ಪಾರಂಪರಿಕ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ: ಡಾ. ಬಾಲಕೃಷ್ಣ

KannadaprabhaNewsNetwork |  
Published : Dec 19, 2025, 02:30 AM IST
ಕಾರ್ಯಕ್ರಮವನ್ನು ಉದ್ಘಾಟಿಸಿದರು.  | Kannada Prabha

ಸಾರಾಂಶ

ಹಸ್ತಪ್ರತಿ, ತಾಳೆಗರಿ, ಮರದ ಮೇಲಿನ ಕೆತ್ತನೆ, ಬಟ್ಟೆಗಳ ಮೇಲಿನ ಬರಹ ಮೊದಲಾದವುಗಳನ್ನು ಸಂರಕ್ಷಿಸುವ ಉದ್ಧೇಶದಿಂದ ರಾಜ್ಯ ಸರ್ಕಾರ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಜ್ಞಾನ ಭಂಡಾರ ಹಸ್ತಪ್ರತಿ ವಿಧೇಯಕ- 2025 ಮಂಡಿಸಲು ಸಜ್ಜಾಗಿರುವುದು ಸ್ವಾಗತಾರ್ಹ.

ಗದಗ: ಪಾರಂಪರಿಕ ಪ್ರವಾಸೋದ್ಯಮಕ್ಕೆ ಭವಿಷ್ಯದಲ್ಲಿ ವಿಪುಲ ಅವಕಾಶಗಳಿದ್ದು, ಯುವ ಸಮೂಹ ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಇತಿಹಾಸತಜ್ಞ ಡಾ. ಬಾಲಕೃಷ್ಣ ಹೆಗಡೆ ತಿಳಿಸಿದರು.

ಗದಗ ಸಹಕಾರಿ ಜವಳಿ ಗಿರಣಿಯ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿ ಹಾಗೂ ಗದುಗಿನ ಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಐತಿಹಾಸಿಕ ಪರಂಪರೆ ಉಳಿಸಿ ಹಾಗೂ ನಾಣ್ಯ- ನೋಟುಗಳು, ಅಂಚೆ ಚೀಟಿಗಳ ಪ್ರದರ್ಶನ ಪ್ರಾಚ್ಯ ಸ್ಮಾರಕಗಳ ಪಿಪಿಟಿ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಿಯು ವಿದ್ಯಾರ್ಥಿಗಳಿಗೆ ತಾವು ಮುಂದೆ ಏನು ಮಾಡಬೇಕೆಂದು ತೀರ್ಮಾನಿಸುವಲ್ಲಿ ಗೊಂದಲಕ್ಕೀಡಾಗುವುದು ಸಹಜ. ಇಂಥ ಸಂದರ್ಭದಲ್ಲಿ ತಜ್ಞರ, ಉಪನ್ಯಾಸಕರ ಸಲಹೆ, ಮಾರ್ಗದರ್ಶನ ಪಡೆದು ಎಚ್ಚರಿಕೆಯ ಹೆಜ್ಜೆ ಇಡುವುದು ಮುಖ್ಯವಾಗಿರುತ್ತದೆ ಎಂದ ಅವರು, ಬದುಕಿನಲ್ಲಿ ಗೆಲ್ಲಲು ಕೆಲವು ಸಂಘರ್ಷಕ್ಕಿಂತಲೂ ಸಂಧಾನವೂ ಮುಖ್ಯವಾಗಿದ್ದು, ಸಂಧಾನ ಯಾವತ್ತೂ ಸೋಲುವುದಿಲ್ಲ ಎಂದರು.

ಕೇಂದ್ರ ರಾಜ್ಯ ಸರ್ಕಾರಗಳು ಪಾರಂಪರಿಕ, ಸಾಂಸ್ಕೃತಿಕ ಪ್ರವಾಸೋದ್ಯಮಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿವೆ. ಆ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರಿಗೆ ತರಬೇತಿ, ಹಣಕಾಸಿನ ನೆರವು ಇತ್ಯಾದಿ ಸೌಲಭ್ಯಗಳನ್ನು ನೀಡುವುದರ ಮೂಲಕ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತಿದೆ ಎಂದರು.

ಹಸ್ತಪ್ರತಿ, ತಾಳೆಗರಿ, ಮರದ ಮೇಲಿನ ಕೆತ್ತನೆ, ಬಟ್ಟೆಗಳ ಮೇಲಿನ ಬರಹ ಮೊದಲಾದವುಗಳನ್ನು ಸಂರಕ್ಷಿಸುವ ಉದ್ಧೇಶದಿಂದ ರಾಜ್ಯ ಸರ್ಕಾರ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಜ್ಞಾನ ಭಂಡಾರ ಹಸ್ತಪ್ರತಿ ವಿಧೇಯಕ- 2025 ಮಂಡಿಸಲು ಸಜ್ಜಾಗಿರುವುದು ಸ್ವಾತತಾರ್ಹ ಎಂದ ಅವರು, ಅತ್ಯಂತ ಮಹತ್ವಾಕಾಂಕ್ಷೆಯಿಂದ ಶಿವಮೊಗ್ಗದಲ್ಲಿ ಸ್ಥಾಪಿತವಾದ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದಂತೆ ಆಗಬಾರದು ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಶೈಕ್ಷಣಿಕ ಸಲಹಾ ಸಮಿತಿಯ ಅಧ್ಯಕ್ಷ ಡಿ.ಬಿ. ಓದುಗೌಡರ್ ಮಾತನಾಡಿ, ಯಾವುದೇ ಕೆಲಸವನ್ನು ಗಟ್ಟಿ ನಿರ್ಧಾರದಿಂದ ಮಾಡಿದರೆ ಆ ಕೆಲಸ ಯಶಸ್ಸು ಕಾಣುತ್ತದೆ. ಐತಿಹಾಸಿಕ ಪರಂಪರೆಯನ್ನು ಉಳಿಸಿ, ಬೆಳೆಸಿ ಐತಿಹಾಸಿಕ ಸ್ಮಾರಕಗಳ ಮಹತ್ವವನ್ನು ಅರಿಯುವುದರ ಮೂಲಕ ವಿದ್ಯಾರ್ಥಿಗಳು ನಾಡಿನ ಭವ್ಯ ಪರಂಪರೆಗೆ ಮತ್ತು ಸಂಸ್ಕೃತಿಗೆ ಘನತೆ, ಗೌರವಗಳನ್ನು ತರಬೇಕು ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಅರ್ಜುನ ಗೊಳಸಂಗಿ, ವಿದ್ಯಾರ್ಥಿಗಳು ಪ್ರಜ್ಞೆ ಮತ್ತು ಪರಿಸರವನ್ನು ಮನಗಂಡು ಕಾರ್ಯೋನ್ಮುಖರಾಗಬೇಕು. ಇತಿಹಾಸ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಪರಿಜ್ಞಾನ ಹೊಂದಿರಬೇಕು ಎಂದರು.

ಅಕಾಡೆಮಿಯ ರಾಜ್ಯ ಕಾ.ಕಾ. ಮಂಡಳಿಯ ಸದಸ್ಯ ಡಾ. ದತ್ತಪ್ರಸನ್ನ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿ, ಅಕಾಡೆಮಿಯು ಕಳೆದ ಅನೇಕ ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಸ್ಥಳೀಯ ಇತಿಹಾಸ, ಸಂಸ್ಕೃತಿ, ಪರಂಪರೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.

ಅಕಾಡೆಮಿಯ ಜಿಲ್ಲಾಧ್ಯಕ್ಷ ಡಾ. ವೈ.ಆರ್. ಬೇಲೇರಿ, ಸಹ ಕಾರ್ಯದರ್ಶಿ ಡಾ. ಎಸ್.ಎಂ. ಮಠ, ಐತಿಹಾಸಿಕ ಪರಂಪರೆ ಉಳಿಸಿ ಹಾಗೂ ಐತಿಹಾಸಿಕ ಸ್ಮಾರಕಗಳ ಮಹತ್ವ ಕುರಿತು ಪಿಪಿಟಿ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಕೆ.ಎಂ. ಗರಗ ಸ್ವಾಗತಿಸಿದರು. ರಾಮಚಂದ್ರ ಮಿಟ್ಟಿಮನಿ, ಉಪನ್ಯಾಸಕರಾದ ಕೃಷ್ಣ ರವಳೊಜಿ, ಮಹಾಲಕ್ಷ್ಮೀ ಹಿರೇಮಠ, ಸಚಿನ ಸತ್ಯರಡ್ಡಿ, ಮಲ್ಲಿಕಾರ್ಜುನ ಬಾಲಪ್ಪನವರ್, ವಿದ್ಯಾರ್ಥಿ ಮುಖಂಡರಾದ ದಿವ್ಯಾ ಅಗಸನಕೊಪ್ಪ, ಗಣೇಶ್ ಬ್ಯಾಡಗಿ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು