ಕನ್ನಡಪ್ರಭ ವಾರ್ತೆ ಸಿದ್ದಾಪುರಶ್ರೀ ಚೌಡೇಶ್ವರಿ ದೇವಸ್ಥಾನದ 11ನೇ ವರ್ಷದ ವಾರ್ಷಿಕ ಮಹೋತ್ಸವವು ಬುಧವಾರ, ಗುರುವಾರ ವಿಜೃಂಭಣೆಯಿಂದ ನೆರವೇರಿತು. ಎರಡು ದಿನಗಳ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಬುಧವಾರ ಬೆಳಗ್ಗೆ ಗಣಪತಿ ಹೋಮದಿಂದ ಪ್ರಾರಂಭಗೊಂಡು ನಂತರ ಅಭಿಷೇಕ, ಅಲಂಕಾರ ಪೂಜೆ, ಪರಿವಾರ ಪೂಜೆ ಕಳಶ ಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಸಂಜೆ ಚೌಡೇಶ್ವರಿ ದೇವಿಯನ್ನು ಪೂರ್ಣ ಕಳಶ ಹಾಗೂ ವಾದ್ಯಮೇಳಗಳೊಂದಿಗೆ ಆರತಿಯನ್ನು ಅಮ್ಮತ್ತಿ ಮುಖ್ಯ ಬೀದಿಗಳ ಮೂಲಕ ದೇವಸ್ಥಾನಕ್ಕೆ ತರಲಾಯಿತು. ನಂತರ ಜಿಲ್ಲೆಯ ಮೂರು ಭಾಗಗಳ ಮಾರಿಯಮ್ಮ ದೇವಾಲಯದ ಪ್ರಮುಖರು ತಮ್ಮ ಕಾಣಿಕೆಗಳನ್ನು ಸಂಪ್ರದಾಯದ ಮೂಲಕ ಅಮ್ಮನಿಗೆ ಸಮರ್ಪಿಸಿದರು. ದೇವಿಯ ಧಾರ್ಮಿಕ ಕಾರ್ಯಕ್ರಮಗಳು ಮತ್ತು ನೃತ್ಯ ಭಕ್ತರನ್ನು ಆಕರ್ಷಿಸಿತು.ಗುರುವಾರ ಬೆಳಗ್ಗೆ ಚಂಡಿಕಾ ಹೋಮ, ಶತ್ರು ಸಂಹಾರ ಪೂಜೆ, ಮಹಾಪೂಜೆ, ಮಹಾನೈವೇದ್ಯ ಸೇರಿದಂತೆ ಪ್ರಮುಖ ಪೂಜೆಗಳು ನಡೆದವು. ಅಮ್ಮತ್ತಿಯ ಆರ್ಚಕಾರಾದ ಶ್ರೀ ಗುರುರಾಜ್ ಭಟ್ಟರ ನೇತೃತ್ವದಲ್ಲಿ ಪೂಜೆಗಳು ನೇರವೆರಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು. ವಾರ್ಷಿಕೋತ್ಸವದ ಭಾಗವಾಗಿ ಎರಡು ದಿನಗಳ ಕಾಲ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ನಡೆದವು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಹೆಚ್ ಕೆ.ಶ್ರೀನಿವಾಸ ಸೇರಿದಂತೆ ಆಡಳಿತ ಮಂಡಳಿ ಸದಸ್ಯರುಗಳು ಊರಿನ ಪ್ರಮುಖರು ಇದ್ದರು.