ಹೂವಿನಹಡಗಲಿ: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು, ಸಂಸದ ಹಾಗೂ ಸಚಿವ ಸ್ಥಾನದಿಂದ ವಜಾಗೊಳಿಸಿ, ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ದಲಿತ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಈ ಸಂದರ್ಭರ್ದಲ್ಲಿ ಮಾತನಾಡಿದ ಹಲಗಿ ಸುರೇಶ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಸಭೆಯಲ್ಲಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಬಗ್ಗೆ ಗೇಲಿ ಮಾಡಿ ಅವಮಾನಿಸಿ ಮಾತನಾಡಿದ್ದಾರೆ. ಎಲ್ಲರಿಗೂ ಅಂಬೇಡ್ಕರ್ ಎನ್ನುವುದು ಫ್ಯಾಷನ್ ಆಗಿದೆ. ಎಲ್ಲರೂ ಅವರ ವ್ಯಸನಿಗಳಾಗಿದ್ದಾರೆ. ಅದರ ಬದಲು ದೇವರ ನಾಮ ಜಪಿಸಿದರೆ 7 ಜನ್ಮಗಳಿಗಾಗುವಷ್ಟು ಪುಣ್ಯ ಬಂದು, ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರನ್ನು ಈ ದೇಶದ ಕಾನೂನುಗಳು ರಚನೆಯಾಗುವ ಪವಿತ್ರ ಸ್ಥಳ ಗರ್ಭಗುಡಿಯಾದ ರಾಜ್ಯಸಭೆಯಲ್ಲಿ ಅವಮಾನ ಮಾಡಿದ್ದಾರೆ ಎಂದರು.
ಅಮಿತ್ ಶಾ ಅವರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸಿ ಸಂಸದ ಸ್ಥಾನದಿಂದ ಅನರ್ಹಗೊಳಿಸಿ "ದೇಶದ್ರೋಹ ಪ್ರಕರಣ " ದಾಖಲಿಸುವಂತೆ ಒತ್ತಾಯಿಸುತ್ತಿದ್ದೇವೆಂದು ಹೇಳಿದರು.
ಭಾರತ ದಲಿತ ಹಕ್ಕುಗಳ ಆಂದೋಲನದ ಅಧ್ಯಕ್ಷ ಎಸ್.ನಿಂಗರಾಜ, ಸಿಂ.ಹೊನ್ನಪ್ಪ, ಛಲವಾದಿ ಧ್ಯಾಮಪ್ಪ, ದೇವೇಂದ್ರಪ್ಪ, ಎಚ್.ದಂಡೆಮ್ಮ, ಭರಮಪ್ಪ, ಎ.ರಮೇಶ, ಹೊಳಗುಂದಿ ವಿಜಯಕುಮಾರ, ಮರಿಯಪ್ಪ, ಮುಕ್ಕುಂದಗೌಡ ಇದ್ದರು.