ಗಮನ ಸೆಳೆದ ರೊಟ್ಟಿ ಮೆರವಣಿಗೆ

KannadaprabhaNewsNetwork | Updated : Dec 27 2023, 01:33 AM IST

ಸಾರಾಂಶ

ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಜಾತಿ, ಮತ, ಪಂಥಗಳನ್ನು ಬದಿಗಿಟ್ಟು ನಾವೆಲ್ಲ ಒಂದು ಎನ್ನುವ ಭಾವ ತಾಳಬೇಕು

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಲೋಕದಲ್ಲಿ ಬೇರೆ ಬೇರೆ ಧರ್ಮ, ಸಂಪ್ರದಾಯ, ಪರಂಪರೆ, ವಿಧಿವಿಧಾನಗಳು ಇರಬಹುದು. ಆದರೆ ದೇವರು ಒಬ್ಬನೆ ಇದ್ದಾನೆ. ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಜಾತಿ, ಮತ, ಪಂಥಗಳನ್ನು ಬದಿಗಿಟ್ಟು ನಾವೆಲ್ಲ ಒಂದು ಎನ್ನುವ ಭಾವ ತಾಳಬೇಕು. ಜಾತಿ ರಹಿತ ಸಮಾಜ ಶರಣರ ಆಶಯವಾಗಿದೆ. ವಿಶ್ವ ಬಂಧುತ್ವವನ್ನು ಹೊಂದಬೇಕೆಂದು ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು ಹೇಳಿದರು.

ಅವರು ಮಂಗಳವಾರ ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಶ್ರೀ ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಶ್ರೀಗಳವರ 38ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭದ ಪ್ರಯುಕ್ತ ಮಹಿಳಾ ಮಂಡಳದವರು ಆಯೋಜಿಸಿದ್ದ ರೊಟ್ಟಿ ಜಾತ್ರೆ ಮೆರವಣಿಗೆ ಕಾರ್ಯಕ್ರಮದಲ್ಲಿ ಅನ್ನಪೂಜೆ ನೆರವೇರಿಸಿ ಅವರು ಮಾತನಾಡಿ, ಎಲ್ಲರೂ ಒಂದಾಗಿ ಇರುವ ಮೂಲಕ ಜೀವನದಲ್ಲಿ ಶಾಂತಿ, ನೆಮ್ಮದಿ, ಸುಖ ಕಾಣಬೇಕು. ಜಾತಿ, ಧರ್ಮ ಬಿಟ್ಟು ಬದುಕಬೇಕು. ಅದುವೇ ನಿಜವಾದ ಜೀವನವಾಗಿದೆ. ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಸೌಹಾರ್ಧಯುತ ಬದುಕು ಬಾಳಬೇಕೆಂದರು.

ಶ್ರೀಗುರುಬಸವ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣರ ಆಶಯದಂತೆ ನಾವೆಲ್ಲ ನಡೆದುಕೊಂಡರೆ ಜೀವನ ಹಸನಾಗುತ್ತದೆ. ಜೀವನದಲ್ಲಿ ಅತ್ಯಂತ ಸುಖಕರ ಬಾಳು ಬಾಳಲು ಶರಣರ ತತ್ವ ಸಿದ್ಧಾಂತಗಳು, ವಚನ ಸಾರ ಸಹಕಾರಿಯಾಗಿವೆ ಎಂದರು.

ಪಟ್ಟಸಾಲಿ ನೇಕಾರ ಸಮಾಜದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ, ಭಾಗ್ಯಾ ಉದ್ನೂರ ನೇತೃತ್ವದಲ್ಲಿ ಚಕ್ಕಡಿ ಮೇಲೆ ನಡೆದ ರೊಟ್ಟಿ ಜಾತ್ರೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಕಾರ್ಯಕ್ರಮದಲ್ಲಿ ಭಾಗ್ಯಾ ಉದ್ನೂರ, ದ್ರಾಕ್ಷಾಯಿಣಿ ಗೊಬ್ಬಿ, ಗಿರೀಜಾ ಕಲ್ಯಾಣಿ, ಶಶಿಕಲಾ ಭಾವಿ, ದೀಪಾ ಉಂಕಿ, ಅನಿತಾ ಶಿರೋಳ, ಸುವರ್ಣಾ ಲಂಡುನ್ನವರ, ವೇದಾ ಶೀಪ್ರಿ, ಅನಸೂಯಾ ಅಲದಿ, ತಾರಾ ರೋಜಿ ಹಾಗೂ ಪಟ್ಟಸಾಲಿ ನೇಕಾರ ಸಮಾಜದ ಸಮಸ್ತ ಮಹಿಳೆಯರು ಇದ್ದರು.

Share this article