ಕಲಗಾರು ಲಕ್ಷ್ಮೀನಾರಾಯಣ ಹೆಗಡೆ
ಕಳೆದ ಎರಡು ಮೂರು ವರ್ಷಗಳಿಂದ ಅಲ್ಲೊಂದು ಇಲ್ಲೊಂದು ಮರಗಳಲ್ಲಿ ಮಾತ್ರ ಕಾಣಿಸುತ್ತಿದ್ದ ಮಾವಿನ ಹೂವು ಈ ವರ್ಷ ಮೈ ತುಂಬಿ ಬರಪೂರ ಪಸಲಿನ ನಿರೀಕ್ಷೆ ಮೂಡಿಸಿದೆ. ಮಲೆನಾಡಿನಲ್ಲಿ ಉಪ್ಪಿನ ಕಾಯಿ ತಯಾರಿಸಲು ಸೂಕ್ತವಾದ ರಸ್ತೆ ಅಂಚಿನ ಸಾಲು ಮರಗಳು, ಹೊಳೆ ಸಾಲಿನ ಮರಗಳು ಹೂ ಕಚ್ಚಿ ಮಿಡಿಯಾಗುವ ಲಕ್ಷಣ ಗೋಚರಿಸಿದೆ. ಆದರೆ ಇದೇ ಹೊತ್ತಿನಲ್ಲಿ ಮಾವಿನ ಮರಗಳು ಕೊಡಲಿ ಏಟಿಗೆ ಬಲಿಯಾಗುವ ಆತಂಕ ಎದುರಾಗಿದೆ.
ಹಿಂದಿನ ಕಾಲದಲ್ಲಿ ಮಲೆನಾಡ ಸಸ್ಯಹಾರಿ ಕುಟುಂಬಗಳಲ್ಲಿ ಅಪ್ಪೇ ಮಿಡಿ ಉಪ್ಪಿನಕಾಯಿಗೆ ಮಹತ್ವದ ಸ್ಥಾನವಿತ್ತು, ಪರಿಮಳದ ಅಪ್ಪೇ ಮಿಡಿ ಕೊಯ್ದು, ಚೆಟ್ಟು ಹಾಕಿ, ಉಪಿನ ನೀರು,ಮೆಣಸಿನ ಪುಡಿ, ಜೀರಿಗೆ, ಮೆಂತೆ, ಕಾಳು ಮೆಣಸಿನ ಪುಡಿಯ ರಸದಲ್ಲಿ ಸೇರಿಸಿ, ಕಾಜಿನ ಭರಣಿಗಳಲ್ಲಿ ತುಂಬಿಸಿ, ಹೊಗೆ ಅಟ್ಟದಲ್ಲಿ ಬೆಚ್ಚಗೆ ಇಟ್ಟರೆ ಮೂರು ನಾಲ್ಕು ವರ್ಷಗಳಾದರೂ ತಾಜಾತನ ಉಳಿದಿರುತ್ತಿತ್ತು. ಹಿಂದೆ ಪ್ರತಿ ವರ್ಷವೂ ಮಾವಿನ ಫಸಲಿಗೆ ಬರ ಇರುತ್ತಿರಲಿಲ್ಲ. ಜೀರಿಗೆ ಅಪ್ಪೆ ಮರ, ಮಿಡಿ ಮಾವಿನ ಮರ, ಕುಚಗಾಯಿ ಮರ, ಕಡಗಾಯಿ ಮರ ,ಸಾಸ್ವೆಮರ, ಹುಳಿ ಮರ ಎಂದು ಗುರುತಿಸಿಕೊಂಡ ಮಾವಿನ ಮರಗಳು ಹೇರಳವಾಗಿದ್ದವು. ಕುಶಲರು ಹಗ್ಗ, ದೋಟಿ, ಚೀಲ ಹಿಡಿದು ಮರ ಹತ್ತಿ ನಾಜೂಕಾಗಿ ಮಿಡಿಯ ಗೊಂಚಲು ಕೊಯ್ಯುತ್ತಿದ್ದರು.ಆದರೆ ಈಗ ಎಲ್ಲೆಡೆ ಉಪ್ಪಿನಕಾಯಿ ತಯಾರಿಕಾ ಘಟಕ ತಲೆ ಎತ್ತಿವೆ. ಘಟಕಗಳು ತೂಕದ ಲೆಕ್ಕದಲ್ಲಿ ಮಿಡಿ ಕೊಳ್ಳುತ್ತವೆ. ಮಾವಿನ ಮಿಡಿಯೂ ಲಾಭದಾಯಕ ಫಸಲಾಗಿ, ಹಣ ಗಳಿಕೆಯ ಮಾರ್ಗವಾಗಿದೆ. ಮಿಡಿ ಕೊಯ್ಯುವವರು ನಯ ನಾಜೂಕಿಲ್ಲದೆ ಮರದ ರೆಂಬೆ ಕಡಿದು ಹೆಚ್ಚೆಚ್ಚು ಮಿಡಿ ಸಂಗ್ರಹಿಸಲು ಶುರು ಮಾಡಿದ್ದಾರೆ. ಇದರಿಂದ ಸಹಜ ಫಸಲಿಗೆ ಧಕ್ಕೆಯಾಗಿದೆ. ನದಿ, ಹಳ್ಳದ ಅಂಚಿನಲ್ಲಿ, ರಸ್ತೆಯ ಬದಿ ಇರುವ ಮಾವಿನ ಮರಗಳು ರಕ್ಷಣೆ ಇಲ್ಲದೆ ಬಲಿಯಾಗುತ್ತಿದೆ.
ಜಾಗೃತಿ ಅಗತ್ಯ:ಮರಗಳ ರೆಂಬೆ ಕಡಿಯಲು ಏಪ್ರಿಲ್- ಮೇ ತಿಂಗಳು ಸಕಾಲ. ಕ್ರಮ ಪ್ರಕಾರ ಕತ್ತರಿಸಿದರೆ ಚೆನ್ನಾಗಿ ಹೊಸ ಚಿಗುರು ಮೂಡುತ್ತದೆ. ಆದರೆ ಫೆಬ್ರುವರಿ, ಮಾರ್ಚ್ ಅಪ್ಪೆಮಿಡಿ ಸಂಗ್ರಹ ಕಾಲ. ಆದರೆ ಮರದ ರೆಂಬೆ ಕತ್ತರಿಸಲು ಸೂಕ್ತ ಸಮಯವಲ್ಲ. ಅಕಾಲದಲ್ಲಿ ಮಾವಿನ ಮರದ ಹೆರೆ ಕತ್ತರಿಸಿದರೆ ಮರ ಚಿಗುರದೆ ಬೆಳವಣಿಗೆ ಕುಂಠಿತವಾಗಿ, ಮುಂದಿನ ಕೆಲ ವರ್ಷ ಫಲಸು ನೀಡುವುದಿಲ್ಲ.
ಮಾವಿನ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಬೇಕಿದೆ. ಮಿಡಿ ಕೊಯ್ಯುವವರು ಸ್ವಯಂ ನಿಯಂತ್ರಣದಿಂದ ಮರದ ರಕ್ಷಣೆಯ ಕ್ರಮ ಅನುಸರಿಸಿ, ಪ್ರತಿ ವರ್ಷವೂ ಮಾವಿನ ಫಲಸು ಬರುವಂತೆ ಮಾಡಬೇಕಿದೆ. ಅರಣ್ಯ ಇಲಾಖೆಯು ಕಾಡಿನ ಮರಗಳ ಜವಾಬ್ದಾರಿ ಮಾತ್ರ ತನ್ನದು ಎಂಬ ಧೋರಣೆ ಬದಲಿಸಿಕೊಂಡು, ಊರಂಚಿನ ಮಾವಿನ ಮರಗಳ ರಕ್ಷಣೆಗೂ ಅರಿವು ಮೂಡಿಸಿದರೆ, ಮಾವಿನ ಮರಗಳೂ ಉಳಿಯುತ್ತದೆ. ಅಪ್ಪೇ ಮಿಡಿಯೂ ದೊರಕುತ್ತದೆ.