ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವ ಅಂಗವಾಗಿ 22ರಿಂದ 24ರ ವರೆಗೆ ದೇವಾಲಯದಲ್ಲಿ ನವದುರ್ಗಾ ಚಂಡಿಕಾ ಹೋಮ, ಏಕಾದಶ ರುದ್ರಹೋಮ ಸೇರಿದಂತೆ ಇನ್ನಿತರ ಪೂಜೆಗಳು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ತಿಳಿಸಿದ್ದಾರೆ.ದೇವಾಲಯ ಸಮಿತಿ ನೇತೃತ್ವದಲ್ಲಿ ಬ್ರಾಹ್ಮಣ ಸಮಾಜ, ದೇವಿ ಬಳಗ, ಮಾತಾ ಬಳಗದ ಸಹಕಾರದೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಅಮೃತ ಮಹೋತ್ಸವ ಅಂಗವಾಗಿ 22ರಿಂದ ವೇದ ಬ್ರಹ್ಮ ಎಂ.ವಿ. ಕೃಷ್ಣಮೂರ್ತಿ ಮತ್ತು ಚಿತ್ರಕುಮಾರ್ ಭಟ್ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. 22ರಂದು ಸಂಜೆ 5.30ಕ್ಕೆ ಶುದ್ಧಿ ಪುಣ್ಯಃ, ಶ್ರೀಗಣಪತಿ ಪೂಜೆ, ಮಹಾ ಸಂಕಲ್ಪ, ಕಲಶಾರಾಧನೆ, ನವದುರ್ಗಾ ಚಂಡಿಕಾ ಪಾರಾಯಣ, ಮಂಡಲ ಆರಾಧನೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದೆ ಎಂದರು.23ರಂದು ಬೆಳಗ್ಗೆ 8 ಗಂಟೆಯಿಂದ ನವ ದುರ್ಗಾ ಚಂಡಿಕಾ ಹೋಮ, ಕನ್ನಿಕಾ ಪೂಜೆ, ನವ ಮುತ್ತೈದೆಯರ ಬಾಗಿನ ಪೂಜೆ, 12.30ಕ್ಕೆ ಪೂರ್ಣಾಹುತಿ, ಆವರಣ ಸೇವೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ನಂತರ ಅನ್ನಸಂತರ್ಪಣೆ, ಸಂಜೆ 6 ಗಂಟೆಯಿಂದ ದೀಪ ದುರ್ಗಾ ನಮಸ್ಕಾರ ಪೂಜೆ ಜರುಗಲಿದೆ ಎಂದು ಶ್ರೀನಿವಾಸ್ ಮಾಹಿತಿ ನೀಡಿದರು.
24ರಂದು ಬೆಳಗ್ಗೆ 7 ಗಂಟೆಯಿಂದ ಶ್ರೀ ಸೋಮೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ಕಲಶಾರಾಧನೆ, ಶತರುದ್ರಾಭಿಷೇಕ, ಏಕಾದಶ ರುದ್ರಹೋಮ, ಮಧ್ಯಾಹ್ನ ಪೂರ್ಣಾಹುತಿ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ಅಮೃತ ಮಹೋತ್ಸವ ಸಮಾರಂಭ ನಡೆಯಲಿದೆ. ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.ಮುಖ್ಯ ಭಾಷಣಕಾರರಾಗಿ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ಡಾ. ಮಂತರ್ ಗೌಡ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮತ್ತಿತರರು ಭಾಗವಹಿಸಲಿದ್ದಾರೆ. ಸಂಜೆ 6.30ರಿಂದ ಮೈಸೂರಿನ ರಾಘವೇಂದ್ರ ಆಚಾರ್ ಅವರಿಂದ ಭಕ್ತಿ ಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ದೇವಾಲಯ ಸಮಿತಿ ಕಾರ್ಯದರ್ಶಿ ಎಸ್.ಡಿ. ವಿಜೇತ್, ನಿರ್ದೇಶಕರಾದ ಶ್ಯಾಮ್‍ಸುಂದರ್, ಎಸ್.ಜೆ. ಜಯಂತ್, ರಾಜೇಶ್ ಪದ್ಮನಾಭ್, ಸಿ.ಎನ್. ಸತೀಶ್ ಇದ್ದರು.