ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಗೆ ದುಡಿದಂತಹ 11 ಜನರಲ್ಲಿ ಒಬ್ಬರು ಅಚ್ಚರಿಯ ಅಭ್ಯರ್ಥಿಯಾಗುತ್ತಾರೆ. ಆದರೆ, ಅಭ್ಯರ್ಥಿಯ ಆಯ್ಕೆಯಾಗಿದ್ದರೂ ಈಗಲೇ ಹೆಸರನ್ನು ಬಹಿರಂಗ ಪಡಿಸಲ್ಲ ಎಂದು ಸಂಸದ ಸಿದ್ದೇಶ್ವರ ವಿರುದ್ಧ ಸಿಡಿದೆದ್ದ ಗುಂಪಿನ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.ನಗರದಲ್ಲಿ ಉತ್ತರ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ ನಿವಾಸದಲ್ಲಿ ಬಿಜೆಪಿಯ ಅತೃಪ್ತ ಮಾಜಿ ಸಚಿವರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಮುಖಂಡರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಕ್ಷೇತ್ರಕ್ಕೆ ನಮ್ಮೆಲ್ಲರ ಆಯ್ಕೆಯ ಅಭ್ಯರ್ಥಿ ನಿಲ್ಲುವುದಂತೂ ಸ್ಪಷ್ಟ. ಆದರೆ, ಅಭ್ಯರ್ಥಿ ಆಯ್ಕೆಯಾಗಿದ್ದರೂ ಸಹ ಈಗಲೇ ಹೆಸರು ಬಹಿರಂಗಪಡಿಸಲ್ಲ ಎಂದರು.
ಮಠಾಧೀಶರ ದರ್ಶನ ಮಾಡಿ, ಅಭ್ಯರ್ಥಿ ಘೋಷಣೆ!ದಾವಣಗೆರೆ: ಲೋಕಿಕೆರೆ ನಾಗರಾಜ ನಿವಾಸದಲ್ಲಿ ಗುರುವಾರ ಸಂಜೆ ನಡೆದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿರುದ್ಧ ಬಂಡಾಯ ಅಭ್ಯರ್ಥಿ ಯನ್ನು ಕಣಕ್ಕಿಳಿಸಲು ಒಮ್ಮತದ ತೀರ್ಮಾನವನ್ನು ಅಸಮಾಧಾನಗೊಂಡ ಗುಂಪಿನ ನಾಯಕರು ಕೈಗೊಂಡಿದ್ದಾರೆ.
ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ, ವಿ.ಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಬಿ.ಜಿ.ರವಿಕುಮಾರ್, ಪರಾಜಿತ ಅಭ್ಯರ್ಥಿಗಳಾದ ಲೋಕಿಕೆರೆ ನಾಗರಾಜ, ಬಿ.ಜಿ.ಅಜಯ ಕುಮಾರ, ಮಾಡಾಳ ಮಲ್ಲಿಕಾರ್ಜುನ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಎನ್.ಕಲ್ಲೇಶ ಇತರರು ಸುದೀರ್ಘ ಚರ್ಚೆ ನಂತರ ಬಂಡಾಯದ ಕಹಳೆ ಮೊಳಗಿಸಲು ನಿರ್ಧರಿಸಿದ್ದಾರೆ.ಲೋಕಸಭೆ ಚುನಾವಣೆಗೆ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಜಿಲ್ಲಾದ್ಯಂತ ಎಲ್ಲಾ ಮಠಾಧೀಶರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದ ನಂತರವಷ್ಟೇ ಅಭ್ಯರ್ಥಿಯ ಹೆಸರನ್ನು ಘೋಷಿಸಲು ಸರ್ವರೂ ತೀರ್ಮಾನಿಸಿದರು.
ನಾವು ಅಭ್ಯರ್ಥಿ ನಿಲ್ಲಿಸೋದು ನಿಶ್ಚಿತ: ರೇಣುಕಾಚಾರ್ಯಕ್ಷೇತ್ರಕ್ಕೆ ನೂರಕ್ಕೆ ನೂರು ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸುತ್ತೇವೆ. ಚುನಾವಣೆಯಲ್ಲಿ ಗೆದ್ದ ನಂತರ ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸುವ ಕೆಲಸ ಮಾಡು ತ್ತೇವೆ ಎಂದುಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ನಮ್ಮ ನಿರ್ಧಾರ ಅಚಲವಾಗಿದ್ದು, ಶೀಘ್ರವೇ ಎಲ್ಲಾ ಮಠಾಧೀಶರ ಅಭಿಪ್ರಾಯ ಪಡೆದು, ಅಭ್ಯರ್ಥಿ ಕಣಕ್ಕಿಳಿಸುತ್ತೇವೆ. ನಾವೆಲ್ಲರೂ ಒಟ್ಟಾಗಿಯೇ ಈ ತೀರ್ಮಾನ ಮಾಡಿದ್ದೇವೆ ಎಂದರು.ರಾಜ್ಯ, ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ, ಕಾರ್ಯಕರ್ತರ ಭಾವನೆಯನ್ನು ಹೇಳಿದ್ದೇವೆ. ಹೋಳಿ ಹುಣ್ಣಿಮೆಯ ನಂತರ ಪ್ರವಾಸ ಮಾಡುತ್ತೇವೆ. ವಿಧಾನಸಭಾ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹಿಸಿ, ನಮ್ಮಲ್ಲಿರುವ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ. ನರೇಂದ್ರ ಮೋದಿ ಕೈಬಲಪಡಿಸುವ ಕೆಲಸ ಮಾಡುತ್ತೇವೆ ಎಂದರು. ಮೋದಿ ಪ್ರಧಾನಿಯಾಗಬೇಕು, ಅಭ್ಯರ್ಥಿ ಬದಲಾಗಬೇಕು: ರೆಡ್ಡಿ
ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ, ನಮ್ಮ ಉದ್ದೇಶ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ಆದರೆ, ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಮೊದಲು ಬದಲಾವಣೆ ಮಾಡಬೇಕು. ನಮ್ಮ ನಾಯಕರು ಇಲ್ಲಿನ ಅಭ್ಯರ್ಥಿಯನ್ನು ಬದಲಾವಣೆ ಮಾಡುತ್ತಾರೆಂಬ ವಿಶ್ವಾಸವಿದೆ. ಕೆಲವು ಕಡೆ ಅಭ್ಯರ್ಥಿಗಳ ಬದಲಾವಣೆ ಮಾಡಿದ ನಿದರ್ಶನವಿದೆ. ಇಲ್ಲಿಯೂ ಅಭ್ಯರ್ಥಿ ಬದಲಾಗಬೇಕೆಂಬ ಬೇಡಿಕೆ ನಮ್ಮದು ಎಂದರು.