂಸತ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಶಿಸ್ತು, ಸಭ್ಯತೆ, ಸಂಸದೀಯ ಕಾರ್ಯವಿಧಾನಗಳ ಪಾಲನೆ, ವಿಷಯ ಮಂಡನೆ, ಅದರ ಗುಣಮಟ್ಟ, ವಿಷಯಗಳ ಆಯ್ಕೆ, ಭಾಷಣ ಶೈಲಿ, ಮೌಲಿಕ ಚರ್ಚೆ ಮತ್ತು ಗುಣಮಟ್ಟ, ಶ್ಲಾಘನೆ ಮತ್ತು ಸಾಧನೆ ಮುಂತಾದ ವಿಷಯಗಳ ಆಧಾರದ ಮೇಲೆ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

- ಸತ್ಯನಾರಾಯಣ್ ತೀರ್ಪುಗಾರರು

Share this article