ಅಂಬೇಡ್ಕರ್‌ಗೆ ನಿಂದಿಸಿದ ಅಮಿತ್ ಶಾ ರಾಜೀನಾಮೆ ನೀಡಲಿ: ಡಾ.ಪ್ರಭಾ

KannadaprabhaNewsNetwork | Published : Dec 25, 2024 12:45 AM

ಸಾರಾಂಶ

ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರನ್ನು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಸಂಜೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟಿಸಿದರು.

- ಕೇಂದ್ರ ಗೃಹ ಸಚಿವರ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರನ್ನು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಸಂಜೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟಿಸಿದರು.

ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಲಾಯಿತು. ಅಲ್ಲದೇ, ಶಾ ರಾಜೀನಾಮೆಗೆ ತಾಕೀತು ಮಾಡಿ, ಜೈ ಭೀಮ್.. ಜೈ ಜೈ ಭೀಮ್‌, ಜೈ ಸಂವಿಧಾನ ಎಂದು ಘೋಷಣೆ ಮೊಳಗಿಸಿದರು.

ಸಂಸದೆ ಡಾ.ಪ್ರಭಾ ಮಾತನಾಡಿ, ದೇಶಾದ್ಯಂತ ನ.27ರಂದು 75ನೇ ಸಂವಿಧಾನ ದಿನ ಆಚರಿಸಲಾಗಿದೆ. ಲೋಕಸಭೆ, ರಾಜ್ಯಸಭೆಯಲ್ಲಿ ತಲಾ 2 ದಿನ ಸಂವಿಧಾನ, ರಚನೆ, ನೀಡಿರುವ ಹಕ್ಕು, ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಸದಸ್ಯರಿಗೆ ಅಭಿಪ್ರಾಯ ತಿಳಿಸುವ ಅವಕಾಶ ನೀಡಲಾಗಿತ್ತು. ಆಗ ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿ ಅಂಬೇಡ್ಕರ್ ಅಂಬೇಡ್ಕರ್ ಅಂತ ಜಪಿಸಿದರೆ 7 ಜನ್ಮಕ್ಕೂ ಸ್ವರ್ಗ ಸಿಗುತ್ತದೆಯೇನು ಎಂದು ಹೇಳಿಕೆ ನೀಡಿದ್ದು ಖಂಡನೀಯವಾದುದು ಎಂದರು.

ರಾಷ್ಟ್ರಪತಿಯವರಿಗೂ ಅಮಿತ್ ಶಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪತ್ರ ಬರೆಯಲಾಗಿದೆ. ಕಾಂಗ್ರೆಸ್‌ನ 99 ಸಂಸದರು ಎಲ್ಲ ಕ್ಷೇತ್ರದಲ್ಲೂ ಹೋರಾಟ ನಡೆಸಿದ್ದೇವೆ. ಜನತೆ ಮುಂದೆ ಬಹಿರಂಗ ಕ್ಷಮೆ ಕೇಳುವವರೆಗೂ ಕಾಂಗ್ರೆಸ್‌ ಹೋರಾಟ ನಿಲ್ಲದು ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ವಿಶ್ವಕ್ಕೆ ಬಹುದೊಡ್ಡ ಸಂವಿಧಾನ ನೀಡಿದ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಹಾಗೂ ರಾಜ್ಯದಲ್ಲಿ ವಿಪ ಸದಸ್ಯ ಸಿ.ಟಿ.ರವಿ ಸದನದಲ್ಲಿ ಮಹಿಳಾ ಸಚಿವೆ ಬಗ್ಗೆ ನೀಡಿರುವ ಹೇಳಿಕೆಗಳನ್ನು ನೋಡಿದರೆ ಬಿಜೆಪಿಯವರಿಗೆ ಸಂವಿಧಾನ, ಮಹಿಳೆಯರ ಬಗ್ಗೆ ಗೌರವವೇ ಇಲ್ಲವೆಂಬುದು ಸ್ಪಷ್ಟವಾಗುತ್ತದೆ ಎಂದರು.

ಪಕ್ಷದ ಮುಖಂಡರಾದ ಮೇಯರ್ ಕೆ.ಚಮನ್ ಸಾಬ್‌, ಉಪ ಮೇಯರ್ ಸೋಗಿ ಶಾಂತಕುಮಾರ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ ಮಂಜುನಾಥ, ಆಶಾ ಉಮೇಶ, ಸವಿತಾ ಗಣೇಶ ಹುಲ್ಮನಿ, ಮೀನಾಕ್ಷಿ ಜಗದೀಶ, ಜಿ.ಎಸ್.ಮಂಜುನಾಥ ಗಡಿಗುಡಾಳ, ಅಬ್ದುಲ್ ಲತೀಫ್‌, ಎ.ನಾಗರಾಜ, ಎಲ್.ಎಂ.ಎಚ್.ಸಾಗರ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಎಸ್.ಮಲ್ಲಿಕಾರ್ಜುನ, ಕೆ.ಜಿ.ಶಿವಕುಮಾರ, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ, ಸುಷ್ಮಾ ಪಾಟೀಲ್, ಕವಿತಾ ಚಂದ್ರಶೇಖರ, ಲಿಂಗರಾಜ, ಕೇರಂ ವಿ.ಗಣೇಶ, ಶಾಮನೂರು ಟಿ.ಬಸವರಾಜ, ಎಸ್.ಎಸ್.ಗಿರೀಶ, ಡೋಲಿ ಚಂದ್ರು, ಶುಭಮಂಗಳ, ಕಾವ್ಯ ಇತರರು ಇದ್ದರು.

- - -

ಟಾಪ್‌ ಕೋಟ್‌ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದಲೇ ದೇಶದ ಎಲ್ಲರಿಗೂ ಮತದಾನದ ಹಕ್ಕು ಸಿಕ್ಕಿದೆ. ಒಳ್ಳೆಯ ಪ್ರತಿನಿಧಿ ಆಯ್ಕೆ ಮಾಡುವ, ಒಳ್ಳೆಯ ಅಭಿವೃದ್ಧಿ ಕೆಲಸ, ಮೂಲಸೌಲಭ್ಯ, ಹಕ್ಕುಗಳು ಸಿಕ್ಕಿವೆ. ಅಂತಹ ಸೌಲಭ್ಯ, ಹಕ್ಕುಗಳನ್ನು ನೀಡಿರುವ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಅವಮಾನ ಆಗುವಂತಹ ಹೇಳಿಕೆ ನೀಡಿದ್ದನ್ನು ದೇಶದ ಸಮಸ್ತರೂ ವಿರೋಧಿಸಬೇಕು

- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ

- - - -24ಕೆಡಿವಿಜಿ8, 9:

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ದಾವಣಗೆರೆಯಲ್ಲಿ ಸಂಸದೆ ಡಾ.ಪ್ರಭಾ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟಿಸಿದರು.

Share this article