- ಗಣರಾಜ್ಯೋತ್ಸವದಂದು ೩೨ನೇ ಉಚಿತ ನೇತ್ರ, ಶಸ್ತ್ರ ಚಿಕಿತ್ಸಾ ಶಿಬಿರ
೧೯೫೦ರ ಜನವರಿ ೨೬ರಂದು ಜಾರಿಗೆ ಬಂದ ಭಾರತೀಯ ಸಂವಿಧಾನ ದೇಶವನ್ನು ಸ್ವತಂತ್ರ್ಯ ಸಾರ್ವಭೌಮ ಹಾಗೂ ಸಂವಿಧಾನಬದ್ಧ ಗಣರಾಜ್ಯವನ್ನಾಗಿ ರೂಪಿಸಿದೆ ಎಂದು ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ತಿಳಿಸಿದರು.
ದೇಶದ ಅತ್ಯಂತ ಮಹತ್ವದ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವದ ಅಂಗವಾಗಿ ಬಸರಿಕಟ್ಟೆಯ ಶ್ರೀ ಸದ್ಗುರು ಸುವರ್ಣ ಸಭಾಭವನದಲ್ಲಿ ಅಮ್ಮ ಫೌಂಡೇಶನ್ ತುಮಕಾನೆ ಹಾಗೂ ಉಡುಪಿ ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ನಡೆದ ೩೨ನೇ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಆರೋಗ್ಯ ಮತ್ತು ಶಿಕ್ಷಣ ಎಲ್ಲ ನಾಗರಿಕರಿಗೂ ಲಭ್ಯವಾಗಬೇಕು ಎಂಬ ತತ್ವದಡಿ ಅಮ್ಮ ಫೌಂಡೇಶನ್ ಸಮಾಜಮುಖಿ ಸೇವೆ ನಡೆಸುತ್ತಿದೆ ಎಂದರು.
ಸಹಾಯ ಹಾಗೂ ದಾನ ನಿಜವಾದ ಅಗತ್ಯವಿರುವವರಿಗೆ ಮಾತ್ರ ತಲುಪಬೇಕು ಎಂಬುದು ಅತ್ಯಂತ ಮಹತ್ವದ ವಿಷಯ ಎಂದು ಉಲ್ಲೇಖಿಸಿದ ಅವರು, ಹಸಿದವನಿಗೆ ನೀಡುವ ಒಂದು ಮುಷ್ಟಿ ಅನ್ನ ಜೀವಮಾನಪೂರ್ತಿ ನೆನಪಾಗುತ್ತದೆ. ಆದರೆ ಅಗತ್ಯವಿಲ್ಲದವರಿಗೆ ಒತ್ತಾಯದಿಂದ ನೀಡುವ ಸಹಾಯ ಭಾರವಾಗಬಹುದು ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳ ಅಗತ್ಯತೆ ವಿವರಿಸಿದ ಅವರು, ಕಾಲಾಭಾವ, ಆರ್ಥಿಕ ಸಂಕಷ್ಟ ಮತ್ತು ಕೆಲಸದ ಒತ್ತಡದ ಕಾರಣದಿಂದ ಅನೇಕರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮ ಗ್ರಾಮಗಳಲ್ಲಿ ನಡೆಯುವ ಉಚಿತ ಆರೋಗ್ಯ ಶಿಬಿರಗಳು ಜನಸಾಮಾನ್ಯರಿಗೆ ಸಮಯೋಚಿತ ಹಾಗೂ ಅರ್ಥಪೂರ್ಣ ನೆರವಾಗುತ್ತವೆ.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರಸಾದ್ ನೇತ್ರಾಲಯದ ವೈದ್ಯರು, ಅಮ್ಮ ಫೌಂಡೇಶನ್ ಸ್ವಯಂಸೇವಕರು ಹಾಗೂ ಎಲ್ಲಾ ಸಹಭಾಗಿಗಳಿಗೆ ಸುಧಾಕರ್ ಎಸ್. ಶೆಟ್ಟಿ ಧನ್ಯವಾದ ಸಲ್ಲಿಸಿದರು. ಈ ಶಿಬಿರದಲ್ಲಿ ಬಸರಿಕಟ್ಟೆ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ಭಾಗವಹಿಸಿ ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಸೇವೆ ಪಡೆದುಕೊಂಡರು.